ADVERTISEMENT

ಐಪಿಎಲ್‌ ಟಿಕೆಟ್: ಅಭಿಮಾನಿಗಳಿಗೆ ಲಾಠಿ ಏಟು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2023, 20:21 IST
Last Updated 16 ಏಪ್ರಿಲ್ 2023, 20:21 IST
ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್‌ ನಂಬರ್ 2ರ ಎದುರು ಭಾನುವಾರ ಸೇರಿದ್ದ ಜನ
ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್‌ ನಂಬರ್ 2ರ ಎದುರು ಭಾನುವಾರ ಸೇರಿದ್ದ ಜನ   

ಬೆಂಗಳೂರು: ‘ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯದ ಟಿಕೆಟ್ ಮಾರಲಾಗುತ್ತಿದೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದ ಪೋಸ್ಟ್ ನಂಬಿ ಕ್ರೀಡಾಂಗಣ ಎದುರು ಭಾನುವಾರ ಸೇರಿದ್ದ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು.

ಲಾಠಿ ಪ್ರಹಾರದಿಂದಾಗಿ ಕ್ರಿಕೆಟ್ ಅಭಿಮಾನಿಗಳು, ರಸ್ತೆಯಲ್ಲಿ ದಿಕ್ಕಾಪಾಲಾಗಿ ಓಡಿದರು. ಎಲ್ಲೆಂದರಲ್ಲಿ ಚಪ್ಪಲಿಗಳು ಬಿದ್ದಿದ್ದವು. ಲಾಠಿ ಏಟಿನಿಂದ ಕೆಲವರು ಗಾಯಗೊಂಡರು. ಅವರನ್ನು ಸ್ನೇಹಿತರೇ ಎತ್ತಿಕೊಂಡು ಸ್ಥಳದಿಂದ ಹೊರಟು ಹೋದರು. ಇನ್ನು ಹಲವರು, ಪೊಲೀಸರ ವರ್ತನೆಯನ್ನು ಖಂಡಿಸಿ ಧಿಕ್ಕಾರ ಕೂಗಿದರು.

‘ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಏಪ್ರಿಲ್ 17ರಂದು ಐಪಿಎಲ್ ಪಂದ್ಯ ನಡೆಯಲಿದೆ. ಇದರ ಟಿಕೆಟ್‌ಗಳನ್ನು ಕ್ರೀಡಾಂಗಣದ ಗೇಟ್‌ ನಂಬರ್ 2ರಲ್ಲಿ ಏಪ್ರಿಲ್ 16ರಂದು ಬೆಳಿಗ್ಗೆ 10.30 ಗಂಟೆಯಿಂದ ಮಾರಲಾಗುತ್ತದೆ. ಒಂದು ಟಿಕೆಟ್ ಬೆಲೆ ₹ 1,251’ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹರಿದಾಡಿತ್ತು.

ADVERTISEMENT

ನಿಜವೆಂದು ನಂಬಿದ್ದ ಎರಡು ಸಾವಿರಕ್ಕೂ ಹೆಚ್ಚು ಅಭಿಮಾನಿಗಳು, ಶನಿವಾರ ರಾತ್ರಿಯೇ ಗೇಟ್‌ ನಂಬರ್ 2ರ ಬಳಿ ಬಂದು ಸರದಿಯಲ್ಲಿ ನಿಂತಿದ್ದರು. ಕೆಲವರು ಸ್ಥಳದಲ್ಲೇ ಮಲಗಿ ರಾತ್ರಿ ಕಳೆದಿದ್ದರು. ನಸುಕಿನಿಂದ ಸರದಿ ಹೆಚ್ಚಾಗಿತ್ತು. ಬೆಳಿಗ್ಗೆ 10.30 ಗಂಟೆಯಾದರೂ ಗೇಟ್‌ ನಂಬರ್ 2ರ ಕೌಂಟರ್ ತೆರೆದಿರಲಿಲ್ಲ.

ಅಭಿಮಾನಿಗಳ ಸರದಿ ನೋಡಿ ಕ್ರೀಡಾಂಗಣದ ಸಿಬ್ಬಂದಿಯೇ ಆಶ್ಚರ್ಯಗೊಂಡಿದ್ದರು. ‘ಹಲವು ದಿನಗಳ ಹಿಂದೆಯೇ ಟಿಕೆಟ್‌ ಮಾರಲಾಗಿದೆ. ಸದ್ಯ ಯಾವುದೇ ಟಿಕೆಟ್ ಮಾರುತ್ತಿಲ್ಲ. ವಾಪಸು ಹೋಗಿ’ ಎಂದು ಸಿಬ್ಬಂದಿ ಹೇಳಿದ್ದರು. ಸಿಟ್ಟಾದ ಅಭಿಮಾನಿಗಳು, ‘ಟಿಕೆಟ್ ಬೇಕು’ ಎಂದು ಕೂಗಾಡಲಾರಂಭಿಸಿದರು. ಬ್ಯಾರಿಕೇಡ್‌ಗಳನ್ನು ತಳ್ಳಿದರು. ಸ್ಥಳದಲ್ಲಿದ್ದ ಪೊಲೀಸರ ಜೊತೆ ವಾಗ್ವಾದ ನಡೆಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು.

ಕ್ರೀಡಾಂಗಣ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.