ADVERTISEMENT

ಐಪಿಎಲ್‌ ಸಕಾರಾತ್ಮಕ ಭಾವ ಹರಡಲಿದೆ: ಧವನ್‌

ಪಿಟಿಐ
Published 25 ಮೇ 2020, 17:21 IST
Last Updated 25 ಮೇ 2020, 17:21 IST
ಶಿಖರ್ ಧವನ್
ಶಿಖರ್ ಧವನ್   

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯು ಸಕಾರಾತ್ಮಕ ಭಾವ ಹರಡಲಿದ್ದು, ಲಾಕ್‌ಡೌನ್‌ನ ನಂತರ ಉಂಟಾಗುವ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಜನರ ಮನಸ್ಥಿತಿ ಬದಲಾಯಿಸಲಿದೆ ಎಂದು ಭಾರತ ಕ್ರಿಕೆಟ್‌ ತಂಡದ ಆರಂಭದ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಅಭಿಪ್ರಾಯಪಟ್ಟಿದ್ದಾರೆ. ಟೂರ್ನಿಯು ಇದೇ ವರ್ಷ ನಡೆಯಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಈ ಮೊದಲು ಮಾರ್ಚ್‌ 29ರಿಂದ ಮೇ 24ರವರೆಗೆ ನಿಗದಿಯಾಗಿದ್ದ ಐಪಿಎಲ್‌ಅನ್ನು ಕೊರೊನಾ ವೈರಸ್‌ ಸೋಂಕು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

‘ಜನರ ಮನಸ್ಥಿತಿ ಹಾಗೂ ಜನಜೀವನದಲ್ಲಿ ಪರಿವರ್ತನೆ ತರಲು ಕೆಲವು ಟೂರ್ನಿಗಳು ಆರಂಭವಾಗಬೇಕು. ಐಪಿಎಲ್‌ ನಡೆದರೆ ಇದರ ಪರಿಣಾಮ ನಮಗೆ ಕಾಣಲಿದೆ‌’ ಎಂದುಧವನ್‌ ಅವರು, ಶ್ರೀಲಂಕಾ ತಂಡದ ಆಲ್‌ರೌಂಡರ್‌ ಆ್ಯಂಜೆಲೊ ಮ್ಯಾಥ್ಯೂಸ್‌ ಅವರೊಂದಿಗೆ ನಡೆಸಿದ ಇನ್ಸ್ಟಾಗ್ರಾಂ ಸಂವಾದದಲ್ಲಿ ಹೇಳಿದ್ದಾರೆ.

ADVERTISEMENT

‘ಪ್ರತಿಯೊಬ್ಬರ ಸುರಕ್ಷತೆಯ ದೃಷ್ಟಿಯಿಂದ ನಾವು ಹೆಚ್ಚು ಜಾಗರೂಕರಾಗಿರಬೇಕು. ಐಪಿಎಲ್‌ ಟೂರ್ನಿ ನಡೆದರೆ ವಿಶ್ವದಾದ್ಯಂತ ಜನರು ವೀಕ್ಷಿಸುತ್ತಾರೆ. ಹಾಗೆಯೇ ಅವರಲ್ಲಿ ಸಾಕಷ್ಟು ಸಕಾರಾತ್ಮಕ ಭಾವ ಹೆಚ್ಚಲಿದೆ’ ಎಂದೂ ಅವರು ನುಡಿದರು.

‘ಖಾಲಿ ಕ್ರೀಡಾಂಗಣಗಳಲ್ಲಿ ಟೂರ್ನಿಗಳು ನಡೆದರೆ, ಅಭಿಮಾನಿಗಳ ಎದುರು ಆಡುವ ಹುಮ್ಮಸ್ಸನ್ನು ಕಳೆದುಕೊಳ್ಳಲಿದ್ದೇವೆ’ ಎಂದು ಧವನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.