ಡುಬ್ಲಿನ್: ಐರ್ಲೆಂಡ್ ಕ್ರಿಕೆಟ್ ತಂಡದ ಆಲ್‌ರೌಂಡರ್ ಕೆವಿನ್ ಒಬ್ರಿಯೆನ್ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಿಂದ ಶುಕ್ರವಾರ ನಿವೃತ್ತರಾಗಿದ್ದಾರೆ. ಏಕದಿನ ಕ್ರಿಕೆಟ್ ಮೇಲೆ ಪ್ರೀತಿಯಾಗಲಿ ರನ್ ಅಥವಾ ವಿಕೆಟ್ ಗಳಿಸುವ ಹಸಿವು ಆಗಲಿ ಉಳಿದಿಲ್ಲ. ಆದ್ದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಡುಬ್ಲಿನ್‌ನ 37 ವರ್ಷದ ಈ ವೇಗದ ಬೌಲರ್ ಟೆಸ್ಟ್ ಮತ್ತು ಟಿ20 ಪಂದ್ಯಗಳಿಗೆ ಲಭ್ಯ ಇದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 153 ಪಂದ್ಯಗಳನ್ನು ಆಡಿದ್ದು ಮೂರು ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ. 114 ವಿಕೆಟ್ ಉರುಳಿಸಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ 2011ರ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿ ಇಂಗ್ಲೆಂಡ್ ಎದುರಿನ ಗೆಲುವಿಗೆ ಕಾರಣರಾಗಿದ್ದರು. ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಅವರು 113 ರನ್ ಸಿಡಿಸಿದ್ದರು. ಇದರಲ್ಲಿ ಆರು ಸಿಕ್ಸರ್ ಮತ್ತು 13 ಬೌಂಡರಿಗಳಿದ್ದವು. ಈ ಮೂಲಕ 328 ರನ್‌ಗಳ ಗೆಲುವಿನ ಗುರಿ ಯಶಸ್ವಿಯಾಗಿ ಬೆನ್ನತ್ತಲು ಐರ್ಲೆಂಡ್‌ಗೆ ಸಾಧ್ಯವಾಗಿತ್ತು.
ವೇಗಿಗಳಾದ ಜೇಮ್ಸ್ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್ ಮತ್ತು ಸ್ಪಿನ್ನರ್ ಗ್ರೇಮ್ ಸ್ವಾನ್ ಅವರನ್ನು ಒಳಗೊಂಡ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದ ಅವರು 50 ಎಸೆತಗಳಲ್ಲಿ ಶತಕ ಗಳಿಸಿದ್ದರು. ಇದು ವಿಶ್ವಕಪ್‌ನಲ್ಲಿ ವೇಗದ ಶತಕವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.