ರವೀಂದ್ರ ಜಡೇಜ
(ಪಿಟಿಐ ಚಿತ್ರ)
ದುಬೈ: ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜ ಅವರು ಬುಧವಾರ ಪ್ರಕಟವಾದ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಆಲ್‌ರೌಂಡರ್‌ಗಳ ವಿಭಾಗದಲ್ಲಿ ಅಗ್ರಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಂಡಿದ್ದಾರೆ. ಟಿ20 ಬ್ಯಾಟರ್‌ಗಳ ವಿಭಾಗದಲ್ಲಿ ಅಭಿಷೇಕ್ ಶರ್ಮಾ ಮೊದಲ ಬಾರಿ ಅಗ್ರಸ್ಥಾನಕ್ಕೇರಿದ್ದಾರೆ.
ಜಡೇಜ (422 ರೇಟಿಂಗ್ ಪಾಯಿಂಟ್ಸ್) ಅವರು ಎರಡನೇ ಸ್ಥಾನದಲ್ಲಿರುವ ಬಾಂಗ್ಲಾದೇಶದ ಮೆಹಿದಿ ಹಸನ್ ಮಿರಾಜ್ (305) ಅವರಿಗಿಂತ 117 ರೇಟಿಂಗ್ ಪಾಯಿಂಟ್ಸ್ ಮುಂದಿದ್ದಾರೆ.
ಟ್ರಾವಿಸ್ ಹೆಡ್ ಅವರು ವರ್ಷದ ನಂತರ ಅಗ್ರಸ್ಥಾನ ಕಳೆದುಕೊಂಡಿದ್ದಾರೆ. ಅವರು ಕೆರಿಬಿಯನ್‌ನಲ್ಲಿ ಟೆಸ್ಟ್ ಸರಣಿಯ ನಂತರ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಡಿರಲಿಲ್ಲ. ಹೀಗಾಗಿ ಶರ್ಮಾ ಅಗ್ರಸ್ಥಾನಕ್ಕೇರಿದರು. ಆಸ್ಟ್ರೇಲಿಯಾ ಟಿ20 ಸರಣಿಯನ್ನು 5–0 ಯಿಂದ ಗೆದ್ದುಕೊಂಡಿತ್ತು.
ಎಡಗೈ ಬ್ಯಾಟರ್ ಶರ್ಮಾ 829 ರೇಟಿಂಗ್ ಪಾಯಿಂಟ್ಸ್ ಹೊಂದಿದ್ದರೆ, ಹೆಡ್ ಬಳಿ 814 ಪಾಯಿಟ್‌ಗಳಿವೆ.
ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ಅಮೋಘ ಹೋರಾಟದಲ್ಲಿ ಗಳಿಸಿದ ಅಜೇಯ 107 ರನ್ ಮತ್ತು ನಾಲ್ಕು ವಿಕೆಟ್ ಪಡೆದಿದ್ದು ಅವರಿಗೆ ತಮ್ಮ ಅಗ್ರಸ್ಥಾನ ಇನ್ನಷ್ಟು ಗಟ್ಟಿಮಾಡಿಕೊಳ್ಳಲು ನೆರವಾಯಿತು ಎಂದು ಐಸಿಸಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ವಾಷಿಂಗ್ಟನ್ ಸುಂದರ್ ಜಂಟಿ 13ನೇ ಸ್ಥಾನ ಪಡೆದಿದ್ದಾರೆ.
ಜೋ ರೂಟ್ ಟೆಸ್ಟ್ ಬ್ಯಾಟರ್‌ಗಳ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದ್ದು, ಎರಡನೇ ಸ್ಥಾನದಲ್ಲಿರುವ ಕೇನ್ಸ್ ವಿಲಿಯಮ್ಸನ್ ಅವರಿಗಿಂತ 37 ಪಾಯಿಂಟ್ಸ್ ಹೆಚ್ಚು ಹೊಂದಿದ್ದಾರೆ.
ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಆಲ್‌ರೌಂಡರ್‌ಗಳ ವಿಭಾಗದಲ್ಲಿ ಮೂರು ಸ್ಥಾನ ಬಡ್ತಿ ಪಡೆದಿದ್ದು, ಮೂರನೇ ಸ್ಥಾನದಲ್ಲಿದ್ದಾರೆ. ಇದು 2022ರ ನಂತರ ಅವರ ಅತ್ಯಧಿಕ ರ‍್ಯಾಂಕಿಂಗ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.