ADVERTISEMENT

IPL-2025: ಮುಂಬೈನ ಮೊದಲ ಕೆಲ ಪಂದ್ಯಗಳಿಗೆ ಬೂಮ್ರಾ ಅಲಭ್ಯ?

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2025, 13:05 IST
Last Updated 14 ಮಾರ್ಚ್ 2025, 13:05 IST
<div class="paragraphs"><p>ಜಸ್‌ಪ್ರೀತ್ ಬೂಮ್ರಾ</p></div>

ಜಸ್‌ಪ್ರೀತ್ ಬೂಮ್ರಾ

   

(ಪಿಟಿಐ ಚಿತ್ರ)

ನವದೆಹಲಿ: ಭಾರತದ ಅಗ್ರ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರು ಬೆನ್ನಿನ ಕೆಳಭಾಗದ ನೋವಿನಿಂದಾಗಿ ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆರಂಭದ ಕೆಲವು ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

ADVERTISEMENT

ಆಸ್ಟ್ರೇಲಿಯಾ ಪ್ರವಾಸದ ಅಂತಿಮ ಟೆಸ್ಟ್‌ನ ಎರಡನೇ ದಿನದಾಟದ ವೇಳೆ ಕಾಣಿಸಿಕೊಂಡ ಈ ಗಾಯದ ಸಮಸ್ಯೆಯಿಂದಾಗಿ ಬೂಮ್ರಾ ಅವರು ಜನವರಿಯಿಂದ ಈಚೆಗೆ ಯಾವುದೇ ಪಂದ್ಯದಲ್ಲಿ ಆಡಿಲ್ಲ. ಆ ಸರಣಿಯಲ್ಲಿ, 30 ವರ್ಷ ವಯಸ್ಸಿನ ಬೂಮ್ರಾ 32 ವಿಕೆಟ್‌ ಪಡೆದಿದ್ದರು.

‘ಅವರು ಪುನಶ್ಚೇತನ ಶಿಬಿರದಲ್ಲಿದ್ದಾರೆ. ತಮ್ಮ ಫಿಟ್ನೆಸ್‌ನ ಉತ್ತುಂಗಕ್ಕೆ ತಲುಪಲು ಅವರಿಗೆ ಇನ್ನೂ ಕೆಲವು ಸಮಯ ಹಿಡಿಯಬಹುದು. ಜೂನ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ ಟೆಸ್ಟ್‌ ಸರಣಿ ಆಡಲಿರುವುದನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ವಿಶ್ರಾಂತಿ ನೀಡಬಹದು’ ಎಂದು ಈ ಬೆಳವಣಿಗೆಯ ಮಾಹಿತಿ ಇರುವ ಮೂಲವೊಂದು ಪಿಟಿಐಗೆ ತಿಳಿಸಿದೆ.

ಮಾರ್ಚ್‌ 22ರಂದು ಆರಂಭವಾಗುವ ಐಪಿಎಲ್‌ ಮೇ 25ರವರೆಗೆ ನಡೆಯಲಿದೆ. ಬಿಸಿಸಿಐ ಶ್ರೇಷ್ಠತಾ ಕೇಂದ್ರದ ತಜ್ಞ ವೈದ್ಯರು ಅವರ ಪುನರಾಗಮನಕ್ಕೆ ನಿರ್ದಿಷ್ಟ ದಿನಾಂಕ ನಿಗದಿಪಡಿಸಿಲ್ಲ.

ಕೆಲವು ಪಂದ್ಯಗಳಿಗೆ ಬೂಮ್ರಾ ಅವರ ಅಲಭ್ಯತೆಯು ಮುಂಬೈಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ. 2024ರ ಐಪಿಎಲ್‌ನಲ್ಲಿ ಮುಂಬೈ ತಂಡ ಹತ್ತನೇ ಸ್ಥಾನ ಗಳಿಸಿತ್ತು. ಬೂಮ್ರಾ ಅಲಭ್ಯತೆಯಿಂದಾಗಿ ಹಾರ್ದಿಕ್ ಪಟೇಲ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ, ಈ ಬಾರಿ ಟ್ರೆಂಟ್‌ ಬೌಲ್ಟ್‌, ಕಾರ್ಬಿನ್‌ ಬಾಷ್‌ ಮತ್ತು ದೀಪಕ್ ಚಾಹರ್ ಅವರನ್ನು ಅವಲಂಬಿಸಬೇಕಾಗಿದೆ. ಇವರ ಜೊತೆ ಸ್ವತಃ ಹಾರ್ದಿಕ್‌ ಕೂಡ ಹೊಣೆ ಹೊರಬೇಕಾಗಿದೆ.

ಮುಂಬೈ ಇಂಡಿಯನ್ಸ್‌, ಐಪಿಎಲ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಮಾರ್ಚ್‌ 23ರಂದು ಚೆನ್ನೈನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಆಡಲಿದೆ. ಮೊದಲ ಐದು ಪಂದ್ಯಗಳಲ್ಲಿ ಬೂಮ್ರಾ ಆಡುವುದು ಅನುಮಾನ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.