
ಆ್ಯಷಸ್ ಸರಣಿಯ ಮೊದಲ ದಿನ ಶತಕ ಗಳಿಸಿದ ಜೋ ರೂಟ್ ಅವರ ಸಂಭ್ರಮ...
ಬ್ರಿಸ್ಬೇನ್: ಅನುಭವಿ ಬ್ಯಾಟರ್ ಜೋ ರೂಟ್ ಕೊನೆಗೂ ಆಸ್ಟ್ರೇಲಿಯಾದ ನೆಲದಲ್ಲಿ ಮೊದಲ ಬಾರಿ ಟೆಸ್ಟ್ ಶತಕ ಗಳಿಸಿದರು. ಆರಂಭದ ಕುಸಿತ ಕಂಡ ಇಂಗ್ಲೆಂಡ್‌ಗೆ ಆಸರೆಯಾದ ರೂಟ್, ಆ್ಯಷಸ್ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ತಂಡ 9 ವಿಕೆಟ್‌ಗೆ 325 ರನ್‌ಗಳ ಗೌರವಾರ್ಹ ಮೊತ್ತ ತಲುಪಲು ನೆರವಾದರು.
ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ (71ಕ್ಕೆ6) ಸಹ ಹೊನಲು ಬೆಳಕಿನ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಮಿಂಚಿದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಯಶಸ್ವಿ ಎಡಗೈ ವೇಗಿ ಎನಿಸಿದರು.
ರೂಟ್ ಅಧಿಕಾರಯತವಾಗಿ ಆಡಿ ಅಜೇಯ 135 ರನ್ (4x15, 6x1) ಗಳಿಸಿದರು. ಭರ್ಜರಿ ಹೊಡೆತಗಳನ್ನು ಆಡಿದ ಜೋಫ್ರಾ ಆರ್ಚರ್ ಅವರು ತಂಡ ಮೊದಲ ದಿನವೇ ಆಲೌಟ್ ಆಗುವುದನ್ನು ತಡೆದರಲ್ಲದೇ, 26 ಎಸೆತಗಳಲ್ಲಿ ಅಜೇಯ 32 ರನ್ ಗಳಿಸಿ ಇಂಗ್ಲೆಂಡ್ ಅಭಿಮಾನಿಗಳನ್ನು ರಂಜಿಸಿದರು. ರೂಟ್ ಮತ್ತು ಆರ್ಚರ್ ಮುರಿಯದ ಹತ್ತನೇ ವಿಕೆಟ್‌ಗೆ 61 ರನ್ ಸೇರಿಸಿದ್ದಾರೆ. ಇದು ಗ್ಯಾಬಾದಲ್ಲಿ ಕೊನೆಯ ವಿಕೆಟ್‌ಗೆ ಇಂಗ್ಲೆಂಡ್‌ನ ದಾಖಲೆ ಜೊತೆಯಾಟವಾಗಿದೆ.
ಟೆಸ್ಟ್ ಮಾದರಿಯ ಅಗ್ರಗಣ್ಯ ಬ್ಯಾಟರ್ ರೂಟ್, ಈ ಹಿಂದಿನ ಮೂರು ಆ್ಯಷಸ್ ಪ್ರವಾಸಗಳಲ್ಲಿ ಶತಕ ಗಳಿಸಲು ವಿಫಲರಾಗಿದ್ದರು. ಆದರೆ, ಸಚಿನ್ ತೆಂಡೂಲ್ಕರ್ ನಂತರ ಟೆಸ್ಟ್ ರನ್ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿರುವ ರೂಟ್ ಈ ಬಾರಿ ಟೀಕಾಕಾರರ ಬಾಯಿ ಮುಚ್ಚಿಸಿದರು.
5 ರನ್ನಿಗೆ 2 ವಿಕೆಟ್ ಕಳೆದುಕೊಂಡಿದ್ದ ಆಡಲು ಇಳಿದ ಸ್ಟಾರ್ಕ್ ಆಡಲು ಬಂದಾಗ ಸ್ಟಾರ್ಕ್ ಬೆಂಕಿಯುಗುಳಿದ್ದರು. ಮೊದಲ ಓವರಿನಲ್ಲಿ ಬೆನ್ ಡಕೆಟ್, ಎರಡನೇ ಓವರಿನಲ್ಲಿ ಓಲಿ ಪೋಪ್ ಅವರ ವಿಕೆಟ್‌ಗಳನ್ನು ಪಡೆದರು. ಆದರೆ ವೀರೋಚಿತವಾಗಿ ಆಡಿದ ರೂಟ್ ಒಂದೆಡೆ ಬೇರೂರಿದರು. ಕ್ರಾಲಿ (76) ಜೊತೆ ರೂಟ್ ಮೂರನೇ ವಿಕೆಟ್‌ಗೆ ಅಮೂಲ್ಯ 117 ರನ್ ಸೇರಿಸಿದರು. ಬೋಲ್ಯಾಂಡ್ ಬೌಲಿಂಗ್‌ನಲ್ಲಿ ಫೈನ್‌ಲೆಗ್‌ಗೆ ಬೌಂಡರಿ ಬಾರಿಸಿ ಶತಕ ಪೂರೈಸಿದರು.
ಆರು ವಿಕೆಟ್‌ಗಳೊಡನೆ ಸ್ಟಾರ್ಕ್ ಟೆಸ್ಟ್‌ನಲ್ಲಿ 418 ವಿಕೆಟ್‌ಗಳನ್ನು ಪಡೆದರು. ಪಾಕಿಸ್ತಾನದ ದಿಗ್ಗಜ ಬೌಲರ್ ವಾಸಿಂ ಅಕ್ರಂ (414 ವಿಕೆಟ್) ಅವರನ್ನು ಹಿಂದೆಹಾಕಿ ಟೆಸ್ಟ್ ಇತಿಹಾಸದಲ್ಲಿ ಯಶಸ್ವಿ ಎಡಗೈ ವೇಗಿ ಎನಿಸಿದರು. ‘ವಾಸಿಂ ಈಗಲೂ ಮೇರು ಬೌಲರ್. ಅವರೂ ನನಗಿಂತಲೂ ಉತ್ತಮ ಬೌಲರ್’ ಎಂದು ಸ್ಟಾರ್ಕ್ ಪ್ರತಿಕ್ರಿಯಿಸಿದರು.
ಸೋಮವಾರ ಹಠಾತ್ ನಿಧನರಾದ ರಾಬಿನ್ ಸ್ಮಿತ್ ಅವರಿಗೆ ಗೌರವ ಸಲ್ಲಿಸಲು ಎರಡೂ ತಂಡಗಳ ಆಟಗಾರರು ತೋಳಿಗೆ ಕಪ್ಪುಪಟ್ಟಿ ಧರಿಸಿ ಆಡಿದರು.
ಪೂರ್ಣಾವಧಿ ನಾಯಕ ಪ್ಯಾಟ್ ಕಮಿನ್ಸ್ ಈ ಪಂದ್ಯದಲ್ಲೂ ಆಡಲಿಲ್ಲ. ಅಚ್ಚರಿ ಎಂಬಂತೆ ಆಫ್ ಸ್ಪಿನ್ನರ್ ನೇಥನ್ ಲಯನ್ ಅವರನ್ನು ಕೈಬಿಟ್ಟಿತು. 14 ವರ್ಷಗಳ ನಂತರ ಮುಂಚೂಣಿ ಸ್ಪಿನ್ನರ್ ಇಲ್ಲದೇ ಕಣಕ್ಕಿಳಿಯಿತು.
ಸ್ಕೋರುಗಳು:
ಮೊದಲ ಇನಿಂಗ್ಸ್: ಇಂಗ್ಲೆಂಡ್: 74 ಓವರ್‌ಗಳಲ್ಲಿ 9ಕ್ಕೆ 325 (ಝಾಕ್ ಕ್ರಾಲಿ 76, ಜೋ ರೂಟ್ ಔಟಾಗದೇ 135, ಹ್ಯಾರಿ ಬ್ರೂಕ್ 31, ಜೋಫ್ರಾ ಆರ್ಚರ್ 71ಕ್ಕೆ6).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.