ADVERTISEMENT

ಕಿವೀಸ್ ಪಡೆಯ ಬೆನ್ನೆಲುಬು ಕೇನ್‌ ವಿಲಿಯಮ್ಸನ್‌

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 11:34 IST
Last Updated 13 ಜುಲೈ 2019, 11:34 IST
   

ಲಂಡನ್‌: ಭಾನುವಾರ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ ಮತ್ತು ಆತಿಥೇಯ ಇಂಗ್ಲೆಂಡ್‌ ತಂಡಗಳ ನಡುವೆ ವಿಶ್ವಕಪ್‌ ಟೂರ್ನಿಯ ಕೊನೆಯ ಪಂದ್ಯ. ಕ್ರಿಕೆಟ್‌ ಪ್ರಿಯರು ಫೈನಲ್‌ಗಾಗಿ ಕಾತುರರಾಗಿದ್ದು, ಕಿವೀಸ್ ಪಡೆಯ ನಾಯಕ ಕೇನ್‌ ವಿಲಿಯಮ್ಸನ್‌ ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿದ್ದಾರೆ.

ಟೂರ್ನಿಯಲ್ಲಿ ಉತ್ತಮ ನಾಯಕತ್ವ ನಿರ್ವಹಣೆಯ ಜತೆಗೆ ತಂಡವನ್ನು ಅಂತಿಮ ಹಣಾಹಣಿಯ ವರೆಗೂ ತರುವಲ್ಲಿ ವಿಲಿಯಮ್ಸನ್‌ ನಿರ್ವಹಿಸಿದ ಪಾತ್ರ ಅತಿ ಮುಖ್ಯವಾದುದು. ಉತ್ತಮ ಫಾರ್ಮ್‌ನಲ್ಲಿರುವ ಅವರು ತಂಡದ ರನ್‌ ಗಳಿಕೆಗೆ ಪ್ರತಿ ಹಂತದಲ್ಲಿ ನೆರವಾದರು. ನಾಯಕನಾಗಿ ಒಂದೇ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿರುವ ದಾಖಲೆಗೆ ಇನ್ನು ಒಂದೇ ಒಂದು ರನ್‌ ಅಂತರದಲ್ಲಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಆಡುವ ವಿಲಿಯಮ್ಸನ್‌ 8 ಇನಿಂಗ್ಸ್‌ಗಳಲ್ಲಿ 548 ರನ್‌ ಗಳಿಸುವ ಮೂಲಕ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲ ಜಯವರ್ಧನ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಜಯವರ್ಧನೆ ಅವರಿಗಿಂತ ಮೂರು ಇನಿಂಗ್‌ ಕಡಿಮೆ ಆಟದಲ್ಲಿಯೇ ವಿಲಿಯಮ್ಸನ್‌ ದಾಖಲೆಯ ರನ್‌ ಪೇರಿಸಿದ್ದು, ಫೈನಲ್‌ ಪಂದ್ಯದಲ್ಲಿ 1 ರನ್‌ ಗಳಿಸಿದರೂ ಹೊಸ ದಾಖಲೆ ಸೃಷ್ಟಿಯಾಗಲಿದೆ.

ADVERTISEMENT

ವಿಶ್ವಕಪ್‌ ಕ್ರಿಕೆಟ್‌ ಇತಿಹಾಸದಲ್ಲಿ ಒಂದೇ ಟೂರ್ನಿಯಲ್ಲಿ 500ಕ್ಕೂ ಅಧಿಕ ರನ್‌ ಗಳಿಸಿರುವ ನಾಯಕರ ಪೈಕಿ ವಿಲಿಯಮ್ಸನ್‌ ನಾಲ್ಕನೆಯವರು. ಇನ್ನು ಒಂದು ಶತಕ ಗಳಿಸಿದರೆ, ವಿಶ್ವಕಪ್‌ ಟೂರ್ನಿಯಲ್ಲಿ ಅತಿ ಹೆಚ್ಚು ಶತಕ ಪೂರೈಸಿದ ನಾಯಕರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ. 2003ರ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ನಾಯಕನಾಗಿದ್ದ ಸೌರವ್‌ ಗಂಗೂಲಿ 3 ಶತಕ ಸಿಡಿಸಿದ್ದರು.

ನ್ಯೂಜಿಲೆಂಡ್‌ ಆಟಗಾರರ ಪೈಕಿ ರಾಸ್‌ ಟೇಲರ್‌ ಹೊರತುಪಡಿಸಿದರೆ ವಿಶ್ವಕಪ್‌ನ ಒಂದೇ ಟೂರ್ನಿಯಲ್ಲಿ 500ಕ್ಕೂ ಹೆಚ್ಚು ರನ್‌ ಗಳಿಸಿದ ಏಕೈಕ ಬ್ಯಾಟ್ಸ್‌ಮನ್‌ ಕೇನ್‌ ವಿಲಿಯಮ್ಸನ್‌. ವೈಯಕ್ತಿಕ ದಾಖಲೆಗಳ ಜತೆಗೆ ನ್ಯೂಜಿಲೆಂಡ್‌ ತಂಡಕ್ಕೆ ವಿಶ್ವಕಪ್‌ ಉಡುಗೊರೆಯಾಗಿ ನೀಡುವ ಹೊಣೆಗಾರಿಕೆ ಸಹ ವಿಲಿಯಮ್ಸನ್‌ ಮೇಲಿದೆ. ಇಯಾನ್‌ ಮಾರ್ಗನ್‌ ಬಳಗ ಇದಕ್ಕೆ ಅವಕಾಶ ಮಾಡಿಕೊಡುವುದೇ? ಕಾದು ನೋಡಬೇಕು.

ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ 2019: ಕೇನ್‌ ವಿಲಿಯಮ್ಸನ್‌ ಸಾಧನೆ

* ಪಂದ್ಯ– 9 (8 ಇನಿಂಗ್ಸ್‌)

* ಒಟ್ಟು ರನ್‌– 548

* ರನ್‌ ಸರಾಸರಿ– 91.33 (ಟೂರ್ನಿಯಲ್ಲೇ ಅತಿ ಹೆಚ್ಚು)

* ಗರಿಷ್ಠ ಸ್ಕೋರ್– 148

* ಸ್ಟ್ರೈಕ್‌ ರೇಟ್‌– 76.32

* ಗಳಿಸಿದ ವಿಕೆಟ್‌– 2

ವಿಶ್ವಕಪ್‌ ಇತಿಹಾಸದಲ್ಲಿ ಒಂದೇ ಟೂರ್ನಿಯಲ್ಲಿ ಅಧಿಕ ರನ್‌ ಗಳಿಸಿದ ನಾಯಕರು

* ಮಹೇಲ ಜಯವರ್ಧನೆ–2007– ಶ್ರೀಲಂಕಾ– 548 ರನ್‌– 11 ಇನಿಂಗ್ಸ್‌– 1 ಶತಕ

* ಕೇನ್‌ ವಿಲಿಯಮ್ಸನ್‌–2019– ನ್ಯೂಜಿಲೆಂಡ್‌– 548 ರನ್‌– 8 ಇನಿಂಗ್ಸ್‌– 2 ಶತಕ

* ರಿಕಿ ಪಾಂಟಿಂಗ್‌– ಆಸ್ಟ್ರೇಲಿಯಾ–2007–539 ರನ್‌– 9 ಇನಿಂಗ್ಸ್– 1 ಶತಕ

* ಆ್ಯರನ್‌ ಫಿಂಚ್‌– ಆಸ್ಟ್ರೇಲಿಯಾ–2019– 507 ರನ್‌– 10 ಇನಿಂಗ್ಸ್‌– 2 ಶತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.