ADVERTISEMENT

ಸ್ಪಿನ್ ಕೋಚ್ ಹುದ್ದೆ: ರೇಸ್‌ನಲ್ಲಿ ಕನ್ನಡಿಗ ಸುನಿಲ್ ಜೋಶಿ

ಪಿಟಿಐ
Published 28 ಏಪ್ರಿಲ್ 2025, 23:55 IST
Last Updated 28 ಏಪ್ರಿಲ್ 2025, 23:55 IST
   

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಸ್ಪಿನ್ ಕೋಚ್ ಹುದ್ದೆಗೆ ಮಾಜಿ ಕ್ರಿಕೆಟಿಗ, ಕನ್ನಡಿಗ ಸುನಿಲ್ ಜೋಶಿ ಹೆಸರು ಮುಂಚೂಣಿಯಲ್ಲಿದೆ.

ವರ್ಷದ ಆರಂಭದಲ್ಲಿ ಸಾಯಿರಾಜ್ ಬಹುತುಳೆ ಅವರಿಂದ ತೆರವಾಗಿದ್ದ ಈ ಸ್ಥಾನಕ್ಕೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಹುಡುಕಾಟ ನಡೆಸುತ್ತಿದೆ. ರಾಜಸ್ಥಾನ ರಾಯಲ್ಸ್ ತಂಡದ ಸ್ಪಿನ್ ಕೋಚ್ ಸ್ಥಾನ ಪಡೆಯುವುದಕ್ಕಾಗಿ ಬಹುತುಳೆ ರಾಜೀನಾಮೆ ನೀಡಿದ್ದರು.

‌54 ವರ್ಷ ವಯಸ್ಸಿನ ಜೋಶಿ ಅವರು 1996ರಿಂದ 2002ರ ಅವಧಿಯಲ್ಲಿ ಭಾರತ ತಂಡದ ಪರ 69 ಏಕದಿನ ಮತ್ತು 15 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಸದ್ಯ ಅವರು ಪಂಜಾಬ್‌ ಕಿಂಗ್ಸ್‌ ತಂಡದ ಕೋಚ್‌ ರಿಕಿ ಪಾಂಟಿಂಗ್‌ ಜತೆ ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

ದೇಶೀಯ ಕ್ರಿಕೆಟ್‌ನಲ್ಲಿ ಅವರು ಉತ್ತರಪ್ರದೇಶ ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅಲ್ಲದೆ, ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್‌ ತಂಡದ ಸ್ಪಿನ್‌ ಬೌಲಿಂಗ್‌ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ ಅನುಭವ ಅವರ ಬೆನ್ನಿಗಿದೆ.

ಬಿಸಿಸಿಐ ಮೂಲಗಳ ಪ್ರಕಾರ ಜೋಶಿ ಅವರು ಈಗಾಗಲೇ ಬಿಸಿಸಿಐನ ಆಯ್ಕೆ ಸಮಿತಿಯ ಮುಂದೆ ಸಂದರ್ಶನಕ್ಕೆ ಹಾಜರಾಗಿದ್ದಾರೆ. ಬಿಸಿಸಿಐನ ಶ್ರೇಷ್ಠತಾ ಕೇಂದ್ರದ (ಸೆಂಟರ್‌ ಆಫ್‌ ಎಕ್ಸಲೆನ್ಸ್‌) ಮುಖ್ಯಸ್ಥ ವಿವಿಎಸ್‌ ಲಕ್ಷ್ಮಣ್‌, ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್‌ ಅಗರ್ಕರ್‌ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಬೇ ಕುರುವಿಲ್ಲಾ ಅವರು ಸಂದರ್ಶನ ನಡೆಸಿದ್ದಾರೆ.

19 ವರ್ಷದೊಳಗಿನವರ ರಾಷ್ಟ್ರೀಯ ಮಹಿಳಾ ತಂಡದ ಕೋಚ್‌ ನೂಶಿನ್ ಅಲ್ ಖಾದೀರ್, ಮಾಜಿ ಎಡಗೈ ಸ್ಪಿನ್ನರ್ ರಾಕೇಶ್ ಧ್ರುವ್, ಅನುಭವಿ ಆಫ್ ಸ್ಪಿನ್ನರ್ ಪ್ರೀತಮ್ ಗಂಧೆ ಅವರೂ ಸಂದರ್ಶನಕ್ಕೆ ಹಾಜರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.