ADVERTISEMENT

ರೋಹಿತ್ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ: ಕಪಿಲ್ ದೇವ್

ಪಿಟಿಐ
Published 9 ಡಿಸೆಂಬರ್ 2024, 12:39 IST
Last Updated 9 ಡಿಸೆಂಬರ್ 2024, 12:39 IST
<div class="paragraphs"><p>ಕಪಿಲ್ ದೇವ್</p></div>

ಕಪಿಲ್ ದೇವ್

   

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮತ್ತು ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲೂ ಕಳಪೆ ಬ್ಯಾಟಿಂಗ್ ಮೂಲಕ ಟೀಕೆಗೆ ಗುರಿಯಾಗಿರುವ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಬೆಂಬಲಕ್ಕೆ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ನಿಂತಿದ್ದಾರೆ.

ತಮ್ಮ ವೃತ್ತಿಜೀವನದ ಈ ಹಂತದಲ್ಲಿ ರೋಹಿತ್ ಶರ್ಮಾ ಏನನ್ನೂ ಸಾಬೀತುಮಾಡುವ ಅಗತ್ಯವಿಲ್ಲ ಎಂದಿದ್ಧಾರೆ. ಕಮ್‌ಬ್ಯಾಕ್ ಆಗುವ ರೋಹಿತ್ ಶರ್ಮಾ ಅವರ ಸಾಮರ್ಥ್ಯದ ಬಗ್ಗೆ ಅನುಮಾನಪಡುವುದು ಬೇಡ ಎಂದು ಅವರು ಹೇಳಿದ್ದಾರೆ.

ADVERTISEMENT

ಅಡಿಲೇಡ್ ಟೆಸ್ಟ್‌ನಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ರೋಹಿತ್, ಎರಡೂ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 3 ಮತ್ತು 6 ರನ್ ಗಳಿಸಿದ್ದರು. ಎರಡೂವರೆ ದಿನಗಳಲ್ಲಿ ಮುಗಿದ ಈ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳ ಹೀನಾಯ ಸೋಲು ಕಂಡಿತ್ತು. ಹೀಗಾಗಿ, ರೋಹಿತ್ ಶರ್ಮಾ ಅವರ ಕಳಪೆ ಪ್ರದರ್ಶನ ಭಾರಿ ಟೀಕೆಗೆ ಗುರಿಯಾಗಿತ್ತು.

‘ರೋಹಿತ್ ಏನನ್ನೂ ಸಾಬೀತುಮಾಡುವ ಅಗತ್ಯವಿಲ್ಲ. ಹಲವು ವರ್ಷಗಳಿಂದ ಅವರು ತಂಡಕ್ಕಾಗಿ ಆಡಿದ್ದಾರೆ. ಕಮ್‌ಬ್ಯಾಕ್ ಆಗುವ ಅವರ ಸಾಮರ್ಥ್ಯದ ಬಗ್ಗೆ ಅನುಮಾನಪಡುವುದು ಬೇಡ. ಅವರು ಫಾರ್ಮ್‌ಗೆ ಮರಳಲಿದ್ದಾರೆ ಎಂಬ ನಂಬಿಕೆ ಇದೆ. ಅದುವೇ ಮುಖ್ಯ’ಎಂದಿದ್ದಾರೆ.

2ನೇ ಮಗುವಿನ ತಂದೆಯಾಗಿರುವ ರೋಹಿತ್ ಶರ್ಮಾ, ಪಿತೃತ್ವ ರಜೆಯಲ್ಲಿದ್ದ ಕಾರಣ ಪರ್ತ್ ಡೆಸ್ಟ್‌ನಲ್ಲಿ ಆಡಿರಲಿಲ್ಲ. ವೇಗಿ ಜಸ್‌ಪ್ರೀತ್ ಬೂಮ್ರಾ ತಂಡ ಮುನ್ನಡೆಸಿದ್ದರು.

ಓಪನರ್ ಆಗಿ ಆಡುತ್ತಿದ್ದ ರೋಹಿತ್, ಪರ್ತ್ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕೆ.ಎಲ್. ರಾಹುಲ್ ಅವರಿಗೆ ಅಡಿಲೇಡ್ ಟೆಸ್ಟ್‌ನಲ್ಲಿ ಓಪನರ್ ಸ್ಥಾನ ಬಿಟ್ಟುಕೊಟ್ಟು 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು.

‘6 ತಿಂಗಳ ಹಿಂದೆ ಟಿ–20 ವಿಶ್ವಕಪ್ ಗೆದ್ದದ್ದನ್ನು ನೋಡಿರುವವರು ಒಂದೆರಡು ಪ್ರದರ್ಶನಗಳಿಂದ ನಾಯಕತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಲಾರರು. ಅವರು ಕಮ್‌ಬ್ಯಾಕ್ ಮಾಡುತ್ತಾರೆ. ಅವರ ಆಟದ ಬಗ್ಗೆ ನಂಬಿಕೆ ಇಡೋಣ’ಎಂದಿದ್ದಾರೆ.

ಹರ್ಷಿತ್ ರಾಣಾ ಸೇರ್ಪಡೆ ತಪ್ಪಾಯಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಪಿಲ್, ಅದನ್ನು ನಾನು ಹೇಗೆ ಹೇಳಲಿ? ಅದನ್ನು ನಿರ್ಧರಿಸುವ ಜವಾಬ್ದಾರಿ ಹೊತ್ತವರು ಬೇರೆಯವರಿದ್ದಾರೆ ಎಂದಿದ್ದಾರೆ.

ಪರ್ತ್‌ ಟೆಸ್ಟ್‌ನಲ್ಲಿ ಬೂಮ್ರಾ ನಾಯಕತ್ವದಲ್ಲಿ ಪಂದ್ಯ ಗೆದ್ದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ಪ್ರದರ್ಶನದಿಂದ ಒಬ್ಬರು ಉತ್ತಮ. ಮತ್ತೊಬ್ಬರು ಕಳಪೆ ಎಂದು ನಿರ್ಧರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.