ADVERTISEMENT

ವಿಶಾಲ ಹೃದಯಿ ಕಪಿಲ್ ದೇವ್‌

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 19:27 IST
Last Updated 23 ಅಕ್ಟೋಬರ್ 2020, 19:27 IST
ಕಪಿಲ್‌ ದೇವ್‌
ಕಪಿಲ್‌ ದೇವ್‌   

ನವದೆಹಲಿ: ‘ನಮ್ಮ ಸಾರ್ವಕಾಲಿಕ ನಾಯಕ ಕಪಿಲ್ ದೇವ್ ವಿಶಾಲ ಹೃದಯದ ವ್ಯಕ್ತಿ. ಅವರು ಬೇಗ ಗುಣಮುಖರಾಗಲಿದ್ದಾರೆ’–

ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಅವರ ಟ್ವೀಟ್ ಇದು. ಕಪಿಲ್ ದೇವ್ ಅವರೊಂದಿಗೆ ಭಾರತ ಕ್ರಿಕೆಟ್‌ ತಂಡದಲ್ಲಿ ಬಹಳಷ್ಟು ಪಂದ್ಯಗಳಲ್ಲಿ ಕೀರ್ತಿ ಆಡಿದ್ದರು.

ಹೃದಯಾಘಾತದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ 61 ವರ್ಷದ ಕಪಿಲ್ ದೇವ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಶುಕ್ರವಾರ ಅವರು ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಹೊರಬೀಳುತ್ತಿದ್ದಂತೆ ಕ್ರೀಡಾ ವಲಯದಲ್ಲಿ ಆತಂಕ ಸೃಷ್ಟಿಯಾಯಿತು. ಸಾಮಾಜಿಕ ಜಾಲತಾಣಗಳಲ್ಲಿ, ಕ್ರಿಕೆಟಿಗರು, ವಿವಿಧ ಕ್ಷೇತ್ರಗಳ ಗಣ್ಯರು, ಅಭಿಮಾನಿಗಳಿಂದ ಕಪಿಲ್ ಗುಣಮುಖರಾಗಲಿ ಎಂದು ಸಂದೇಶಗಳ ಮಹಾಪೂರವೇ ಹರಿಯಲಾರಂಭಿಸಿತು.

ADVERTISEMENT

ಈ ಸಂದರ್ಭದಲ್ಲಿ ಕಪಿಲ್ ಆಪ್ತಸ್ನೇಹಿತ ಮತ್ತು ಭಾರತೀಯ ಕ್ರಿಕೆಟಿಗರ ಸಂಘಟನೆಯ ಅಧ್ಯಕ್ಷ ಅಶೋಕ್ ಮಲ್ಹೋತ್ರಾ, ‘ಅವರು ಚೇತರಿಸಿಕೊಳ್ಳುತ್ತಿದ್ದಾರೆಂದು ಕಪಿಲ್ ಪತ್ನಿ ರೋಮಿ ಹೇಳಿದ್ದಾರೆ. ನಿನ್ನೆ (ಗುರುವಾರ) ಕಪಿಲ್ ಎದೆನೋವು ಅನುಭವಿಸಿದ್ದರಿಂದ ಅಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಕೆಲವು ತಪಾಸಣೆಗಳನ್ನು ನಡೆಸಿದ ವೈದ್ಯರು ಅಗತ್ಯ ಚಿಕಿತ್ಸೆ ನೀಡಿದ್ದಾರೆ’ ಎಂದು ಮಾಧ್ಯಮಗಳಿಗೆ ತಿಳಿಸಿದರು.

‘ಶೀಘ್ರ ಗುಣಮುಖರಾಗಿ ಬನ್ನಿ’ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ದಿಗ್ಗಜ ಸಚಿನ್ ತೆಂಡೂಲ್ಕರ್, ಬ್ಯಾಟ್ಸ್‌ಮನ್ ಶಿಖರ್ ಧವನ್, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಕಪಿಲ್ ಅವರೊಂದಿಗೆ ಆಡಿದ್ದ ಮದನ್ ಲಾಲ್ ಮತ್ತಿತರರು ಸಂದೇಶ ಹಾಕಿದ್ದಾರೆ.

‘ನಿಮ್ಮೆಲ್ಲರ ಪ್ರೀತಿ ಹಾಗೂ ಕಾಳಜಿಗೆ ಧನ್ಯವಾದಗಳು. ನಿಮ್ಮ ಹಾರೈಕೆಗಳಿಂದ ಮನಸ್ಸು ತುಂಬಿ ಬಂದಿದೆ. ಚೇತರಿಸಿಕೊಳ್ಳುತ್ತಿದ್ದೇನೆ’ ಎಂದು ಕಪಿಲ್‌ ದೇವ್‌ ಅವರು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

1983ರ ಏಕದಿನ ಕ್ರಿಕೆಟ್ ವಿಶ್ವಕಪ್ ಜಯಿಸಿದ ಭಾರತ ತಂಡಕ್ಕೆ ಕಪಿಲ್ ದೇವ್ ನಾಯಕರಾಗಿದ್ದರು. ವಿಶ್ವದ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಕಪಿಲ್ ಪ್ರಮುಖರಾಗಿದ್ದಾರೆ. 1999–2000ರಲ್ಲಿ ಭಾರತ ತಂಡದ ಕೋಚ್ ಕೂಡ ಅಗಿದ್ದರು. 2010ರಲ್ಲಿ ಐಸಿಸಿ ಹಾಲ್ ಆಫ್‌ ಫೇಮ್‌ ಗೌರವ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.