ADVERTISEMENT

ಸೆಲೆಬ್ರಿಟಿ ಕ್ರಿಕೆಟ್ ಲೀಗ್: ಸೆಮಿಫೈನಲ್‌ಗೆ ಕರ್ನಾಟಕ ಬುಲ್ಡೋಜರ್ಸ್‌

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 16:10 IST
Last Updated 26 ಜನವರಿ 2026, 16:10 IST
ಗೆಲುವಿನ ಬಳಿಕ ಸುದೀಪ್‌ ಅವರು ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದರು
ಗೆಲುವಿನ ಬಳಿಕ ಸುದೀಪ್‌ ಅವರು ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದರು   

ಬೆಂಗಳೂರು: ಕರ್ನಾಟಕ ಬುಲ್ಡೋಜರ್ಸ್‌ ತಂಡವು ಹ್ಯಾಟ್ರಿಕ್‌ ಗೆಲುವಿನೊಂದಿಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್‌) ಟಿ20 ಟೂರ್ನಿಯಲ್ಲಿ ಭಾನುವಾರ ಸೆಮಿಫೈನಲ್‌ ಪ್ರವೇಶಿಸಿತು. ಸಿನಿಮಾ ತಾರೆಯರನ್ನೊಳಗೊಂಡ 8 ತಂಡಗಳು ಪ್ರಶಸ್ತಿಗೆ ಪೈಪೋಟಿ ನಡೆಸುತ್ತಿದ್ದು, ಟೂರ್ನಿಯ ಪಂದ್ಯಗಳು ಮದುರೈ, ವಿಶಾಖಪಟ್ಟಣ ಹಾಗೂ ಹೈದರಾಬಾದ್‌ನಲ್ಲಿ ನಡೆಯುತ್ತಿವೆ.

ಭಾನುವಾರ ನಡೆದ ಲೀಗ್‌ ಪಂದ್ಯದಲ್ಲಿ ಕಿಚ್ಚ ಸುದೀಪ್‌ ನೇತೃತ್ವದ ಬುಲ್ಡೋಜರ್ಸ್‌ ತಂಡವು 18 ರನ್‌ಗಳಿಂದ ಭೋಜ್‌ಪುರಿ ದಬಂಗ್ಸ್‌ ತಂಡವನ್ನು ಮಣಿಸಿತು.

ಮೊದಲಿಗೆ ಬ್ಯಾಟ್‌ ಮಾಡಿದ ಬುಲ್ಡೋಜರ್ಸ್‌ ತಂಡವು ರಾಜೀವ್‌ ಹನು (62; 29ಎ) ಹಾಗೂ ಡಾರ್ಲಿಂಗ್‌ ಕೃಷ್ಣ (53; 29ಎ) ಅವರ ಅರ್ಧಶತಕಗಳ ಬಲದಿಂದ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 202 ರನ್‌ ಗಳಿಸಿತು. ಸವಾಲಿನ ಗುರಿ ಬೆನ್ನಟ್ಟಿದ ದಬಂಗ್ಸ್‌ ತಂಡವು 20 ಓವರ್‌ಗಳಲ್ಲಿ 184 ರನ್‌ಗಳಿಗೆ ಆಲೌಟ್‌ ಆಯಿತು.

ADVERTISEMENT

6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬುಲ್ಡೋಜರ್ಸ್ ತಂಡವು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇದೇ 31ರಂದು ನಡೆಯಲಿರುವ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ವೇಲ್ಸ್‌ ಚೆನ್ನೈ ಕಿಂಗ್ಸ್‌ ತಂಡವನ್ನು ಎದುರಿಸಲಿದೆ.

ಮತ್ತೊಂದು ಸೆಮಿಫೈನಲ್‌ನಲ್ಲಿ ಬೆಂಗಾಲ್‌ ಟೈಗರ್ಸ್‌ ಮತ್ತು ಕೇರಳ ಸ್ಟ್ರೈಕರ್ಸ್‌ ತಂಡಗಳು ಸೆಣಸಲಿವೆ. ಫೈನಲ್‌ ಪಂದ್ಯವು ಫೆಬ್ರುವರಿ 1ರಂದು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.