ADVERTISEMENT

ಕರ್ನಾಟಕಕ್ಕೆ ‘ಹ್ಯಾಟ್ರಿಕ್‌’ ಗೆಲುವಿನ ತವಕ

ಸೈಯದ್‌ ಮುಷ್ತಾಕ್‌ ಅಲಿ ಟ್ವೆಂಟಿ–20 ಕ್ರಿಕೆಟ್‌: ಇಂದು ಅರುಣಾಚಲ ಪ್ರದೇಶ ಎದುರು ಪೈಪೋಟಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 20:00 IST
Last Updated 23 ಫೆಬ್ರುವರಿ 2019, 20:00 IST
ಆರ್‌.ವಿನಯ್ ಕುಮಾರ್‌ (ಎಡ) ಮತ್ತು ನಾಯಕ ಮನೀಷ್‌ ಪಾಂಡೆ ಮಿಂಚುವ ವಿಶ್ವಾಸದಲ್ಲಿದ್ದಾರೆ
ಆರ್‌.ವಿನಯ್ ಕುಮಾರ್‌ (ಎಡ) ಮತ್ತು ನಾಯಕ ಮನೀಷ್‌ ಪಾಂಡೆ ಮಿಂಚುವ ವಿಶ್ವಾಸದಲ್ಲಿದ್ದಾರೆ   

ಕಟಕ್‌: ಸತತ ಎರಡು ಪಂದ್ಯಗಳಲ್ಲಿ ಗೆದ್ದು ವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಕರ್ನಾಟಕ ತಂಡ ಈಗ ‘ಹ್ಯಾಟ್ರಿಕ್‌’ ಜಯದ ಮೇಲೆ ಕಣ್ಣಿಟ್ಟಿದೆ.

ಇಲ್ಲಿನ ಬಾರಾಬತಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ತನ್ನ ಮೂರನೇ ಪಂದ್ಯದಲ್ಲಿ ಮನೀಷ್‌ ಪಾಂಡೆ ಬಳಗ ಅರುಣಾಚಲ ಪ್ರದೇಶ ಎದುರು ಪೈಪೋಟಿ ನಡೆಸಲಿದೆ.

‘ಡಿ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿರುವ ಕರ್ನಾಟಕ, ಈ ಪಂದ್ಯದಲ್ಲಿ ಗೆದ್ದು ಅಗ್ರಸ್ಥಾನಕ್ಕೇರುವ ತವಕದಲ್ಲಿದೆ.

ADVERTISEMENT

ಬಂಗಾಳ ಎದುರಿನ ಹಿಂದಿನ ಪಂದ್ಯದಲ್ಲಿ ಶತಕದ ಜೊತೆಯಾಟ ಆಡಿದ್ದ ರೋಹನ್‌ ಕದಂ ಮತ್ತು ಬಿ.ಆರ್‌.ಶರತ್‌ ಈ ಪಂದ್ಯದಲ್ಲೂ ತಂಡಕ್ಕೆ ಅಬ್ಬರದ ಆರಂಭ ನೀಡುವ ಹುಮ್ಮಸ್ಸಿನಲ್ಲಿದ್ದಾರೆ.

ಇವರು ಹಾಕಿ ಕೊಟ್ಟ ಬುನಾದಿಯ ಮೇಲೆ ರನ್‌ ಗೋಪುರ ಕಟ್ಟಲು ನಾಯಕ ಮನೀಷ್‌, ಕರುಣ್ ನಾಯರ್‌ ಮತ್ತು ಕೃಷ್ಣಮೂರ್ತಿ ಸಿದ್ದಾರ್ಥ್‌ ಸನ್ನದ್ಧರಾಗಿದ್ದಾರೆ.

ಅಭಿಮನ್ಯು ಮಿಥುನ್‌ ಮತ್ತು ಆರ್‌.ವಿನಯ್‌ ಕುಮಾರ್‌ ತಂಡದ ಬೌಲಿಂಗ್‌ ಶಕ್ತಿಯಾಗಿದ್ದಾರೆ. ಹಿಂದಿನ ಪಂದ್ಯದಲ್ಲಿ ಪರಿಣಾಮಕಾರಿ ದಾಳಿ ನಡೆಸಿದ್ದ ಇವರು ತಂಡದ ಗೆಲುವಿನ ಹಾದಿ ಸುಲಭ ಮಾಡಿದ್ದರು.

ಮನೋಜ್‌ ಎಸ್‌.ಭಾಂಡಗೆ, ಕೆ.ಸಿ.ಕಾರ್ಯಪ್ಪ ಮತ್ತು ಪ್ರಸಿದ್ಧ ಕೃಷ್ಣ ಅವರೂ ಮೋಡಿ ಮಾಡಲು ಕಾಯುತ್ತಿದ್ದಾರೆ.

ಈ ಬಾರಿ ಆಡಿರುವ ಎರಡು ಪಂದ್ಯಗಳಲ್ಲೂ ಸೋತಿರುವ ಅರುಣಾಚಲ ಪ್ರದೇಶ ತಂಡ ಗೆಲುವಿನ ಲಯಕ್ಕೆ ಮರಳಲು ಹಾತೊರೆಯುತ್ತಿದೆ. ಪಾಯಿಂಟ್ಸ್‌ ಪಟ್ಟಿಯಲ್ಲಿ ಏಳನೇ ಸ್ಥಾನ ಹೊಂದಿರುವ ಈ ತಂಡಕ್ಕೆ ಜಯ ಅನಿವಾರ್ಯ ಎನಿಸಿದೆ.

ಆರಂಭ: ಮಧ್ಯಾಹ್ನ 1.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.