
ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್.
ಬೆಂಗಳೂರು: ಹೋದ ವಾರ ಮಧ್ಯಪ್ರದೇಶ ತಂಡದ ವಿರುದ್ಧ ಅನುಭವಿಸಿದ ಸೋಲು ಕರ್ನಾಟಕ ತಂಡದ ಈ ಮೊದಲಿನ ಭರವಸೆಯ ಅಭಿಯಾನಕ್ಕೆ ತೀವ್ರ ಹಿನ್ನಡೆ ಉಂಟುಮಾಡಿದೆ. ಗುರುವಾರ ಮುಲ್ಲನಪುರದಲ್ಲಿ ಪಂಜಾಬ್ ವಿರುದ್ಧ ನಡೆಯಲಿರುವ ಎಲೀಟ್ ಬಿ ಗುಂಪಿನ ಪಂದ್ಯ ಕರ್ನಾಟಕದ ಪಾಲಿಗೆ ಮಾಡು–ಮಡಿ ಎಂಬಂತಾಗಿದೆ.
ಎಂಟು ಬಾರಿಯ ಚಾಂಪಿಯನ್ ತಂಡವು ಐದು ಪಂದ್ಯಗಳ ನಂತರ ಗುಂಪಿನಲ್ಲಿ ಅಗ್ರಸ್ಥಾನಕ್ಕೆ ಏರಿತ್ತು. ಆದರೆ ಸೀಮಿತ ಓವರುಗಳ ಎರಡು ಟೂರ್ನಿಗಳ ವಿರಾಮದ ಬಳಿಕ ಶುರುವಾದ ಎರಡನೇ ಹಂತದ ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಪರಿಣಾಮ ತಂಡ (21 ಪಾಯಿಂಟ್ಸ್) ಮೂರನೇ ಸ್ಥಾನಕ್ಕೆ ಜಾರಿದೆ. ಈ ಗೆಲುವಿನಿಂದ ಮಧ್ಯಪ್ರದೇಶ (22) ಎರಡನೇ ಸ್ಥಾನಕ್ಕೆ ಏರಿದರೆ, ಮಹಾರಾಷ್ಟ್ರ (24) ಮೊದಲ ಸ್ಥಾನದಲ್ಲಿ ಕುಳಿತಿದೆ.
ಗುಂಪಿನ ಅಂತಿಮ ಪಂದ್ಯಗಳು ಗುರುವಾರ ಆರಂಭವಾಗಲಿದ್ದು, ಈ ಮೂರು ತಂಡಗಳಲ್ಲದೇ, ನಾಲ್ಕನೇ ಸ್ಥಾನದಲ್ಲಿರುವ ಸೌರಾಷ್ಟ್ರ (19) ಸಹ ಎರಡು ಕ್ವಾರ್ಟರ್‌ಫೈನಲ್ ಟಿಕೆಟ್ ಪಡೆಯಲು ಪೈಪೋಟಿಯಲ್ಲಿವೆ.
ಭಾರತ ತಂಡದ ಆಟಗಾರರಾದ ಕೆ.ಎಲ್.ರಾಹುಲ್ ಮತ್ತು ಪ್ರಸಿದ್ಧ ಕೃಷ್ಣ ಅವರು ಮರಳುತ್ತಿರುವುದು ತಂಡದ ಬಲ ಹೆಚ್ಚಿಸಿದೆ. ಕರ್ನಾಟಕದ ಗುರಿ ಸರಳ. ಪಂಜಾಬ್ (11 ಪಾಯಿಂಟ್ಸ್) ವಿರುದ್ಧ ಗೆದ್ದರೆ ನಾಕೌಟ್ ಸ್ಥಾನ ಭದ್ರವಾಗಲಿದೆ. ಮಧ್ಯಪ್ರದೇಶ– ಮಹಾರಾಷ್ಟ್ರ, ಚಂಡೀಗಢ– ಸೌರಾಷ್ಟ್ರ ಹಣಾಹಣಿಯ ಫಲಿತಾಂಶ ಆಗ ಕರ್ನಾಟಕದ ಭವಿಷ್ಯದ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ.
ಒಂದೊಮ್ಮೆ ಪಂಜಾಬ್ ತಂಡವನ್ನು ಸೋಲಿಸಲಾಗದಿದ್ದಲ್ಲಿ, ಕನಿಷ್ಠ ಮೊದಲ ಇನಿಂಗ್ಸ್ ಮುನ್ನಡೆ ಪಡೆದಲ್ಲಿ ನಾಕೌಟ್ ಭವಿಷ್ಯ ಇತರ ಪಂದ್ಯಗಳ ಫಲಿತಾಂಶವನ್ನು ಅವಲಂಬಿಸುತ್ತದೆ. ಮಾಜಿ ಚಾಂಪಿಯನ್ ಸೌರಾಷ್ಟ್ರ ತನ್ನ ಪಂದ್ಯ ಗೆದ್ದು, ಇತರ ಪಂದ್ಯಗಳ ಫಲಿತಾಂಶ ಅದರಿಚ್ಛೆಯಂತೆ ಬಂದರೆ ಆ ತಂಡಕ್ಕೂ ಅವಕಾಶವಿದೆ.
‘ನಮ್ಮ ನಿಯಂತ್ರಣದಲ್ಲಿ ಏನು ಸಾಧ್ಯವಿದೆಯೊ ಅದನ್ನು ಸಾಧಿಸಲು ಪ್ರಯತ್ನಿಸುವುದು ನಮಗೆ ಮುಖ್ಯವಾಗಿದೆ. ಯಾವ ಕ್ಷೇತ್ರದಲ್ಲಿ ನಾವು ಸುಧಾರಿಸಬೇಕೆಂಬುದನ್ನು ಕಳೆದ ಪಂದ್ಯದಿಂದ ಕಂಡುಕೊಂಡಿದ್ದೇವೆ. ತುಂಬಾ ತಲೆಕೆಡಿಸಿಕೊಂಡು ಒತ್ತಡಕ್ಕೆ ಸಿಲುಕಲು ಬಯಸುವುದಿಲ್ಲ’ ಎಂದು ಕರ್ನಾಟಕ ತಂಡದ ಕೋಚ್ ಯರೇ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ರಾಹುಲ್ ಅವರು ಮಯಂಕ್ ಅವರೊಂದಿಗೆ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ಕೋಚ್ ಖಚಿತಪಡಿಸಿದರು. ಮಧ್ಯಪ್ರದೇಶ ವಿರುದ್ಧ ಹಿನ್ನಡೆಯಿಂದಾಗಿ ಮಯಂಕ್ ಅವರು ನಾಯಕತ್ವವನ್ನು ದೇವದತ್ತ ಪಡಿಕ್ಕಲ್‌ಗೆ ಬಿಟ್ಟುಕೊಡಬೇಕಾಯಿತು. ಈ ಹಿಂದಿನ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದ ಕೆ.ವಿ.ಅನೀಶ್ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಪಡಿಕ್ಕಲ್ ನಂತರದ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ
ಕೆಲದಿನಗಳಿಂದ ಮುಲ್ಲನಪುರದಲ್ಲಿ ತೇವದ ವಾತಾವರಣ ಇರುವ ಕಾರಣ ಬೌಲಿಂಗ್ ಸಂಯೋಜನೆ ಟಾಸ್ ಮೊದಲು ನಿರ್ಧಾರವಾಗಲಿದೆ. ಮಳೆಯ ಮುನ್ಸೂಚನೆಯಿಲ್ಲದಿದ್ದರೂ, ಮಂಜು ಮುಸುಕುವ ಸಾಧ್ಯತೆಯಿದೆ. ಪಿಚ್‌ಗೆ ಹೊದಿಕೆ ಹಾಕಲಾಗಿದೆ.
25 ವರ್ಷದ ಪಡಿಕ್ಕಲ್ ಅವರಿಗೆ ನಿರ್ಣಾಯಕ ಸಂದರ್ಭದಲ್ಲಿ ನಾಯಕತ್ವ ಹೆಗಲೇರಿದೆ. ಅತ್ಯುತ್ತಮ ಲಯದಲ್ಲಿರುವ ಅವರ ನಿರ್ವಹಣೆಯ ಮೇಲೂ ಗಮನ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.