
ಬೆಂಗಳೂರು: ಆಲ್‌ರೌಂಡ್ ಪ್ರದರ್ಶನ ನೀಡಿದ ಕರ್ನಾಟಕ ತಂಡವು ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ 6 ವಿಕೆಟ್‌ಗಳಿಂದ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಮಣಿಸಿ, ಶುಭಾರಂಭ ಮಾಡಿತು.
ಜೈಪುರದ ಆರ್‌ಸಿಎ ಅಕಾಡೆಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಜಮ್ಮು– ಕಾಶ್ಮೀರ ತಂಡಕ್ಕೆ ಆರಂಭಿಕ ಆಟಗಾರ್ತಿ ಬವನ್‌ದೀಪ್ ಕೌರ್ (88; 92ಎ, 4x8, 6x3) ಆಸರೆಯಾದರು. ಕೌರ್ ಅವರು ಶನು ದೇವಿ (32; 75ಎ) ಅವರೊಂದಿಗೆ ಮೊದಲ ವಿಕೆಟ್ ಜೊತೆಯಾಟದಲ್ಲಿ 18.6 ಓವರ್‌ಗಳಲ್ಲಿ 83 ರನ್ ಸೇರಿಸಿ, ಉತ್ತಮ ಆರಂಭ ಒದಗಿಸಿದರು.
ಆದರೆ, ಕರ್ನಾಟಕ ಬೌಲರ್‌ಗಳ ಸಾಂಘಿಕ ದಾಳಿ ಎದುರು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಸ್ಪಿನ್ನರ್ ವಂದಿತಾ ಕೆ. ರಾವ್ 2 ವಿಕೆಟ್ ಪಡೆದರೆ, ನಮಿತಾ ಡಿಸೋಜಾ, ಸಾಲೊನಿ ಪಿ. ಹಾಗೂ ಮಿಥಿಲಾ ವಿನೋದ್ ತಲಾ ಒಂದು ವಿಕೆಟ್ ಪಡೆದರು. ರುದ್ರಾಕ್ಷಿ ಚಿಬ್ ಪಡೆಯು 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 211 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ರಾಜ್ಯ ತಂಡಕ್ಕೆ ಪ್ರೇರಣಾ ಜಿ.ಆರ್. (32; 45ಎ, 4x4) ಹಾಗೂ ರಚಿತಾ ಹತ್ವಾರ್ (33; 47ಎ, 4x6) ಅವರು ಮೊದಲ ವಿಕೆಟ್‌ಗೆ 61 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕ್ಕಿ ಪ್ರಸಾದ್ 17 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 33 ರನ್ ಸೂರೆ ಮಾಡಿದರು.
ನಾಯಕಿ ಚಾಂದಸಿ ಕೃಷ್ಣಮೂರ್ತಿ (ಔಟಾಗದೇ 42; 62 ಎ, 4x5) ಹಾಗೂ ಮಿಥಿಲಾ (ಔಟಾಗದೇ 41; 44ಎ, 4x6) ಅವರು ಮುರಿಯದ ಐದನೇ ವಿಕೆಟ್ ಜೊತೆಯಾಟದಲ್ಲಿ 89 ರನ್ ಸೇರಿಸಿದರು. ಕರ್ನಾಟಕ ತಂಡವು 40.3 ಓವರ್‌ಗಳಲ್ಲಿ 4 ವಿಕೆಟ್‌ಗೆ 212 ರನ್ ಗಳಿಸಿ, ಸುಲಭವಾಗಿ ಗುರಿ ಮುಟ್ಟಿತು.
ಸಂಕ್ಷಿಪ್ತ ಸ್ಕೋರು: ಜಮ್ಮು ಮತ್ತು ಕಾಶ್ಮೀರ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 211 (ಬವನ್‌ದೀಪ್ ಕೌರ್ 88, ಶನು ದೇವಿ 32; ವಂದಿತಾ ಕೆ. ರಾವ್ 45ಕ್ಕೆ2); ಕರ್ನಾಟಕ: 40.3 ಓವರ್‌ಗಳಲ್ಲಿ 4 ವಿಕೆಟ್‌ಗೆ 212 (ಚಾಂದಸಿ ಕೃಷ್ಣಮೂರ್ತಿ ಔಟಾಗದೇ 42, ಮಿಥಿಲಾ ವಿನೋದ್ ಔಟಾಗದೇ 41; ರುದ್ರಾಕ್ಷಿ ಚಿಬ್ 38ಕ್ಕೆ2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.