ADVERTISEMENT

ಎಲೀಟ್‌ ಕ್ರಿಕೆಟ್‌ ಟೂರ್ನಿ: ಸೆಮಿಫೈನಲ್‌ಗೆ ಕರ್ನಾಟಕದ ವನಿತೆಯರು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 19:16 IST
Last Updated 8 ಡಿಸೆಂಬರ್ 2025, 19:16 IST
ನಿಕಿ ಪ್ರಸಾದ್‌
ನಿಕಿ ಪ್ರಸಾದ್‌   

ಬೆಂಗಳೂರು: ಆರಂಭ ಆಟಗಾರ್ತಿ ನಿಕಿ ಪ್ರಸಾದ್‌ ಅವರ ಅರ್ಧಶತಕ ಹಾಗೂ ಪಿ. ಸಲೋನಿ ಅವರ ಆಲ್‌ರೌಂಡ್‌ ಆಟದ ಬಲದಿಂದ ಕರ್ನಾಟಕ ತಂಡವು ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಟಿ20 ಟ್ರೋಫಿ ಎಲೀಟ್‌ ಕ್ರಿಕೆಟ್‌ ಟೂರ್ನಿಯಲ್ಲಿ ತಮಿಳುನಾಡು ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿ, ಸೆಮಿಫೈನಲ್‌ ಪ್ರವೇಶಿಸಿತು.

ಅಹಮದಾಬಾದ್‌ನ ಎಡಿಎಸ್‌ಎ ರೈಲ್ವೇಸ್‌ ಕ್ರಿಕೆಟ್‌ ಮೈದಾನದಲ್ಲಿ ಸೋಮವಾರ ನಡೆದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ತಮಿಳುನಾಡು ತಂಡವು ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ಗೆ 129 ರನ್‌ ಗಳಿಸಿತು.

ಆರಂಭ ಆಟಗಾರ್ತಿಯರಾದ ಎನ್‌.ಎಸ್‌.ಶುಭಹರಿಣಿ (46) ಹಾಗೂ ಜಿ.ಕಮಲಿನಿ (41) ಅವರು 92 ರನ್‌ಗಳ ಜೊತೆಯಾಟವಾಗಿ ಉತ್ತಮ ಬುನಾದಿ ಹಾಕಿಕೊಟ್ಟರು. ಆದರೆ, ನಂತರ ಬಂದ ಬ್ಯಾಟರ್‌ಗಳು ಅಷ್ಟೇನೂ ಪರಿಣಾಮಕಾರಿಯಾಗಲಿಲ್ಲ. ಕರ್ನಾಟಕದ ಸಲೋನಿ ಪಿ. 18 ರನ್‌ಗಳಿಗೆ 2 ವಿಕೆಟ್‌ ಪಡೆದರೆ, ನಮಿತಾ ಡಿಸೋಜಾ ಹಾಗೂ ಬಿ.ಜಿ.ತೇಜಸ್ವಿನಿ ತಲಾ ಒಂದು ವಿಕೆಟ್‌ ಕಿತ್ತರು.

ADVERTISEMENT

ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ರೋಷಿಣಿ ಕಿರಣ್‌ ಬಳಗವು 18.1 ಓವರ್‌ಗಳಲ್ಲಿ 4 ವಿಕೆಟ್‌ಗೆ 131 ರನ್‌ ಗಳಿಸಿ ಸಂಭ್ರಮಿಸಿತು. ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ, ದಿಟ್ಟವಾಗಿ ಆಡಿದ ನಿಕಿ (ಔಟಾಗದೇ 58) ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು. ಬಿರುಸಿನ ಆಟವಾಡಿದ ತೇಜಸ್ವಿನಿ (17) ಹಾಗೂ ಸಾಲೊನಿ ಅವರೂ ಉಪಯುಕ್ತ ಕೊಡುಗೆ ನೀಡಿದರು.

ಕರ್ನಾಟಕ ತಂಡವು ಮಂಗಳವಾರ (ಡಿಸೆಂಬರ್ 9) ನಡೆಯಲಿರುವ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ದೆಹಲಿ ತಂಡವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರ್‌: ತಮಿಳುನಾಡು: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 129 (ಎನ್‌.ಎಸ್‌.ಶುಭಹರಿಣಿ 46, ಜಿ.ಕಮಲಿನಿ 41; ಸಲೋನಿ ಪಿ. 18ಕ್ಕೆ 2). ಕರ್ನಾಟಕ: 18.1 ಓವರ್‌ಗಳಲ್ಲಿ 4 ವಿಕೆಟ್‌ಗೆ 131 (ನಿಕಿ ಪ್ರಸಾದ್‌ ಔಟಾಗದೇ 58). ಫಲಿತಾಂಶ: ಕರ್ನಾಟಕ್ಕೆ ಆರು ವಿಕೆಟ್‌ಗಳ ಜಯ.

ಕರ್ನಾಟಕ ತಂಡಕ್ಕೆ ರಚಿತಾ ನಾಯಕತ್ವ

ಉಡುಪಿ: ಬಿಸಿಸಿಐ 19 ವರ್ಷದೊಳಗಿನ ಮಹಿಳಾ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಕುಂದಾಪುರದ ರಚಿತಾ ಹತ್ವಾರ್‌ ಮುನ್ನಡೆಸಲಿದ್ದಾರೆ.

ಇದೇ 13 ರಿಂದ 21ರವರೆಗೆ ಹೈದರಾಬಾದ್‌ನಲ್ಲಿ ಟೂರ್ನಿ ನಡೆಯಲಿದ್ದು, ತಂಡದ ನಾಯಕಿಯಾಗಿ ರಚಿತಾ ಆಯ್ಕೆಯಾಗಿದ್ದಾರೆ. ವಿಕೆಟ್‌ ಕೀಪಿಂಗ್‌ ಮತ್ತು ಬ್ಯಾಟರ್‌ ಆಗಿರುವ ರಚಿತಾ ಸದ್ಯ
ಅಹಮದಾಬಾದ್‌ನಲ್ಲಿ ನಡೆಯುತ್ತಿರುವ 23 ವರ್ಷದೊಳಗಿನ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಕರ್ನಾಟಕದ ಪರ ಆಡುತ್ತಿದ್ದಾರೆ.

ಕುಂದಾಪುರದ ವಕೀಲರಾದ ರಮೇಶ್‌ ಹತ್ವಾರ್‌ ಹಾಗೂ ಸರಿತಾ ಹತ್ವಾರ್‌ ದಂಪತಿಯ ಪುತ್ರಿಯಾಗಿರುವ ರಚಿತಾ ಅವರು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಓಪನ್‌ ಸ್ಕೂಲಿಂಗ್‌ನಲ್ಲಿ (ಎಸ್‌ಐಒಎಸ್‌) ಪ್ರಥಮ ಪಿಯುಸಿ ಕಲಿಯುತ್ತಿದ್ದಾರೆ.

ರಚಿತಾ ಅವರು 2023ರಲ್ಲಿ 16 ವರ್ಷದೊಳಗಿನ ಕರ್ನಾಟಕ ರಾಜ್ಯ ತಂಡಕ್ಕೆ ವಿಕೆಟ್‌ ಕೀಪರ್‌, ಆರಂಭಿಕ ಬ್ಯಾಟರ್‌ ಆಗಿ ಸೇರ್ಪಡೆಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.