ಹರಿಯಾಣ ತಂಡದ ನಾಯಕ ಅಂಕಿತ್ ಕುಮಾರ್ ಅವರು ಶತಕ ಗಳಿಸಿ ಸಂಭ್ರಮಿಸಿದ ರೀತಿ –
ಪ್ರಜಾವಾಣಿ ಚಿತ್ರ/ಎಸ್.ಕೆ. ದಿನೇಶ್
ಬೆಂಗಳೂರು: ಮುಷ್ಟಿಯೊಳಗಿನ ಮರಳು ಜಾರಿಹೋಗುವ ರೀತಿಯಲ್ಲಿಯೇ ಕರ್ನಾಟಕದ ಕೈಯಿಂದ ಈ ಬಾರಿಯ ರಣಜಿ ಟ್ರೋಫಿ ಟೂರ್ನಿಯ ಎಂಟರ ಘಟ್ಟಕ್ಕೆ ಪ್ರವೇಶಿಸುವ ಕನಸು ಕೂಡ ಉದುರಿತು. ಸಿ ಗುಂಪಿನಿಂದ ಕೇರಳ ಮತ್ತು ಹರಿಯಾಣ ತಂಡಗಳು ಕ್ವಾರ್ಟರ್‌ಫೈನಲ್ ಪ್ರವೇಶಿಸುವುದು ಖಚಿತವಾಯಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊನೆಯ ಪಂದ್ಯದ ಎರಡನೇ ದಿನದಾಟದಲ್ಲಿ ಕರ್ನಾಟಕವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ 304 ರನ್‌ಗಳಿಗೆ ಉತ್ತರವಾಗಿ ಹರಿಯಾಣ ತಂಡವು ಅಂಕಿತ ಕುಮಾರ್ (118; 154ಎ, 4X19) ಹೊಡೆದ ಶತಕದ ಬಲದಿಂದ 66 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 232 ರನ್ ಗಳಿಸಿತು. ಇದರಿಂದಾಗಿ ಹರಿಯಾಣ ತಂಡವನ್ನು 154 ರನ್‌ಗಳೊಳಗೇ ಆಲೌಟ್ ಮಾಡಿ ಫಾಲೋ ಆನ್ ಹೇರುವ ಕರ್ನಾಟಕದ ಲೆಕ್ಕಾಚಾರ ಕೈಕೊಟ್ಟಿತು. ಇನಿಂಗ್ಸ್ ಜಯ ಸಾಧಿಸಿ ಬೋನಸ್ ಅಂಕ ಪಡೆಯುವ ಹಾದಿ ಬಂದ್ ಆಯಿತು.
ಗುಂಪಿನ ಕಳೆದ ಆರು ಪಂದ್ಯಗಳಿಂದ ಹರಿಯಾಣ ತಂಡವು 26 ಅಂಕ ಗಳಿಸಿದೆ. ಶುಕ್ರವಾರ ತಿರುವನಂತಪುದಲ್ಲಿ ಬಿಹಾರ ತಂಡವನ್ನು ಇನಿಂಗ್ಸ್ ಮತ್ತು 169 ರನ್‌ಗಳಿಂದ ಸೋಲಿಸಿದ ಕೇರಳ 28 ಅಂಕ ಕಲೆಹಾಕಿದೆ. 19 ಅಂಕ ಗಳಿಸಿರುವ ಕರ್ನಾಟಕ ತಂಡವು ಹರಿಯಾಣವನ್ನು ಇನಿಂಗ್ಸ್ ಅಂತರದಿಂದ ಸೋಲಿಸಿದ್ದರೆ 7 ಅಂಕಗಳು ಸಿಗುತ್ತಿದ್ದವು. ಆಗ ಹರಿಯಾಣದ ಅಂಕಗಳೊಂದಿಗೆ ಸಮಬಲವಾಗುತ್ತಿತ್ತು. ಆಗ ಒಟ್ಟು ರನ್‌ರೇಟ್ ಆಧಾರದಲ್ಲಿ ಕರ್ನಾಟಕ ಎರಡನೇ ಸ್ಥಾನ ಪಡೆದು ಎಂಟರ ಘಟ್ಟಕ್ಕೆ ಪ್ರವೇಶಿಸುವ ಸಾಧ್ಯತೆ ಇತ್ತು. ಆದರೆ ಈಗ ಇನ್ನೂ ಎರಡು ದಿನ ಬಾಕಿ ಇರುವ ಈ ಪಂದ್ಯದಲ್ಲಿ ಕರ್ನಾಟಕ ತಂಡವು ಗೆದ್ದರೂ ಒಟ್ಟು 25 ಅಂಕಗಳಾಗುತ್ತವೆ. ಆದ್ದರಿಂದ ಈ ಗುಂಪಿನಿಂದ ಕೇರಳ ಮತ್ತು ಹರಿಯಾಣ ತಂಡಗಳು ಕ್ವಾರ್ಟರ್‌ಫೈನಲ್ ಪ್ರವೇಶ ಖಚಿತವಾಗಿದೆ.
2015-16 ರ ಋತುವಿನಲ್ಲಿ ಕೂಡ ನಾಕೌಟ್ ಹಂತ ಪ್ರವೇಶಿಸುವಲ್ಲಿ ಕರ್ನಾಟಕ ವಿಫಲವಾಗಿತ್ತು. ಅದರ ನಂತರದ ಋತುಗಳಲ್ಲಿ ಸತತವಾಗಿ ನಾಕೌಟ್ ಪ್ರವೇಶಿಸಿತ್ತು. ಆದರೆ ಈ ಬಾರಿ ಸಾಧ್ಯವಾಗಲಿಲ್ಲ. ಈ ಋತುವಿನ ಆರಂಭಿಕ ಹಂತದ ಎರಡು ಪಂದ್ಯಗಳಿಗೆ ಮಳೆ ಅಡ್ಡಿಯಾಗಿತ್ತು. ಅದರಿಂದಾಗಿ ಕೇವಲ ಎರಡು ಅಂಕಗಳು ಮಾತ್ರ ದೊರೆತಿದ್ದವು. ಉಳಿದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಜಯಿಸಿತ್ತು. ಇನ್ನುಳಿದ ಪಂದ್ಯಗಳು ಡ್ರಾ ಆಗಿದ್ದವು.
18 ರನ್‌ಗಳಿಗೆ 5 ವಿಕೆಟ್!
ಪಂದ್ಯದ ಮೊದಲ ದಿನವಾದ ಗುರುವಾರ ಕರ್ನಾಟಕ ತಂಡವು 89 ಓವರ್‌ಗಳಲ್ಲಿ 5ಕ್ಕೆ267 ರನ್ ಗಳಿಸಿತ್ತು. ಕ್ರೀಸ್‌ನಲ್ಲಿದ್ದ ಶ್ರೀಜಿತ್ ಮತ್ತು ಯಶೋವರ್ಧನ್ ಪರಂತಾಪ್ ಅವರು ಬೌಲರ್‌ಗಳಿಗೆ ಸ್ವಲ್ಪ ಹೊತ್ತು ಪ್ರತಿರೋಧ ತೋರಿದರು. ರಕ್ಷಣಾತ್ಮಕವಾಗಿ ಆಡುವ ಪ್ರಯತ್ನ ಫಲಿಸಲಿಲ್ಲ.
ತಂಡದ ಮೊತ್ತ 286 ರನ್‌ಗಳಾಗಿದ್ದ ಸಂದರ್ಭದಲ್ಲಿ ಯಶೋವರ್ಧನ್ ಔಟಾಗುತ್ತಿದ್ದಂತೆ ಉಳಿದವರೂ ಪಟಪಟನೇ ವಿಕೆಟ್ ಚೆಲ್ಲಿದರು. ಕೇವಲ 18 ರನ್‌ಗಳ ಅಂತರದಲ್ಲಿ 5 ವಿಕೆಟ್‌ಗಳು ಪತನವಾದವು. ಹರಿಯಾಣ ಇನಿಂಗ್ಸ್ ಆರಂಭವಾಯಿತು.
ಅಂಕಿತ್ ಶತಕ
ಹರಿಯಾಣದ ನಾಯಕ ಅಂಕಿತ್ ಕುಮಾರ್ ಅವರು ಲಕ್ಷ್ಯ ದಲಾಲ್ (22 ರನ್) ಅವರೊಂದಿಗೆ ಮೊದಲ ವಿಕೆಟ್ ಜೊತೆಯಾಟದಲ್ಲಿ 74 ರನ್ ಸೇರಿಸಿದರು. ಕರ್ನಾಟಕದ ಪ್ರಸಿದ್ಧ ಕೃಷ್ಣ, ವಿದ್ವತ್ ಕಾವೇರಪ್ಪ, ವಿ. ಕೌಶಿಕ್ ಅವರ ಬೌಲಿಂಗ್‌ಗೆ ತಕ್ಕ ಉತ್ತರ ನೀಡಿದರು. ಬೌಲರ್‌ಗಳು ಎಲ್ಲ ರೀತಿಯ ಅಸ್ತ್ರಗಳನ್ನು ಪ್ರಯೋಗಿಸಿದರೂ ಅಂಕಿತ್ ಲೀಲಾಜಾಲವಾಗಿ ಆಡಿದರು. ಕರ್ನಾಟಕದ ವೇಗಿಗಳೂ ಸ್ಟಂಪ್‌ಲೈನ್ ನೇರವಾಗಿ ಎಸೆತಗಳನ್ನು ಪ್ರಯೋಗಿಸುವಲ್ಲಿ ಹೆಚ್ಚು ಪ್ರಯತ್ನಿಸಲಿಲ್ಲ. ಆದರೆ ಆಫ್‌ಸ್ಟಂಪ್ ಆಚೆಯ ಎಸೆತಗಳ ಪ್ರಯೋಗಕ್ಕೆ ಒತ್ತು ನೀಡಿದರು.
ಇದರಿಂದಾಗಿ ಊಟದ ವಿರಾಮದವರೆಗೂ ಯಾವುದೇ ವಿಕೆಟ್ ಪತನವಾಗಲಿಲ್ಲ. ನಂತರದ ಆಟದಲ್ಲಿ ಯಶೋವರ್ಧನ್ ಬೌಲಿಂಗ್‌ನಲ್ಲಿ ಮೊದಲ ಸ್ಲಿಪ್‌ನಲ್ಲಿದ್ದ ಕೆ.ಎಲ್. ರಾಹುಲ್ ಡೈವ್ ಮಾಡಿ ಪಡೆದ ಕ್ಯಾಚ್‌ಗೆ ಲಕ್ಷ್ಯ ಪೆವಿಲಿಯನ್ ಸೇರಿದರು. ಆದರೆ ಮಯಂಕ್ ಅಗರವಾಲ್ ಅವರು ಯೋಜಿಸಿದ ಎಲ್ಲ ಫೀಲ್ಡಿಂಗ್ ತಂತ್ರಗಳಿಗೆ ಅಂಕಿತ್ ತಿರುಗೇಟು ನೀಡಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಯುವರಾಜ್ ಸಿಂಗ್ (33ರನ್ ) ಅವರೊಂದಿಗೆ 78 ರನ್ ಸೇರಿಸಿದರು.
ದಿನದಾಟದ ಕೊನೆಯ ಹಂತದಲ್ಲಿ ಕರ್ನಾಟಕದ ಬೌಲರ್‌ಗಳು ಒಂದಿಷ್ಟು ಸಂಚಲನ ಮೂಡಿಸಿದರು. ಯುವರಾಜ್ ವಿಕೆಟ್ ಗಳಿಸಿದ ಯಶೋವರ್ಧನ್ ಜೊತೆಯಾಟವನ್ನು ಮುರಿದರು. ಹಿಮಾಂಶು ಸಿಂಧು ಅವರನ್ನು ಕೌಶಿಕ್ ಅವರು ಎಲ್‌ಬಿ ಡಬ್ಲ್ಯು ಬಲೆಗೆ ಕೆಡವಿದರು. ಶತಕ ಹೊಡೆದಿದ್ದ ಅಂಕಿತ್ ಆಟಕ್ಕೆ ಸ್ಪಿನ್ನರ್ ಹಾರ್ದಿಕ್ ರಾಜ್ ತೆರೆಯೆಳೆದರು. ಧೀರು ಸಿಂಗ್ ಅವರ ವಿಕೆಟ್ ಎಗರಿಸಿದ ಪ್ರಸಿದ್ಧ ಕೃಷ್ಣ ಸಂಭ್ರಮಿಸಿದರು.
ನಿಶಾಂತ್ ಸಿಂಧು (ಬ್ಯಾಟಿಂಗ್ 35) ಮತ್ತು ರೋಹಿತ್ ಶರ್ಮಾ (ಬ್ಯಾಟಿಂಗ್ 5) ಕ್ರೀಸ್‌ನಲ್ಲಿದ್ದಾರೆ. ಕರ್ನಾಟಕದ ಮೊದಲ ಇನಿಂಗ್ಸ್ ಮೊತ್ತ ಚುಕ್ತಾ ಮಾಡಲು ತಂಡಕ್ಕೆ ಇನ್ನೂ 72 ರನ್‌ಗಳು ಬೇಕು.
ಜಲಜ್‌ಗೆ 10 ವಿಕೆಟ್:
ಕೇರಳಕ್ಕೆ ಇನಿಂಗ್ಸ್ ಜಯ ತಿರುವನಂತಪುರ (ಪಿಟಿಐ): ಎರಡೇ ದಿನಗಳಲ್ಲಿ ಮುಗಿದ ಪಂದ್ಯದಲ್ಲಿ ಕೇರಳ ತಂಡವು ಬಿಹಾರ ವಿರುದ್ಧ ಇನಿಂಗ್ಸ್ ಮತ್ತು 169 ರನ್‌ಗಳಿಂದ ಜಯಿಸಿತು. ಗುರುವಾರ ಮೊದಲು ಬ್ಯಾಟಿಂಗ್ ಮಾಡಿದ್ದ ಕೇರಳ ತಂಡವು ಮೊದಲ ಇನಿಂಗ್ಸ್‌ನಲ್ಲಿ 101. 2 ಓವರ್‌ಗಳಲ್ಲಿ 351 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಬಿಹಾರ ತಂಡವು 23.1 ಓವರ್‌ಗಳಲ್ಲಿ 64 ರನ್ ಗಳಿಸಿ ಆಲೌಟ್ ಆಯಿತು. ಬಿಹಾರದ ಮೇಲೆ ಫಾಲೋ ಆನ್ ಹೇರಲಾಯಿತು. ಎರಡನೇ ಇನಿಂಗ್ಸ್‌ನಲ್ಲಿ 118 ರನ್ ಗಳಿಗೆ ಬಿಹಾರ ತಂಡ ಸರ್ವಪತನವಾಯಿತು. ಕೇರಳ ತಂಡದ ಬೌಲರ್ ಜಲಜ್ ಸಕ್ಸೆನಾ (19ಕ್ಕೆ5 ಮತ್ತು 34ಕ್ಕೆ5) ಎರಡೂ ಇನಿಂಗ್ಸ್‌ಗಳಲ್ಲಿ ಐದು ವಿಕೆಟ್ ಗೊಂಚಲು ಗಳಿಸಿದರು.
37 ಬಾರಿ ವಿಫಲ ಕರ್ನಾಟಕ ತಂಡವು ರಣಜಿ ಟ್ರೋಫಿ ಟೂರ್ನಿಯ ಇತಿಹಾಸದಲ್ಲಿ ಒಟ್ಟು 37 ಬಾರಿ ನಾಕೌಟ್ ಪ್ರವೇಶಿಸುವಲ್ಲಿ ವಿಫಲವಾಗಿದೆ. ಇದುವರೆಗೆ ಒಟ್ಟು 89 ಟೂರ್ನಿಗಳು ನಡೆದಿವೆ. 2020–21ರಲ್ಲಿ ಕೋವಿಡ್ ಕಾರಣದಿಂದ ಟೂರ್ನಿ ರದ್ದಾಗಿತ್ತು ಎಂದು ಕ್ರಿಕೆಟ್ ಅಂಕಿ ಸಂಖ್ಯೆ ಪರಿಣತರಾದ ಚನ್ನಗಿರಿ ಕೇಶವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.