ADVERTISEMENT

ಬಹುಕಾಲದ ಗೆಳತಿಯೊಂದಿಗೆ ಉದಯ್‌ಪುರದಲ್ಲಿ ಸಪ್ತಪತಿ ತುಳಿದ ಕ್ರಿಕೆಟಿಗ ಕರುಣ್ ನಾಯರ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 9:14 IST
Last Updated 19 ಜನವರಿ 2020, 9:14 IST
ತಮ್ಮ ಪತ್ನಿ ಸನಯಾ ಟಂಕರಿವಾಲಾ ಅವರೊಂದಿಗೆ ಕ್ರಿಕೆಟಿಗ ಕರುಣ್ ನಾಯರ್
ತಮ್ಮ ಪತ್ನಿ ಸನಯಾ ಟಂಕರಿವಾಲಾ ಅವರೊಂದಿಗೆ ಕ್ರಿಕೆಟಿಗ ಕರುಣ್ ನಾಯರ್   

ನವದೆಹಲಿ: ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ಭಾರತದ ಎರಡನೇ ಕ್ರಿಕೆಟ್ ಆಟಗಾರ ಕರುಣ್ ನಾಯರ್, ತಮ್ಮ ಬಹುಕಾಲದ ಗೆಳತಿ ಸನಯಾ ಟಂಕರಿವಾಲಾ ಅವರೊಂದಿಗೆ ಉದಯ್‌ಪುರದಲ್ಲಿ ಸಪ್ತಪದಿ ತುಳಿದಿದ್ದಾರೆ.

ಕರುಣ್ ನಾಯರ್ ಅವರ ವಿವಾಹ ಮತ್ತು ವಿವಾಹೋತ್ತರ ಸಂಭ್ರಮಾಚರಣೆಯಲ್ಲಿ ಭಾರತೀಯ ಕ್ರಿಕೆಟಿಗರಾದ ಶ್ರೇಯಸ್ ಅಯ್ಯರ್, ವರುಣ್‌ ಆ್ಯರನ್‌, ಯಜುವೇಂದ್ರ ಚಾಹಲ್, ಶಾರ್ದುಲ್ ಠಾಕೂರ್ ಮತ್ತು ಅಜಿಂಕ್ಯ ರಹಾನೆ ಭಾಗಿಯಾಗಿದ್ದರು.

ಕರುಣ್ ನಾಯರ್ ಮತ್ತು ಸನಾಯ ಟಂಕರಿವಾಲಾ ಅವರ ಮದುವೆಯ ಫೋಟೊದೊಂದಿಗೆ "ಜೀವಿತಾವಧಿಯಲ್ಲಿ ಪ್ರೀತಿ ಮತ್ತು ಸಂತೋಷದೊಂದಿಗೆ" ಎಂದು 9 ಏಕದಿನ ಪಂದ್ಯ ಮತ್ತು ಭಾರತದ ಪರವಾಗಿ ಅನೇಕ ಟೆಸ್ಟ್ ಪಂದ್ಯಗಳನ್ನು ಆಡಿದ ವೇಗದ ಬೌಲರ್ ವರುಣ್ ಆರನ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ವಿವಾಹದಲ್ಲಿ ಪಾಲ್ಗೊಂಡಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್, ಸ್ಪಿನ್ನರ್ ಯಜುವೇಂದ್ರ ಚಾಹಲ್ ಮತ್ತು ವೇಗದ ಬೌಲರ್ ಶಾರ್ದುಲ್ ಠಾಕೂರ್ ಅವರೊಂದಿಗಿರುವ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಮೂವರು ಕ್ರಿಕೆಟಿಗರು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಟೀಂ ಇಂಡಿಯಾದ ಭಾಗವಾಗಿದ್ದಾರೆ.

ಕರುಣ್ ನಾಯರ್ ಅವರ ಅನೇಕ ಅಭಿಮಾನಿಗಳು ಅವರ ಮದುವೆಯ ಫೋಟೊಗಳನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಚಿತ್ರವೊಂದರಲ್ಲಿ ಭಾರತದ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಅವರು ತಮ್ಮ ಪತ್ನಿ ರಾಧಿಕಾ ಧೋಪವ್ಕರ್ ಮತ್ತು ಪುತ್ರಿಯೊಂದಿಗೆ ಇದ್ದಾರೆ.

ಕಳೆದ ವರ್ಷದ ಜೂನ್‌ನಲ್ಲಿ ಕರುಣ್ ನಾಯರ್ ಅವರು ತಾವು ನಿಶ್ಚಿತಾರ್ಥ ಮಾಡಿಕೊಂಡಿದ್ದ ಬಗ್ಗೆ ಬಹಿರಂಗಪಡಿಸಿದ್ದರು. ‘ಶಿ ಸೆಡ್‌ ಯೆಸ್‌’ (ಅವಳು ಸಮ್ಮತಿಸಿದಳು) ಎಂದು ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು. ಸನಾಯಾ ಜೊತೆಗಿರುವ ಚಿತ್ರ ಮತ್ತು ವಿಡಿಯೊವನ್ನೂ ಪೋಸ್ಟ್‌ ಮಾಡಿದ್ದರು.

28 ವರ್ಷದ ಕರುಣ್‌, ಭಾರತದ ಪರ ಆರು ಟೆಸ್ಟ್‌ ಮತ್ತು ಎರಡು ಏಕದಿನ ಪಂದ್ಯ ಆಡಿದ್ದಾರೆ. 2016ರ ಡಿಸೆಂಬರ್‌ನಲ್ಲಿ ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಪಂದ್ಯದಲ್ಲಿ 303 ರನ್ ಸಿಡಿಸಿ ಮಿಂಚಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.