ಬೆಂಗಳೂರು: ‘ಪ್ರಿಯ ಕ್ರಿಕೆಟ್ ನನಗೆ ಇನ್ನೊಂದು ಅವಕಾಶ ಕೊಡು’–
2022ರ ಡಿಸೆಂಬರ್‌ನಲ್ಲಿ ಕರ್ನಾಟಕದ ಕ್ರಿಕೆಟಿಗ ಕರುಣ್ ನಾಯರ್ ಅವರು ಹಾಕಿದ್ದ ಎಕ್ಸ್ ಸಂದೇಶ ಇದು. ಕ್ರಿಕೆಟ್ ಅವರಿಗೆ ಮತ್ತೊಂದು ಅವಕಾಶ ನೀಡಿತು. ಅದನ್ನು ಅವರು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರು ಈಗ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ವಿದರ್ಭ ತಂಡದಲ್ಲಿ ಆಡುತ್ತಿದ್ದಾರೆ. ಒಟ್ಟು 5 ಶತಕಗಳನ್ನು ಬಾರಿಸಿದ್ದಾರೆ. 7 ಪಂದ್ಯಗಳಲ್ಲಿ 664 ರನ್ ಕಲೆಹಾಕಿ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
2022ರಲ್ಲಿ ಅವರು ತಮ್ಮ ಫಾರ್ಮ್ ಕೊರತೆ ಅನುಭವಿಸಿದ್ದರು. ತಮ್ಮ ತವರು ಕರ್ನಾಟಕ ತಂಡದಿಂದ ಬಹುತೇಕ ಸ್ಥಾನ ಕಳೆದುಕೊಂಡಿದ್ದರು. ನಂತರದ ಋತುವಿನಲ್ಲಿ ಅವರು ವಿದರ್ಭ ತಂಡಕ್ಕೆ ಸೇರ್ಪಡೆಯಾದರು. 33 ವರ್ಷದ ಕರುಣ್ ತಮ್ಮ ಆಟದ ಮೂಲಕ ಭಾರತ ತಂಡದ ಆಯ್ಕೆ ಸಮಿತಿಯ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ತಂಡದ ಆಯ್ಕೆ ಇನ್ನೂ ಬಾಕಿ ಇದೆ. ವಿಜಯ್ ಹಜಾರೆ ಟೂರ್ನಿಯಲ್ಲಿ ಉತ್ತಮವಾಗಿ ಆಡುತ್ತಿರುವವರ ಮೇಲೆ ಆಯ್ಕೆ ಸಮಿತಿಯ ನಿಗಾ ಇದೆ. ಕರುಣ್ ಭರ್ಜರಿ ಫಾರ್ಮ್‌ನಲ್ಲಿದ್ದು ಅವರ ಆಟದಿಂದಾಗಿ ವಿದರ್ಭ ಸೆಮಿಫೈನಲ್ ಪ್ರವೇಶಿಸಿದೆ.
'ಭಾರತ ತಂಡಕ್ಕೆ ಮರಳುವ ಹಾದಿ ಅಷ್ಟು ಸುಲಭವಲ್ಲ ಎಂಬುದರ ಅರಿವು ನನಗಿದೆ. ಆದರೂ ಆ ಅವಕಾಶ ಹತ್ತಿರದಲ್ಲಿದೆ ಎಂಬ ಭಾವದೊಂದಿಗೆ ಆಡುತ್ತಿದ್ದೇನೆ. ಅದ್ದರಿಂದ ನಾನೀಗ ಮಾಡುತ್ತಿರುವ ಕಾರ್ಯವನ್ನು ಮುಂದುವರಿಸುತ್ತೇನೆ. ತಲೆಬಾಗಿ ಆಡುವುದಷ್ಟೇ ಈಗ ಇರುವ ಅವಕಾಶ. ಉಳಿದಿದ್ದು ನನ್ನ ಕೈಗಳಲ್ಲಿ ಇಲ್ಲ’ ಎಂದು ಕರುಣ್ ‘ಪ್ರಜಾವಾಣಿ’ಗೆ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಗಳಿಸಿದ ಭಾರತದ ಎರಡನೇ ಆಟಗಾರ ಕರುಣ್ ನಾಯರ್. 6 ಟೆಸ್ಟ್ ಮತ್ತು 2 ಏಕದಿನ ಪಂದ್ಯಗಳನ್ನು ಅವರು ಭಾರತದ ಪರವಾಗಿ ಆಡಿದ್ದಾರೆ.
‘ಹೆಚ್ಚು ಎಸೆತಗಳನ್ನು ಎದುರಿಸುವಂತಹ ಸಾಧಾರಣ ಅಭ್ಯಾಸವನ್ನು ಮಾಡುತ್ತಿದ್ದೇನೆ. ಹೆಚ್ಚು ಕ್ಲಿಷ್ಟಕರಗೊಳಿಸಿಕೊಳ್ಳುವುದಿಲ್ಲ. ನಾನು ಲಯಕ್ಕೆ ಮರಳಿದರೆ ಉಳಿದ ಕೌಶಲಗಳನ್ನು ಪ್ರಯೋಗಿಸುವುದು ಸುಲಭ. ಜಿಮ್ನಾಷಿಯಂನಲ್ಲಿ ಕಸರತ್ತು ಮಾಡಿ ಫಿಟ್‌ನೆಸ್‌ಗೆ ಒತ್ತು ನೀಡುತ್ತಿದ್ದೇನೆ. ಆಗಿ ಹೋಗಿರುವುದನ್ನು ಬಿಟ್ಟು ಮುಂದಿನ ಯೋಜನೆ ಬಗ್ಗೆ ಗಮನ ಕೊಡುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.