ADVERTISEMENT

ಆಸ್ಟ್ರೇಲಿಯಾಕ್ಕೆ ಶ್ರೀಲಂಕಾ ತಿರುಗೇಟು, ಕರುಣರತ್ನೆ, ಮೆಂಡಿಸ್‌ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 15:11 IST
Last Updated 9 ಜುಲೈ 2022, 15:11 IST
ಅರ್ಧಶತಕ ಗಳಿಸಿದ ದಿಮುತ್‌ ಕರುಣರತ್ನೆ –ಎಎಫ್‌ಪಿ ಚಿತ್ರ
ಅರ್ಧಶತಕ ಗಳಿಸಿದ ದಿಮುತ್‌ ಕರುಣರತ್ನೆ –ಎಎಫ್‌ಪಿ ಚಿತ್ರ   

ಗಾಲ್: ನಾಯಕ ದಿಮುತ್‌ ಕರುಣರತ್ನೆ (86) ಮತ್ತು ಕುಶಾಲ್‌ ಮೆಂಡಿಸ್‌ (ಬ್ಯಾಟಿಂಗ್ 84) ಅವರ ಅರ್ಧಶತಕಗಳ ನೆರವಿನಿಂದ ಶ್ರೀಲಂಕಾ ತಂಡ, ಎರಡನೇ ಕ್ರಿಕೆಟ್‌ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾಕ್ಕೆ ದಿಟ್ಟ ಉತ್ತರ ನೀಡಿದೆ.

ಗಾಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನ ಶನಿವಾರದ ಆಟದ ಅಂತ್ಯಕ್ಕೆ ಶ್ರೀಲಂಕಾ, 2 ವಿಕೆಟ್‌ಗೆ 184 ರನ್‌ ಗಳಿಸಿದೆ. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 364 ರನ್‌ ಗಳಿಸಿತ್ತು.

ಆತಿಥೇಯ ತಂಡ ಪತುಮ್‌ ನಿಸ್ಸಾಂಕ (6) ಅವರನ್ನು ಬೇಗನೇ ಕಳೆದುಕೊಂಡಿತು. ಕರುಣರತ್ನೆ ಮತ್ತು ಮೆಂಡಿಸ್‌ ಎರಡನೇ ವಿಕೆಟ್‌ಗೆ 152 ರನ್‌ ಸೇರಿಸಿ ತಂಡಕ್ಕೆ ಆಸರೆಯಾದರು. ಕರುಣರತ್ನೆ ವಿಕೆಟ್ ಪಡೆದ ಮಿಚೆಲ್ ಸ್ವೆಪ್ಸನ್‌ ಈ ಜತೆಯಾಟ ಮುರಿದರು. 165 ಎಸೆತಗಳನ್ನು ಎದುರಿಸಿದ ಅವರು 10 ಬೌಂಡರಿ ಹೊಡೆದರು.

ADVERTISEMENT

ಮೆಂಡಿಸ್‌ ಮತ್ತು ಏಂಜೆಲೊ ಮ್ಯಾಥ್ಯೂಸ್‌ (6) ಕ್ರೀಸ್‌ನಲ್ಲಿದ್ದರು. 152 ಎಸೆತಗಳನ್ನು ಎದುರಿಸಿರುವ ಮೆಂಡಿಸ್‌, 9 ಬೌಂಡರಿ ಹೊಡೆದಿದ್ದಾರೆ.

ಇದಕ್ಕೂ ಮುನ್ನ 5 ವಿಕೆಟ್‌ಗೆ 298 ರನ್‌ಗಳಿಂದ ದಿನದಾಟ ಮುಂದುವರಿಸಿದ ಆಸ್ಟ್ರೇಲಿಯಾ, ಪ್ರಭತ್‌ ಜಯಸೂರ್ಯ ಅವರ ಬಿಗುವಾದ ಬೌಲಿಂಗ್ ದಾಳಿಗೆ ನಲುಗಿ 364 ರನ್‌ಗಳಿಗೆ ಆಲೌಟಾಯಿತು. ಪ್ರಭತ್ 118 ರನ್‌ಗಳಿಗೆ 6 ವಿಕೆಟ್‌ ಪಡೆದರು.

ಸ್ಟೀವನ್‌ ಸ್ಮಿತ್‌ ಅವರು 145 ರನ್‌ ಗಳಿಸಿ (272 ಎ, 4X16) ಔಟಾಗದೆ ಉಳಿದರು. ಕೊನೆಯ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ಅವರಿಗೆ ತಕ್ಕ ಸಾಥ್‌ ಸಿಗಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌ ಆಸ್ಟ್ರೇಲಿಯಾ 364 (110 ಓವರ್) ಮಾರ್ನಸ್‌ ಲಾಬುಶೇನ್ 104, ಸ್ಟೀವನ್‌ ಸ್ಮಿತ್ ಔಟಾಗದೆ 145, ಅಲೆಕ್ಸ್ ಕೇರಿ 28, ಪ್ರಭತ್ ಜಯಸೂರ್ಯ 118ಕ್ಕೆ 6, ಕಸುನ್‌ ರಜಿತ 70ಕ್ಕೆ 2

ಶ್ರೀಲಂಕಾ 2ಕ್ಕೆ 184 (63 ಓವರ್) ದಿಮುತ್‌ ಕರುಣರತ್ನೆ 86, ಕುಶಾಲ್‌ ಮೆಂಡಿಸ್‌ ಬ್ಯಾಟಿಂಗ್ 84, ಏಂಜೆಲೊ ಮ್ಯಾಥ್ಯೂಸ್ ಬ್ಯಾಟಿಂಗ್‌ 6, ಮಿಚೆಲ್‌ ಸ್ಟಾರ್ಕ್‌ 28ಕ್ಕೆ 1, ಮಿಚೆಲ್ ಸ್ವೆಪ್ಸನ್‌ 31ಕ್ಕೆ 1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.