ವಡೋದರಾ: ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡವು ಬುಧವಾರ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಹರಿಯಾಣದ ಸವಾಲು ಎದುರಿಸಲಿದೆ.
ನಾಲ್ಕು ಬಾರಿಯ ಚಾಂಪಿಯನ್ ಕರ್ನಾಟಕ ತಂಡದ ನಾಯಕ ಮಯಂಕ್, ದೇವದತ್ತ ಪಡಿಕ್ಕಲ್, ಕೆ.ಎಲ್. ಶ್ರೀಜಿತ್ ಮತ್ತು ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರು ಉತ್ತಮ ಲಯದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಅನುಭವಿ ಪ್ರಸಿದ್ಧ ಕೃಷ್ಣ, ವಿ. ಕೌಶಿಕ್ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಮಯಂಕ್ ಅವರು ಈ ಟೂರ್ನಿಯಲ್ಲಿ ನಾಲ್ಕು ಶತಕ ಗಳಿಸಿದ್ದಾರೆ. ಒಟ್ಟು 619 ರನ್ ಕಲೆಹಾಕಿದ್ದಾರೆ. ಕ್ವಾರ್ಟರ್‌ಫೈನಲ್‌ನಲ್ಲಿ ದೇವದತ್ತ ಕೂಡ ಶತಕ ದಾಖಲಿಸಿದ್ದರು.
ಕರ್ನಾಟಕ ತಂಡವು ಎಂಟರ ಘಟ್ಟದಲ್ಲಿ ಬರೋಡಾ ಎದುರು ರೋಚಕ ಜಯ ಸಾಧಿಸಿತ್ತು. ಹರಿಯಾಣ ತಂಡವು ಗುಜರಾತ್ ವಿರುದ್ಧ ಗೆದ್ದು ನಾಲ್ಕರ ಘಟ್ಟಕ್ಕೆ ಬಂದಿದೆ.
ಹರಿಯಾಣ ತಂಡದಲ್ಲಿ ನಿಶಾಂತ್ ಸಿಂಧು, ಅನ್ಷುಲ್ ಕಾಂಭೋಜ್ ಮತ್ತು ಅಂಕಿತ್ ಕುಮಾರ್ ಅವರು ಉತ್ತಮ ಲಯದಲ್ಲಿದ್ದಾರೆ. ಬೌಲರ್ ಅನುಜ್ ಟಕ್ರಾಲ್, ಪಾರ್ಥ್ ವತ್ಸ್, ಹಿಮಾಂಶು ರಾಣಾ ಅವರೂ ಇದುವರೆಗೆ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಕೋತಂಬಿ ಕ್ರೀಡಾಂಗಣದಲ್ಲಿ ಈ ಪಂದ್ಯವು ನಡೆಯಲಿದೆ.
ಆರಂಭ: ಮಧ್ಯಾಹ್ನ 1.30
ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೊ ಸಿನಿಮಾ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.