ADVERTISEMENT

ವಿಶ್ವಕಪ್ ಟೂರ್ನಿ 2003 : ಪಾಕ್‌ಗೆ ಸಚಿನ್ ಆಘಾತ; ಕೀನ್ಯಾ ಅಚ್ಚರಿಯ ಓಟ

ವಿಶ್ವಕಪ್ ಹೆಜ್ಜೆಗುರುತುಗಳು

​ಪ್ರಜಾವಾಣಿ ವಾರ್ತೆ
Published 14 ಮೇ 2019, 20:12 IST
Last Updated 14 ಮೇ 2019, 20:12 IST
ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್
ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್   

2003ರ ವಿಶ್ವಕಪ್ ಟೂರ್ನಿಯಲ್ಲಿ ಕ್ರಿಕೆಟ್‌ ಅಭಿಮಾನಿಗಳನ್ನು ಬಹುವಾಗಿ ಸೆಳೆದ ವಿಷಯಗಳಲ್ಲಿ ಎರಡು ಮಹತ್ವದ ಸಂಗತಿಗಳು ಇವೆ. ಅದರಲ್ಲಿ ಒಂದು ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ. ಅದರಲ್ಲಿ ಸಚಿನ್ ತೆಂಡೂಲ್ಕರ್‌ ಬ್ಯಾಟಿಂಗ್ ವೈಭವ. ಇನ್ನೊಂದು; ಆ ಸಂದರ್ಭದಲ್ಲಿ ಕ್ರಿಕೆಟ್‌ ಲೋಕದ ಹಸುಗೂಸು ಕೀನ್ಯಾ ದೇಶದ ತಂಡವು ಸೆಮಿಫೈನಲ್ ಪ್ರವೇಶಿಸಿದ್ದು ಅಚ್ಚರಿ ಮೂಡಿಸಿತ್ತು.

* ಆ ವರ್ಷದ ಮಾರ್ಚ್‌ 1ರಂದು ಸೆಂಚುರಿಯನ್ ಪಾರ್ಕ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಇತ್ತ ಭಾರತದ ಕ್ರಿಕೆಟ್‌ ಅಭಿಮಾನಿಗಳು ಬೆಳಗಿನ ಜಾವ ಐದು ಗಂಟೆಯಿಂದಲೇ ಟಿವಿಗಳ ಮುಂದೆ ಪವಡಿಸಿದ್ದರು. ಪಾಕ್ ತಂಡದ ನಾಯಕ ವಕಾರ್ ಯೂನಸ್‌ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

* ಆರಂಭಿಕ ಬ್ಯಾಟ್ಸ್‌ಮನ್ ಸಯೀದ್ ಅನ್ವರ್ (101; 126ಎಸೆತ, 7ಬೌಂಡರಿ) ಆಕರ್ಷಕ ಶತಕ ಹೊಡೆದರು. ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 273 ರನ್‌ ಗಳಿಸಿತು.

ADVERTISEMENT

* ವಕಾರ್, ವಾಸೀಂ ಅಕ್ರಂ ಮತ್ತು ಶೋಯಬ್ ಅಕ್ತರ್ ಅವರಂತಹ ಘಟಾನುಘಟಿ ಬೌಲರ್‌ಗಳು ಪಾಕ್ ತಂಡಕ್ಕೆ ಗೆಲುವು ಕೊಡಿಸಲು ಪಣ ತೊಟ್ಟಿದ್ದರು. ಆದರೆ, ಭಾರತದ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಜೋಡಿಯು ಪಾಕ್ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿತು. ಅಪ್ಪರ್‌ಕಟ್, ಡ್ರೈವ್, ಪುಲ್‌ ಹೊಡೆತಗಳ ಆಟ ರಂಗೇರಿತು. ಕೇವಲ 5.4 ಓವರ್‌ಗಳಲ್ಲಿ ತಂಡದ ಮೊತ್ತ 50ರ ಗಡಿ ದಾಟಿತು. ಆದರೆ ಆರನೇ ಓವರ್‌ನಲ್ಲಿ ವಕಾರ್ ಅವರ ಎರಡು ಎಸೆತಗಳಲ್ಲಿ ಸೆಹ್ವಾಗ್ ಮತ್ತು ನಾಯಕ ಗಂಗೂಲಿ ಔಟಾದರು.

* ತಂಡವನ್ನು ಸಂಕಷ್ಟದ ಹಾದಿಯಿಂದ ಗೆಲುವಿನತ್ತ ಎತ್ತಿ ತರುವಲ್ಲಿ ಸಚಿನ್ ಯಶಸ್ವಿಯಾದರು. ಮೊಹಮ್ಮದ್ ಕೈಫ್ ಜೊತೆಗೆ 102 ರನ್‌ ಸೇರಿಸಿದರು. ಸಚಿನ್ 98 ರನ್‌ ಗಳಿಸಿದರು. ಶತಕಕ್ಕೆ ಎರಡು ರನ್ ಅಗತ್ಯವಿದ್ದಾಗ ಔಟಾದರು. ನಂತರ ರಾಹುಲ್ ದ್ರಾವಿಡ್ ಮತ್ತು ಅರ್ಧಶತಕ ಬಾರಿಸಿದ ಯುವರಾಜ್ ಸಿಂಗ್ ತಂಡವನ್ನು ಜಯದ ದಡ ಸೇರಿಸಿದರು. ಭಾರತ 6 ವಿಕೆಟ್‌ಗಳಿಂದ ಗೆದ್ದರೆ, ಸಚಿನ್ ಪಂದ್ಯಶ್ರೇಷ್ಠರಾದರು.

* ಕೀನ್ಯಾ ದೇಶವು ಈ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದು ರೋಚಕಗಾಥೆ. ಈ ಹಾದಿಯಲ್ಲಿ ಸ್ಟೀವ್ ಟಿಕೊಲೊ ನಾಯಕತ್ವದ ತಂಡವು 1996ರ ವಿಶ್ವ ಚಾಂಪಿಯನ್ ಶ್ರೀಲಂಕಾ ತಂಡಕ್ಕೆ ಸೋಲುಣಿಸಿತ್ತು. ನೈರೋಬಿಯಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಕೀನ್ಯಾ ತಂಡವು ಮೊದಲು ಬ್ಯಾಟಿಂಗ್ ಮಾಡಿ 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 210 ರನ್ ಗಳಿಸಿತ್ತು. ಈ ಸಾಧಾರಣ ಗುರಿಯನ್ನು ಮುಟ್ಟಲು ಲಂಕಾದ ಜಯಸೂರ್ಯ, ಮರ್ವನ್ ಅಟ್ಟಪಟ್ಟು, ಮಹೇಲ ಜಯವರ್ಧನೆ, ಅರವಿಂದ ಡಿಸಿಲ್ವಾ, ಕುಮಾರ ಸಂಗಕ್ಕಾರ ಮತ್ತು ಹಷನ್ ತಿಲಕರತ್ನೆ ಅವರಂತಹ ಬ್ಯಾಟ್ಸ್‌ಮನ್‌ಗಳಿಗೆ ಸಾಧ್ಯವಾಗಲಿಲ್ಲ.

* ಒಟ್ಟು 9 ಪಂದ್ಯಗಳಲ್ಲಿ ಆಡಿದ್ದ ಕೀನ್ಯಾ ನಾಲ್ಕರಲ್ಲಿ ಗೆದ್ದು ಐದರಲ್ಲಿ ಸೋತಿತ್ತು. ಸೆಮಿಫೈನ ಲ್‌ನಲ್ಲಿ ಭಾರತದ ಎದುರು ಪರಾಭವಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.