ADVERTISEMENT

ಉದ್ಯಾನನಗರಿಗೆ ಖೇಲೊ ಇಂಡಿಯಾ ಶ್ರೇಷ್ಠತಾ ಕೇಂದ್ರ

8 ರಾಜ್ಯಗಳಲ್ಲಿ ಕೇಂದ್ರಗಳನ್ನು ಆರಂಭಿಸಲಿರುವ ಇಲಾಖೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 22:18 IST
Last Updated 16 ಜೂನ್ 2020, 22:18 IST
ಬೆಂಗಳೂರಿನಲ್ಲಿ ಈಚೆಗೆ ನಡೆದಿದ್ದ ಮಿನಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ವಿದ್ಯಾನಗರ ಕ್ರೀಡಾ ನಿಲಯದ ತಂಡ –ಪ್ರಜಾವಾಣಿ ಸಂಗ್ರಹ ಚಿತ್ರ
ಬೆಂಗಳೂರಿನಲ್ಲಿ ಈಚೆಗೆ ನಡೆದಿದ್ದ ಮಿನಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ವಿದ್ಯಾನಗರ ಕ್ರೀಡಾ ನಿಲಯದ ತಂಡ –ಪ್ರಜಾವಾಣಿ ಸಂಗ್ರಹ ಚಿತ್ರ   

ಬೆಂಗಳೂರು: ನಗರದ ಹೊರವಲಯದಲ್ಲಿರುವ ವಿದ್ಯಾನಗರದ ಕ್ರೀಡಾವಸತಿ ಶಾಲೆ ಕೇಂದ್ರಕ್ಕೆ ಖೇಲೊ ಇಂಡಿಯಾ ಶ್ರೇಷ್ಠತಾ ಕೇಂದ್ರದ ಮಾನ್ಯತೆ ಸಿಗಲಿದೆ.

ಮಂಗಳವಾರ ಕೇಂದ್ರಕ್ರೀಡಾ ಇಲಾಖೆಯು ಅಂತಿಮಗೊಳಿಸಿರುವ ಪಟ್ಟಿಯಲ್ಲಿ ಒಟ್ಟು ಎಂಟು ರಾಜ್ಯಗಳಿವೆ. ಅದರಲ್ಲಿ ಕರ್ನಾಟಕವೂ ಒಂದು. ಹೋದ ವರ್ಷವೇ ರಾಜ್ಯ ಕ್ರೀಡಾ ಇಲಾಖೆಯು ಪ್ರಸ್ತಾವ ಸಲ್ಲಿಸಿತ್ತು.

‘ವಿದ್ಯಾನಗರ ಕೇಂದ್ರದಲ್ಲಿ ಉತ್ತಮ ಮೂಲಸೌಲಭ್ಯಗಳು ಇವೆ. 68 ಎಕರೆ ಜಾಗದಲ್ಲಿ ಅಥ್ಲೆಟಿಕ್ಸ್‌, ವಾಲಿಬಾಲ್‌, ಫುಟ್‌ಬಾಲ್ ಮತ್ತು ಬ್ಯಾಸ್ಕೆಟ್‌ಬಾಲ್‌ ಕ್ರೀಡೆಯ ಉತ್ತಮ ಸೌಲಭ್ಯಗಳು ಇವೆ. ಅಲ್ಲದೇ ಒಳಾಂಗಣ ಕ್ರೀಡಾಂಗಣ 10 ಮೀಟರ್‌ ಶೂಟಿಂಗ್ ರೇಂಜ್, ಜಿಮ್ನಾಷಿಯಂ, ವಸತಿ ಸಂಕೀರ್ಣವೂ ಇದೆ. ಈಜುಗೊಳವೂ ಇದೆ. ಆದ್ದರಿಂದ ಇಲ್ಲಿಗೆ ಶ್ರೇಷ್ಠತಾ ಕೇಂದ್ರದ ಮಾನ್ಯತೆ ಸಿಗುವ ಸಾಧ್ಯತೆಯನ್ನು ನಿರೀಕ್ಷಿಸಲಾಗಿತ್ತು’ ಎಂದು ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

‘ಮೆಗಾ ಸೆಂಟರ್‌’ ಎಂಬ ಹೆಸರಿನಲ್ಲಿ ಈ ಶ್ರೇಷ್ಠತಾ ಕೇಂದ್ರವು ಕಾರ್ಯ ನಿರ್ವಹಿಸುತ್ತದೆ. ಸದ್ಯ ಇರುವ ಮೂಲಸೌಲಭ್ಯಗಳನ್ನು ಉನ್ನತಿಕರಿಸಲು ಸಹಾಯ ನೀಡುತ್ತದೆ. ಸಲಕರಣೆಗಳು, ತರಬೇತಿ, ನಿರ್ವಹಣಾ ವೆಚ್ಚ ಮತ್ತು ಕ್ರೀಡಾ ವಿಜ್ಞಾನದ ನೆರವನ್ನು ನೀಡಲಿದೆ.

‘ಒಟ್ಟು 14 ಕ್ರೀಡೆಗಳನ್ನು ಕೇಂದ್ರ ಕ್ರೀಡಾ ಇಲಾಖೆ ಪಟ್ಟಿ ಮಾಡಿದೆ. ಅದರಲ್ಲಿ ಮೂರು ಕ್ರೀಡೆಗಳನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು. ಆ ಕ್ರೀಡೆಗಳಿಗೆ ಶ್ರೇಷ್ಠತಾ ನೆರವು ಸಿಗುತ್ತದೆ. ನಮ್ಮ ರಾಜ್ಯದಲ್ಲಿ ಈಜು ಕ್ರೀಡೆಯು ಉತ್ತುಂಗ ಸಾಧನೆ ಮಾಡಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಈಜುಪಟುಗಳು ಇಲ್ಲಿದ್ದಾರೆ. ಆದ್ದರಿಂದ ಈಜು ಕ್ರೀಡೆಗೆ ಆದ್ಯತೆ ನೀಡಿದ್ದೇವೆ. ಅದರ ಜೊತೆಗೆ ಶೂಟಿಂಗ್ ಮತ್ತು ಅಥ್ಲೆಟಿಕ್ಸ್‌ ಕ್ರೀಡೆಗಳಿಗೆ ಪ್ರಸ್ತಾವ ಸಲ್ಲಿಸಿದ್ದೇವೆ. ಒಲಿಂಪಿಕ್ಸ್‌ಗಳಲ್ಲಿ ಸಾಧನೆ ಮಾಡಿದ ಶೂಟಿಂಗ್ ಮತ್ತು ಅಥ್ಲೆಟಿಕ್ಸ್‌ ಪಟುಗಳು ನಮ್ಮಲ್ಲಿದ್ದಾರೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹೋದ ವರ್ಷ ಕೇಂದ್ರ ಕ್ರೀಡಾ ಇಲಾಖೆಗೆ 15 ರಾಜ್ಯಗಳು ಪ್ರಸ್ತಾವ ಸಲ್ಲಿಸಿದ್ದವು. ಅದರಲ್ಲಿ ಕರ್ನಾಟಕ, ಒಡಿಶಾ, ಕೇರಳ, ತೆಲಂಗಾಣ, ಅರುಣಾಚಲಪ್ರದೇಶ, ಮಣಿಪುರ, ಮಿಜೋರಾಂ ಮತ್ತು ನಾಗಾಲ್ಯಾಂಡ್‌ ರಾಜ್ಯಗಳನ್ನು ಅಂತಿಮಗೊಳಿಸಿದೆ.

‘ಇದೊಂದು ಅನುದಾನ ಅಧಾರಿತ ಯೋಜನೆಯಾಗಿದೆ. ಈ ಕೇಂದ್ರಗಳ ಸಮಗ್ರ ಪರಿಶೀಲನೆ ಮತ್ತು ಅಧ್ಯಯನ ನಡೆಸಿದ ನಂತರ ಮಂಜೂರು ಮಾಡ ಬೇಕಾದ ಅನುದಾನದ ಕುರಿತು ತೀರ್ಮಾನಿಸಲಾಗುವುದು’ ಎಂದು ಕೇಂದ್ರ ಕ್ರೀಡಾ ಸಚಿವಾಲಯ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.