ಕೋಲ್ಕತ್ತ : ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಈ ಬಾರಿಯ ಐಪಿಎಲ್‌ನಲ್ಲಿ ಪ್ಲೇ ಆಫ್ ಪ್ರವೇಶಕ್ಕೆ ಇನ್ನೂ ಅವಕಾಶ ಇದೆ. ಆದರೆ ಈಗಾಗಲೇ ನಾಕೌಟ್ ಹಾದಿಯಿಂದ ಹೊರಬಿದ್ದಿರುವ ರಾಜಸ್ಥಾನ ರಾಯಲ್ಸ್ ತಂಡವು ಕೋಲ್ಕತ್ತದ ದಾರಿಗೆ ಅಡ್ಡಗಾಲು ಹಾಕಲು ಸಿದ್ಧವಾಗಿದೆ.
ಈಡನ್ ಗಾರ್ಡನ್‌ನಲ್ಲಿ ಭಾನುವಾರ ನಡೆಯಲಿರುವ ಪಂದ್ಯವು ಕೋಲ್ಕತ್ತಕ್ಕೆ ಬಹಳ ಮಹತ್ವದ್ದಾಗಿದೆ. ಅಜಿಂಕ್ಯ ರಹಾನೆ ಪಡೆಯು ತನ್ನ ಪಾಲಿಗೆ ಉಳಿದಿರುವ ಎಲ್ಲ ನಾಲ್ಕು ಪಂದ್ಯಗಳನ್ನು ಗೆದ್ದರೆ ಪ್ಲೇಆಫ್ ಪ್ರವೇಶಿಸಲು ಸಾಧ್ಯವಾಗಲಿದೆ. ಸದ್ಯ 9 ಅಂಕ ಗಳಿಸಿರುವ ಕೋಲ್ಕತ್ತ ತಂಡದ ಈ ಪರಿಸ್ಥಿತಿಗೆ ಪ್ರಮುಖ ಆಟಗಾರರ ಅಸ್ಥಿರ ಪ್ರದರ್ಶನವೇ ಕಾರಣವಾಗಿದೆ.
ಆಲ್‌ರೌಂಡರ್ ಸುನಿಲ್ ನಾರಾಯಣ್, ನಾಯಕ ಅಜಿಂಕ್ಯ ಮತ್ತು ಯುವ ಆಟಗಾರ ಅಂಗಕ್ರಿಷ್ ರಘುವಂಶಿ ಅವರನ್ನು ಬಿಟ್ಟರೆ ಉಳಿದವರು ವೈಫಲ್ಯ ಕಂಡಿದ್ದೇ ಹೆಚ್ಚು. ವೆಂಕಟೇಶ್ ಅಯ್ಯರ್ ಅವರು ಟೂರ್ನಿಯಲ್ಲಿ ಕೇವಲ 142 ರನ್‌ಗಳನ್ನು ಪೇರಿಸಿದ್ದಾರೆ. ಹೋದ ಸಲದ ಟೂರ್ನಿಯಲ್ಲಿ ಅವರು 370 ರನ್ ಗಳಿಸಿದ್ದರು.
ಆದರೆ ರಹಾನೆ ಅವರು ಕೈಗೆ ಆಗಿರುವ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದು ಕಣಕ್ಕೆ ಮರಳುವುದು ಇನ್ನೂ ಖಚಿತವಾಗಿಲ್ಲ. ಅವರು ಈಚೆಗೆ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದರು.
‘ನಾನು ಚೇತರಿಸಿಕೊಂಡಿರುವೆ. ಭಾನುವಾರದ ಪಂದ್ಯಕ್ಕೆ ಮರಳುವ ವಿಶ್ವಾಸವಿದೆ. ನನ್ನಿಂದ ಆದ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿರುವೆ’ ಎಂದು ಅಜಿಂಕ್ಯ ಹೇಳಿದ್ದಾರೆ.
ಈಚೆಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸುನಿಲ್ ನಾರಾಯಣ್ ಆಲ್‌ರೌಂಡ್ ಆಟದ ಮೂಲಕ ಕೆಕೆಆರ್ ಗೆಲುವಿನ ರೂವಾರಿಯಾಗಿದ್ದರು. ಸ್ಪಿನ್ನರ್ ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ ಮತ್ತು ಚೇತನ್ ಸಕಾರಿಯಾ ಅವರು ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬಬೇಕಿದೆ.
ರಾಯಲ್ಸ್ ತಂಡಕ್ಕೆ ಹೆಚ್ಚು ಒತ್ತಡವಿಲ್ಲ. ಆದರೆ ಅಂಕಪಟ್ಟಿಯಲ್ಲಿ ಕೆಲವು ಸ್ಥಾನಗಳ ಬಡ್ತಿಗಾಗಿ ಪ್ರಯತ್ನಿಸಬಹುದು. ಅದಕ್ಕಾಗಿ ಜಯಗಳಿಸುವ ಹಂಬಲದಲ್ಲಿದೆ. ರಿಯಾನ್ ಪರಾಗ್ ನಾಯಕತ್ವದ ತಂಡದಲ್ಲಿ ಈಗ 14ರ ಪೋರ ವೈಭವ್ ಸೂರ್ಯವಂಶಿ ಪ್ರಮುಖ ಆಕರ್ಷಣೆಯಾಗಿದ್ದಾರೆ. ಈಚೆಗೆ ಶತಕ ಬಾರಿಸಿ ಮನೆಮಾತಾಗಿರುವ ವೈಭವ್ ಅವರ ಆಟದ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ.
ಪಂದ್ಯ ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.