ADVERTISEMENT

IPL | ವೇಗದ ಅರ್ಧಶತಕ: ಮುಂಬೈ ಎದುರು ಅಬ್ಬರಿಸಿದ ಕಮಿನ್ಸ್‌ಗೆ ಭಾರಿ ಮೆಚ್ಚುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಏಪ್ರಿಲ್ 2022, 11:41 IST
Last Updated 7 ಏಪ್ರಿಲ್ 2022, 11:41 IST
ಪ್ಯಾಟ್‌ ಕಮಿನ್ಸ್‌
ಪ್ಯಾಟ್‌ ಕಮಿನ್ಸ್‌   

ಕೋಲ್ಕತ್ತ ನೈಟ್‌ರೈಡರ್ಸ್‌ (ಕೆಕೆಆರ್‌) ತಂಡದ ಆಲ್ರೌಂಡರ್‌ ಪ್ಯಾಟ್‌ ಕಮಿನ್ಸ್‌ ಅವರು ಈ ಬಾರಿಯ ಐಪಿಎಲ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಅಮೋಘ ಪ್ರದರ್ಶನ ತೋರಿದರು.

ಬೌಲಿಂಗ್‌ ಆಲ್ರೌಂಡರ್‌ ಆಗಿರುವ ಆಸ್ಟ್ರೇಲಿಯಾದ ಈ ಆಟಗಾರ,ಮುಂಬೈ ಇಂಡಿಯನ್ಸ್‌ ಎದುರು ಬುಧವಾರ ನಡೆದ ಪಂದ್ಯದಲ್ಲಿ ಎರಡು ವಿಕೆಟ್‌ ಪಡೆದರೂ 49 ರನ್‌ ಬಿಟ್ಟುಕೊಟ್ಟು ದುಬಾರಿಯಾಗಿದ್ದರು. ಆದರೆ, ಬ್ಯಾಟಿಂಗ್‌ನಲ್ಲಿ ಅಕ್ಷರಶಃ ಅಬ್ಬರಿಸಿದರು. ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, ಐಪಿಎಲ್‌ನಲ್ಲಿ ವೇಗದ ಅರ್ಧಶತಕ ಬಾರಿಸಿದ ದಾಖಲೆಯನ್ನು ಸರಿಗಟ್ಟಿದರು.

ಪ್ಯಾಟ್‌ ಬ್ಯಾಟಿಂಗ್ ಬಲದಿಂದ ಕೆಕೆಆರ್‌ ಇನ್ನೂ ನಾಲ್ಕು ಓವರ್‌ಗಳು ಬಾಕಿ ಇರುವಂತೆಯೇ ಜಯದ ನಗೆ ಬೀರಿತು.

ADVERTISEMENT

ಪ್ಯಾಟ್‌ ಅಬ್ಬರ
ಪುಣೆಯಲ್ಲಿ ನಡೆದ ಪಂದ್ಯದಲ್ಲಿಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ, ಸೂರ್ಯಕುಮಾರ್‌ ಯಾದವ್‌ (52) ಅರ್ಧಶತಕದ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 161ರನ್‌ ಗಳಿಸಿತ್ತು.

ಗುರಿ ಬೆನ್ನತ್ತಿದ ರೈಡರ್ಸ್‌, 13.1 ಓವರ್‌ಗಳಲ್ಲಿ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು 101 ರನ್‌ ಕಲೆಹಾಕಿತ್ತು.ಈ ಹಂತದಲ್ಲಿ 41 ಎಸೆತಗಳಲ್ಲಿ 61 ರನ್ ಬೇಕಿದ್ದವು.

ಒಂದು ತುದಿಯಲ್ಲಿ ಆರಂಭಿಕ ಬ್ಯಾಟರ್‌ ವೆಂಕಟೇಶ್‌ ಅಯ್ಯರ್ 46 ರನ್‌ ಗಳಿಸಿ ಆಡುತ್ತಿದ್ದರು.ಈ ವೇಳೆ ಅಯ್ಯರ್‌ಗೆ ಜೊತೆಯಾದ ಪ್ಯಾಟ್, ಮುರಿಯದ6ನೇ ವಿಕೆಟ್‌ ಪಾಲುದಾರಿಕೆಯಲ್ಲಿ ಕೇವಲ 17 ಎಸೆತಗಳಲ್ಲಿ 61 ರನ್‌ ಕೂಡಿಸಿ ರೈಡರ್ಸ್‌ಗೆ ಗೆಲುವು ತಂದುಕೊಟ್ಟರು.

ಇದರಲ್ಲಿ ಅಯ್ಯರ್‌ ಗಳಿಸಿದ್ದು ಕೇವಲ 4 ರನ್. ಇತರೆ (ನೋಬಾಲ್‌) ರೂಪದಲ್ಲಿ ಬಂದ ಒಂದು ರನ್ ಹೊರತುಪಡಿಸಿ ಉಳಿದ 56 ರನ್‌ಗಳು ಪ್ಯಾಟ್‌ ಬ್ಯಾಟ್‌ನಿಂದ ಸಿಡಿದಿದ್ದವು. 6 ಸಿಕ್ಸರ್ ಮತ್ತು 4 ಬೌಂಡರಿ ಬಾರಿಸಿದ ಕಮಿನ್ಸ್‌ ಎದುರಿಸಿದ್ದು ಕೇವಲ, 15 ಎಸೆತ.

ಪಾಕಿಸ್ತಾನ ವಿರುದ್ಧ ಇತ್ತೀಚೆಗೆ ಮುಕ್ತಾಯವಾದ ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಮುನ್ನಡೆಸಿದ್ದ ಕಮಿನ್ಸ್‌, ಕೆಕೆಆರ್‌ ಆಡಿದ ಮೊದಲ ಮೂರು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಕಮಿನ್ಸ್ ಆಗಮನದಿಂದಕೆಕೆಆರ್‌ ತಂಡದ ಬಲ ಹೆಚ್ಚಿದೆ.

ಐಪಿಎಲ್‌ನಲ್ಲಿ ವೇಗದ ಅರ್ಧಶತಕಗಳು

ಆಟಗಾರ ತಂಡ ಎದುರಾಳಿ ಎಸೆತ ವರ್ಷ
ಕೆ.ಎಲ್.ರಾಹುಲ್‌ ಪಂಜಾಬ್ ಕಿಂಗ್ಸ್‌ ಡೆಲ್ಲಿ ಕ್ಯಾಪಿಟಲ್ಸ್‌ 14 2014
ಪ್ಯಾಟ್‌ ಕಮಿನ್ಸ್‌ ಕೆಕೆಆರ್‌ ಮುಂಬೈ ಇಂಡಿಯನ್ಸ್‌ 14 2022
ಯೂಸುಫ್‌ ಪಠಾಣ್ ಕೆಕೆಆರ್‌ ಸನ್‌ರೈಸರ್ಸ್‌ಹೈದರಾಬಾದ್ 15 2014
ಸುನಿಲ್ ನಾರಾಯಣ್ ಕೆಕೆಆರ್‌ ರಾಯಲ್‌ ಚಾಲೆಂಜರ್ಸ್ ಬೆಂಗಳೂರು 15 2017

ಟ್ವಿಟರ್‌ನಲ್ಲಿ ಮೆಚ್ಚುಗೆ
ಹಿರಿಯ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳುಪ್ಯಾಟ್‌ ಕಮಿನ್ಸ್‌ ಇನಿಂಗ್ಸ್‌ ಬಗ್ಗೆಟ್ವಿಟರ್‌ನಲ್ಲಿ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.

ವೀರೇಂದ್ರ ಸೆಹ್ವಾಗ್, ಎಸ್‌.ಬದರಿನಾಥ್, ಅಮಿತ್ ಮಿಶ್ರಾ, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ವೆಂಕಟೇಶ್‌ ಪ್ರಸಾದ್‌ ಹಾಗೂ ಇತರರು 'ನಂಬಲಸಾಧ್ಯವಾದ ಇನಿಂಗ್ಸ್‌' ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.