ADVERTISEMENT

IPL 2024 | ಕೋಲ್ಕತ್ತ ತಂಡಕ್ಕೆ ರೋಚಕ ಜಯ

ಆಂಡ್ರೆ ರಸೆಲ್‌ ಸಿಡಿಲಬ್ಬರದ ಆಟ l ಹೆನ್ರಿಕ್ ಕ್ಲಾಸೆನ್ ವೀರೋಚಿತ ಹೋರಾಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಮಾರ್ಚ್ 2024, 23:56 IST
Last Updated 23 ಮಾರ್ಚ್ 2024, 23:56 IST
   

ಕೋಲ್ಕತ್ತ: ಹೆನ್ರಿಕ್ ಕ್ಲಾಸೆನ್ (63, 29 ಎಸೆತ, 6x8) ಅವರು ಮೈನವಿರೇಳಿಸಿದ ಅರ್ಧ ಶತಕದ ಆಟವಾಡಿ ಸನ್‌ರೈಸರ್ಸ್ ಹೈದರಾ ಬಾದ್ ತಂಡವನ್ನು ಗೆಲುವಿನ ಅಂಚಿಗೆ ತಂದಿದ್ದರು. ಆದರೆ ಕೊನೆಯ ಓವರ್‌ ನಲ್ಲಿ 22ರ ಯುವಕ ಹರ್ಷಿತ್‌ ರಾಣಾ ಎದುರಾಳಿಗೆ ಬೇಕಾಗಿದ್ದ 13 ರನ್‌ ಗಳಿಸಲು ಬಿಡಲಿಲ್ಲ. ಕೋಲ್ಕತ್ತ ನೈಟ್‌ ರೈಡರ್ಸ್ ತಂಡ, ಈಡನ್‌ಗಾರ್ಡನ್‌ನಲ್ಲಿ ಕೊನೆಯ ಎಸೆತದವರೆಗೆ ಬೆಳೆದ ಐಪಿಎಲ್‌ನ ರೋಚಕ ಪಂದ್ಯದಲ್ಲಿ ಶನಿವಾರ ನಾಲ್ಕು ರನ್‌ಗಳಿಂದ ಜಯಗಳಿಸಿತು.

ಅಂತಿಮ ಓವರ್‌ನ ಮೊದಲ ಎಸೆತವನ್ನು ಕ್ಲಾಸೆನ್ ಪುಲ್‌ ಮಾಡಿ ಸ್ವ್ಕೇರ್‌ಲೆಗ್‌ಗೆ ಸಿಕ್ಸರ್ ಎತ್ತಿದಾಗ ಗೆಲುವು ಖಚಿತವಾದಂತೆ ಕಂಡಿತು. ನಂತರ ರಾಣಾ ಕೇವಲ ಎರಡು ರನ್‌ಗಳನ್ನಷ್ಟೇ ಕೊಟ್ಟು ಎರಡು ವಿಕೆಟ್ ಪಡೆದರು. ಕ್ಲಾಸೆನ್ ಮತ್ತು ಶಾಬಾಜ್ ಅಹ್ಮದ್‌ ನಡುವಣ ಆರನೇ ವಿಕೆಟ್‌ಗೆ 59 ರನ್ ಜೊತೆಯಾಟ, ಪಂದ್ಯದ ಗತಿ ಬದಲಾಯಿಸುವಂತೆ ಕಂಡಿತು. ಮಿಚೆಲ್ ಸ್ಟಾರ್ಕ್ ಮಾಡಿದ್ದ 19ನೇ ಓವರ್‌ನಲ್ಲಿ ಕ್ಲಾಸೆನ್ ಮೂರು ಸಿಕ್ಸರ್ ಬಾರಿಸಿದ್ದರು. ಕೊನೆಯ ಎಸೆತವನ್ನು ಶಾಬಾಜ್ ಸಿಕ್ಸರ್‌ಗಟ್ಟಿದರು.

ಮೊದಲು ಬ್ಯಾಟ್ ಮಾಡಲು ಕಳುಹಿಸಲ್ಪಟ್ಟ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡ, ಅನುಭವಿ ಆ್ಯಂಡ್ರೆ ರಸೆಲ್ ಅವರ ಸಿಡಿಲಬ್ಬರದ ಅರ್ಧ ಶತಕ (ಅಜೇಯ 64, 25ಎ, 4x3, 6x7) ಮತ್ತು ಫಿಲ್‌ ಫಿಲ್‌ ಸಾಲ್ಟ್‌ (40 ಎಸೆತಗಳಲ್ಲಿ 54) ಅವರ ವೇಗದ ಅರ್ಧಶತಕದಿಂದ 7 ವಿಕೆಟ್‌ಗೆ 208 ರನ್‌ಗಳ ದೊಡ್ಡ ಮೊತ್ತ ಗಳಿಸಿತ್ತು.

ADVERTISEMENT

ಇದಕ್ಕೆ ಉತ್ತರವಾಗಿ ಪ್ಯಾಟ್‌ ಕಮಿನ್ಸ್ ನೇತೃತ್ವದ ಸನ್‌ರೈಸರ್ಸ್ ತಂಡ 7 ವಿಕೆಟ್‌ಗೆ 204 ರನ್ ಗಳಿಸಿ ನಿರಾಸೆ ಅನುಭವಿಸಿತು. ರಸೆಲ್ ಬೌಲಿಂಗ್‌ನಲ್ಲೂ ಕೊಡುಗೆ ನೀಡಿ ಎರಡು ವಿಕೆಟ್‌ ಪಡೆದರು.

ಕಳೆದ ವರ್ಷ ನಡೆದ ಐಪಿಎಲ್‌ ಹರಾಜಿನಲ್ಲಿ ಇಂಗ್ಲೆಂಡ್ ಆಟಗಾರ ಸಾಲ್ಟ್‌ ಅವರು ‘ಅನ್‌ಸೋಲ್ಡ್‌’ ಆಗಿ ದ್ದರು. ಆದರೆ ಜೇಸನ್‌ ರಾಯ್‌ಗೆ ಬದಲಿಯಾಗಿ ಕೆಕೆಆರ್ ತಂಡ ಸೇರಿ ಕೊಂಡ ಅವರು ಐಪಿಎಲ್‌ನಲ್ಲಿ ಮೂರನೇ ಅರ್ಧ ಶತಕ ಬಾರಿಸಿ ತಂಡಕ್ಕೆ ಆರಂಭದಲ್ಲಿ ಆಸರೆಯಾದರು. ರನ್‌ ವೇಗ ಹೆಚ್ಚಿಸುವ ಭರದಲ್ಲಿ ಮಯಂಕ್ ಮಾರ್ಕಂಡೆ (39ಕ್ಕೆ2) ಅವರಿಗೆ ವಿಕೆಟ್‌ ನೀಡಿದರು.

ಆದರೆ ರಸೆಲ್, ಲೆಗ್‌ ಬ್ರೇಕ್ ಬೌಲರ್ ಮಾರ್ಕಂಡೆ ಅವರ ಐದು ಎಸೆತಗಳಲ್ಲಿ ಮೂರು ಸಿಕ್ಸರ್ ಸಿಡಿಸಿ ನೈಟ್‌ ರೈಡರ್ಸ್ ತಂಡದ ಮೊತ್ತ ಹೆಚ್ಚಿಸಿದರು. ಭುವನೇಶ್ವರ ಕುಮಾರ್ ಮಾಡಿದ 19ನೇ ಓವರ್‌ನಲ್ಲಿ 26 ರನ್‌ಗಳು ಬಂದವು. ಇನ್ನೊಂದೆಡೆ ರಿಂಕು ಸಿಂಗ್‌ 15 ಎಸೆತಗಳಿಂದ 23 ರನ್ ಗಳಿಸಿದರು. ಇವರಿಬ್ಬರು ಕೇವಲ 33 ಎಸೆತಗಳಲ್ಲಿ 81 ರನ್ ಸೇರಿಸಿ ಹೈದರಾಬಾದ್‌ ದಾಳಿ ದಂಡಿಸಿದರು. ಕೊನೆಯ ಐದು ಓವರ್‌ಗಳಲ್ಲಿ 85 ರನ್‌ಗಳು ಹರಿದುಬಂದವು.

ಎಡಗೈ ವೇಗಿ ನಟರಾಜನ್ ಇದಕ್ಕೆ ಮೊದಲು ವೆಂಕಟೇಶ ಅಯ್ಯರ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ವಿಕೆಟ್‌ಗಳನ್ನು ಬೇಗನೇ ಪಡೆದಿದ್ದರು. ಭುವನೇಶ್ವರ್ ಕೂಡ ಮೊದಲ ಸ್ಪೆಲ್‌ನಲ್ಲಿ ಬಿಗಿಯಾಗಿದ್ದು, ಪವರ್‌ಪ್ಲೇ ಅವಧಿಯಲ್ಲಿ ಕೋಲ್ಕತ್ತ ತಂಡವನ್ನು ಕಟ್ಟಿಹಾಕಿದ್ದರು.

ದೊಡ್ಡ ಮೊತ್ತ ಬೆನ್ನಟ್ಟಿದ ಸನ್‌ರೈಸರ್ಸ್‌ಗೆ ಮಯಂಕ್ ಅಗರವಾಲ್ (32, 21ಎ) ಮತ್ತು ಅಭಿಷೇಕ್ ಶರ್ಮಾ (32, 19ಎ) ಕೇವಲ 5.3 ಓವರುಗಳಲ್ಲಿ 60 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದ್ದರು. ಅವರ ನಿರ್ಗಮನದ ನಂತರ ಏಡನ್ ಮರ್ಕರಂ ಮತ್ತು ರಾಹುಲ್ ತ್ರಿಪಾಠಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ, ಕ್ಲಾಸೆನ್ ಮತ್ತು ಶಾಬಾಜ್ (16, 5 ಎಸೆತ) ಹೋರಾಟ ತೋರಿದರು.

ಸ್ಕೋರುಗಳು: ಕೋಲ್ಕತ್ತ ನೈಟ್‌ ರೈಡರ್ಸ್: 20 ಓವರುಗಳಲ್ಲಿ 7 ವಿಕೆಟ್‌ಗೆ 208 (ಫಿಲ್ ಸಾಲ್ಟ್‌ 54, ರಮಣದೀಪ್ ಸಿಂಗ್ 35, ರಿಂಕು ಸಿಂಗ್ 23, ಆಂಡ್ರೆ ರಸೆಲ್ ಔಟಾಗದೇ 64; ನಟರಾಜನ್ 32ಕ್ಕೆ3, ಮಯಂಕ್ ಮಾರ್ಕಂಡೆ 39ಕ್ಕೆ2); ಸನ್‌ರೈಸರ್ಸ್ ಹೈದರಾಬಾದ್: 20 ಓವರುಗಳಲ್ಲಿ 7 ವಿಕೆಟ್‌ಗೆ 204 (ಮಯಂಕ್ ಅಗರವಾಲ್ 32, ಅಭಿಷೇಕ್ ಶರ್ಮಾ 32, ಹೆನ್ರಿಕ್ ಕ್ಲಾಸೆನ್ 63; ಹರ್ಷಿತ್ ರಾಣಾ 33ಕ್ಕೆ3, ಆಂಡ್ರೆ ರಸೆಲ್ 25ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.