ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ಜಯಿಸಿ ಬಂದಿರುವ ಕರ್ನಾಟಕ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎರಡನೇ ಹಂತದಲ್ಲಿ ಕಣಕ್ಕಿಳಿಯಲು ಸಿದ್ಧವಾಗಿದೆ. ಇದೇ 23ರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರನೇ ಸುತ್ತಿನ ಪಂದ್ಯ ನಡೆಯಲಿದೆ. ಪಂಜಾಬ್ ಎದುರು ಆಡಲಿರುವ ಕರ್ನಾಟಕ ತಂಡವನ್ನು ಮಯಂಕ್ ಅಗರವಾಲ್ ಮುನ್ನಡೆಸುವರು. ಅನುಭವಿ ಬ್ಯಾಟರ್ ಮನೀಷ್ ಪಾಂಡೆ ಅವರನ್ನು ಕೈಬಿಡಲಾಗಿದೆ.
ಭಾರತ ತಂಡದ ಆಟಗಾರರಾದ ದೇವದತ್ತ ಪಡಿಕ್ಕಲ್ ಹಾಗೂ ವೇಗಿ ಪ್ರಸಿದ್ಧ ಕೃಷ್ಣ ಅವರು ತಂಡದಲ್ಲಿದ್ದಾರೆ. ದೇವದತ್ತ ಮತ್ತು ಪ್ರಸಿದ್ಧ ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಭಾರತ ತಂಡದಲ್ಲಿ ಆಡಿದ್ದರು. ಅದರ ನಂತರ ಕರ್ನಾಟಕ ತಂಡಕ್ಕೆ ಮರಳಿ ವಿಜಯ್ ಹಜಾರೆ ಟ್ರೋಫಿ ನಾಕೌಟ್‌ನಲ್ಲಿ ಆಡಿದ್ದರು. ದೇವದತ್ತ ಶತಕ ಗಳಿಸಿದ್ದರು. ಪ್ರಸಿದ್ಧ ಕೂಡ ಉತ್ತಮ ಬೌಲಿಂಗ್ ಮಾಡಿದ್ದರು. ಇದರಿಂದಾಗಿ ತಂಡವು ನಾಕೌಟ್ ಹಂತದಲ್ಲಿ ಜಯಿಸಿತು.
ಉಳಿದಂತೆ ಮಯಂಕ್, ಅನೀಶ್, ಶ್ರೀಜಿತ್, ಅಭಿನವ್ ಹಾಗೂ ಸ್ಮರಣ್ ಅವರೂ ಉತ್ತಮ ಲಯದಲ್ಲಿದ್ದಾರೆ. ಮಧ್ಯಮವೇಗಿ ಕೌಶಿಕ್, ವಿದ್ಯಾಧರ್ ಮತ್ತು ಎಡಗೈ ವೇಗಿ ಅಭಿಲಾಷ್ ಶೆಟ್ಟಿ ಕೂಡ ಪಂದ್ಯ ಗೆಲ್ಲಿಸಿಕೊಡಬಲ್ಲ ಸಮರ್ಥರಾಗಿದ್ದಾರೆ.
ಕಳೆದ ವರ್ಷದ ಅಕ್ಟೋಬರ್ 11 ರಿಂದ ನವೆಂಬರ್ 13ರವರೆಗೆ ನಡೆದಿದ್ದ ರಣಜಿ ಟ್ರೋಫಿ ಟೂರ್ನಿಯ ಮೊದಲ ಹಂತದಲ್ಲಿ (ಎಲೀಟ್ ಸಿ ಗುಂಪು) ಕರ್ನಾಟಕ ತಂಡವು 5 ಪಂದ್ಯಗಳನ್ನು ಆಡಿ 1ರಲ್ಲಿ ಗೆದ್ದಿತ್ತು. 4 ಪಂದ್ಯಗಳು ಡ್ರಾ ಆಗಿತ್ತು. ಅದರಲ್ಲಿ ಮಳೆಯಿಂದಾಗಿ ಅಡಚಣೆಯಾಗಿದ್ದೇ ಹೆಚ್ಚು. ಈ ಹಂತದಲ್ಲಿ ಮನೀಷ್ ಪಾಂಡೆ ಆಡಿದ್ದರು. ಆದರೆ ಅವರನ್ನು ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿಯೂ ಕೈಬಿಡಲಾಗಿತ್ತು. ಈಗ ರಣಜಿ ಟೂರ್ನಿಯಲ್ಲಿ ಅವಕಾಶ ನೀಡಲಾಗಿಲ್ಲ.
ಗುಂಪು ಹಂತದಲ್ಲಿ ಉಳಿದಿರುವ ಎರಡು ಪಂದ್ಯ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುತ್ತಿರುವುದರಿಂದ ಪೂರ್ಣ ಅಂಕಗಳೊಂದಿಗೆ ಜಯಿಸುವ ಛಲದಲ್ಲಿ ಮಯಂಕ್ ಬಳಗವಿದೆ. ಭಾರತ ತಂಡದ ಆಟಗಾರ ಕೆ.ಎಲ್. ರಾಹುಲ್ ಅವರು ತಮ್ಮ ಮೊಣಕೈ ಗಾಯದ ಕಾರಣ ರಣಜಿ ಟೂರ್ನಿಯಲ್ಲಿ ಆಡುವುದಿಲ್ಲವೆಂದು ಈಚೆಗೆ ತಿಳಿಸಿದ್ದರು.
ತಂಡ ಇಂತಿದೆ: ಮಯಂಕ್ ಅಗರವಾಲ್ (ನಾಯಕ), ಶ್ರೇಯಸ್ ಗೋಪಾಲ್ (ಉಪನಾಯಕ), ದೇವದತ್ತ ಪಡಿಕ್ಕಲ್, ಅನೀಶ್ ಕೆ.ವಿ., ಸ್ಮರಣ್ ಆರ್, ಕೆ.ಎಲ್. ಶ್ರೀಜಿತ್ (ವಿಕೆಟ್‌ಕೀಪರ್), ಅಭಿನವ್ ಮನೋಹರ್, ಹಾರ್ದಿಕ್ ರಾಜ್, ಪ್ರಸಿದ್ಧ ಎಂ ಕೃಷ್ಣ, ವಿ. ಕೌಶಿಕ್, ಅಭಿಲಾಷ್ ಶೆಟ್ಟಿ, ಯಶೋವರ್ಧನ್ ಪರಂತಾಪ್, ನಿಕಿನ್ ಜೋಸ್, ವಿದ್ಯಾಧರ್ ಪಾಟೀಲ, ಸುಜಯ್ ಸತೇರಿ (ವಿಕೆಟ್‌ಕೀಪರ್), ಮೊಹಸಿನ್ ಖಾನ್. ಕೆ. ಯರೇಗೌಡ (ಕೋಚ್), ಮನ್ಸೂರ್ ಅಲಿ ಖಾನ್ (ಬೌಲಿಂಗ್ ಕೋಚ್), ಶಬರೀಶ್ ಪಿ ಮೋಹನ್ (ಫೀಲ್ಡಿಂಗ್ ಕೋಚ್), ಎ. ರಮೇಶ್ ರಾವ್ (ಮ್ಯಾನೇಜರ್), ಎ. ಜಾಬ ಪ್ರಭು (ಫಿಸಿಯೊ), ಎ. ಕಿರಣ (ಸ್ಟ್ರೆಂಥ್, ಕಂಡಿಷನಿಂಗ್ ಕೋಚ್), ಸಿ.ಎಂ. ಸೋಮಸುಂದರ್ (ಮಸಾಜ್ ತಜ್ಞ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.