ಕರ್ನಾಟಕ ತಂಡದ ಕೆ.ಎಲ್. ರಾಹುಲ್, ಅಭಿಲಾಷ್ ಶೆಟ್ಟಿ, ಪ್ರಸಿದ್ಧ ಕೃಷ್ಣ ಮತ್ತು ವಿದ್ವತ್ ಕಾವೇರಪ್ಪ ಅವರು ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು –
ಪ್ರಜಾವಾಣಿ ಚಿತ್ರ/ಬಿ.ಕೆ. ಜನಾರ್ದನ್
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಕರ್ನಾಟಕ ಕ್ರಿಕೆಟ್ ತಂಡದ ನೆಟ್ಸ್ ತಾಲೀಮು ಎಂದಿನಂತೆ ಇರಲಿಲ್ಲ. ತಂಡದ ಯುವ ಪ್ರತಿಭಾನ್ವಿತ ಆಟಗಾರರ ಕಂಗಳಲ್ಲಿ ಕುತೂಹಲ ಇಣುಕುತಿತ್ತು. ಅನುಭವಿಗಳಿಗೆ ತಮ್ಮ ಹಳೆಯ ಸ್ನೇಹಿತನೊಂದಿಗೆ ಅಭ್ಯಾಸದಲ್ಲಿ ಪೈಪೋಟಿ ನಡೆಸುವ ಹುಮ್ಮಸ್ಸು ಗರಿಗೆದರಿತ್ತು.
ಭಾರತ ತಂಡದ ಬ್ಯಾಟರ್ ಕೆ.ಎಲ್. ರಾಹುಲ್ ತಂಡಕ್ಕೆ ಮರಳಿ ಬಂದಿದ್ದು ಕರ್ನಾಟಕ ಬಳಗದಲ್ಲಿ ಲವಲವಿಕೆ ಕಂಡಿತು. ಗುರುವಾರ ಇಲ್ಲಿ ಆರಂಭವಾಗಲಿರುವ ಹರಿಯಾಣ ವಿರುದ್ಧದ ರಣಜಿ ಪಂದ್ಯದಲ್ಲಿ ರಾಹುಲ್ ಆಡಲಿದ್ದಾರೆ. ಅವರು ದೀರ್ಘ ಸಮಯದ ನಂತರ ರಣಜಿ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.
ಭಾರತ ತಂಡದ ಆಟಗಾರರು ತಮ್ಮ ಬಿಡುವಿನಲ್ಲಿ ದೇಶಿ ಕ್ರಿಕೆಟ್‌ನಲ್ಲಿ ಆಡಬೇಕು ಎಂದು ಬಿಸಿಸಿಐ ಈಚೆಗೆ ಸೂಚನೆ ನೀಡಿರುವುದರಿಂದ ರಾಹುಲ್ ಇಲ್ಲಿ ಆಡಲಿದ್ದಾರೆ. ಅವರು ಹೋದ ವಾರ ನಡೆದ ಪಂಜಾಬ್ ಎದುರಿನ ಪಂದ್ಯದಲ್ಲಿಯೇ ಆಡಬೇಕಿತ್ತು. ಆದರೆ ತಮ್ಮ ಕೈಗೆ ಗಾಯವಾಗಿದೆ ಎಂದು ಕಾರಣ ನೀಡಿ, ಪಂದ್ಯದಲ್ಲಿ ಆಡಿರಲಿಲ್ಲ. ಇದೀಗ ಸಿ ಗುಂಪಿನ ಕೊನೆಯ ಪಂದ್ಯದಲ್ಲಿ ಅವರು ಕಣಕ್ಕಿಳಿಯುತ್ತಿದ್ದಾರೆ. ಕರ್ನಾಟಕ ತಂಡಕ್ಕೆ ಈ ಪಂದ್ಯದಲ್ಲಿ ಜಯಿಸುವುದು ಮಹತ್ವದ್ದಾಗಿದೆ.
ತಂಡದ ನವಪ್ರತಿಭೆಗಳಾದ ಕೆ.ವಿ. ಅನೀಶ್, ಆರ್. ಸ್ಮರಣ್, ಕೆ.ಎಲ್. ಶ್ರೀಜಿತ್, ಹಾರ್ದಿಕ್ ರಾಜ್, ಯಶೋವರ್ಧನ್ ಪರಂತಾಪ್, ಅಭಿಲಾಷ್ ಶೆಟ್ಟಿ ಮತ್ತು ಮೊಹಸೀನ್ ಖಾನ್ ಅವರಿಗೆ ರಾಹುಲ್ ಅವರೊಂದಿಗೆ ಮೊದಲ ಬಾರಿಗೆ ರಣಜಿ ಟೂರ್ನಿಯಲ್ಲಿ ಡ್ರೆಸಿಂಗ್ ರೂಮ್ ಹಂಚಿಕೊಳ್ಳುವ ಪುಳಕ. ನಾಯಕ ಮಯಂಕ್ ಅಗರವಾಲ್, ಪ್ರಸಿದ್ಧಕೃಷ್ಣ ಹಾಗೂ ದೇವದತ್ತ ಪಡಿಕ್ಕಲ್ ಅವರಿಗೆ ರಾಹುಲ್ ಜೊತೆಗೆ ಭಾರತ ಮತ್ತು ಈ ಹಿಂದೆ ಕರ್ನಾಟಕದಲ್ಲಿ ಆಡಿದ ಅನುಭವ ಇದೆ.
ರಾಹುಲ್ ಅವರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿದರು. ಎಲ್ಲ ಆಟಗಾರರೊಂದಿಗೆ ಫುಟ್‌ಬಾಲ್, ಡ್ರಿಲ್ಸ್ ಮತ್ತು ಕ್ಯಾಚಿಂಗ್ ಅಭ್ಯಾಸದಲ್ಲಿ ತೊಡಗಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.