ADVERTISEMENT

IND vs SA 1st Test| ಕನ್ನಡಿಗ ರಾಹುಲ್ ‘ಸೆಂಚುರಿಯನ್’

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2021, 19:02 IST
Last Updated 26 ಡಿಸೆಂಬರ್ 2021, 19:02 IST
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್   

ಸೆಂಚುರಿಯನ್: ಸೂಪರ್‌ಸ್ಪೋರ್ಟ್ಸ್‌ ಪಾರ್ಕ್‌ನಲ್ಲಿ ಭಾನುವಾರ ಕರ್ನಾಟಕದ ಪ್ರತಿಭೆಗಳದ್ದೇ ಪಾರುಪತ್ಯ.ದಕ್ಷಿಣ ಆಫ್ರಿಕಾ ಎದುರು ಆರಂಭವಾದ ಮೊದಲ ಟೆಸ್ಟ್‌ನಲ್ಲಿ ಕನ್ನಡಿಗ ರಾಹುಲ್ ಚೆಂದದ ಶತಕ ಬಾರಿಸಿದರು. ಗೆಳೆಯ ಮಯಂಕ್ ಅಗರವಾಲ್ ಜೊತೆ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವನ್ನೂ ಆಡಿದರು.

ಇದರಿಂದಾಗಿ ಭಾರತ ತಂಡವು ದಿನ ದಾಟದ ಮುಕ್ತಾಯಕ್ಕೆ 90 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 272 ರನ್‌ ಗಳಿಸಿತು. ರಾಹುಲ್ ಮತ್ತು ಅಜಿಂಕ್ಯ ರಹಾನೆ ಕ್ರೀಸ್‌ ನಲ್ಲಿದ್ದಾರೆ.

ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮಯಂಕ್ ಮತ್ತು ರಾಹುಲ್ ಇನಿಂಗ್ಸ್ ಆರಂಭಿಸಿದರು. 18ನೇ ಓವರ್‌ನಲ್ಲಿ ಮಯಂಕ್ ಬ್ಯಾಟ್ ಹೊರಅಂಚಿಗೆ ತಾಗಿದ್ದ ಚೆಂಡನ್ನು ಹಿಡಿಯುವ ಪ್ರಯತ್ನದಲ್ಲಿ ಕೀಪರ್ ಕ್ವಿಂಟನ್ ಡಿ ಕಾಕ್ ಸಫಲರಾಗಲಿಲ್ಲ. ಇದು ಮಯಂಕ್‌ಗೆ ವರದಾನವಾಯಿತು. ಊಟದ ವಿರಾಮದ ವೇಳೆಗೆ ಈ ಜೋಡಿಯು 83 ರನ್ ಸೇರಿಸಿತು. ನಂತರವೂ ಇಬ್ಬರ ಜೊತೆಯಾಟವು ಬೌಲರ್‌ಗಳಿಗೆ ತಲೆನೋವಾಯಿತು. ಇವರಿಬ್ಬರ ಜೊತೆಯಾಟದಲ್ಲಿ 117 ರನ್‌ಗಳು ಸೇರಿದವು.

ADVERTISEMENT

ತಮ್ಮ ಎರಡನೇ ಸ್ಪೆಲ್ ಬೌಲಿಂಗ್ ಮಾಡಲು ಬಂದ ಲುಂಗಿ ಗಿಡಿ ಈ ಜೊತೆಯಾಟವನ್ನು ಮುರಿದರು. ಎಲ್‌ಬಿಡಬ್ಲ್ಯು ಬಲೆಗೆ ಮಯಂಕ್ ಬಿದ್ದರು. ಆದರೆ, ಅಂಪೈರ್ ಎರಸ್ಮಸ್ ಔಟ್ ಕೊಡಲಿಲ್ಲ. ಆತಿಥೇಯ ತಂಡದ ನಾಯಕ ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಯುಡಿಆರ್‌ಎಸ್) ಅವಕಾಶ ಬಳಸಿಕೊಂಡರು. ಯಶಸ್ವಿಯೂ ಆದರು.

ನಂತರದ ಎಸೆತದಲ್ಲಿಯೇ ಚೇತೇಶ್ವರ್ ಪೂಜಾರ ಔಟಾದರು. ಲುಂಗಿ ಹ್ಯಾಟ್ರಿಕ್ ಅವಕಾಶಕ್ಕೆ ವಿರಾಟ್ ತಡೆಯೊಡ್ಡಿದರು. ಲಯ ಕಂಡುಕೊಳ್ಳಲು ಪ್ರಯತ್ನಿಸಿದ ಅವರು ಒಂದಿಷ್ಟು ಆಕರ್ಷಕ ಹೊಡೆತಗಳನ್ನು ಪ್ರಯೋಗಿಸಿ ಗಮನ ಸೆಳೆದರು. ರಾಹುಲ್ ಜೊತೆಗೆ 82 ರನ್‌ಗಳನ್ನೂ ಸೇರಿಸಿದರು.

ಇದೆಲ್ಲದರ ನಡುವೆ ರಾಹುಲ್ ಸಂಪೂರ್ಣ ಏಕಾಗ್ರತೆ ಸಾಧಿಸಿ ಬ್ಯಾಟಿಂಗ್ ಮಾಡಿದರು. ಬ್ಯಾಕ್‌ಫುಟ್‌ ಮತ್ತು ಫ್ರಂಟ್‌ಫುಟ್‌ನಲ್ಲಿ ಸೈ ಎನಿಸಿಕೊಂಡರು. 127 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ದರು. 53ನೇ ಓವರ್‌ನಲ್ಲಿ ಮಲ್ದರ್ ಬೌಲಿಂಗ್‌ನಲ್ಲಿ ರಾಹುಲ್ ಕ್ಯಾಚ್ ಕೈಬಿಟ್ಟ ಜೆನ್ಸೆನ್ ತಪ್ಪಿಗೆ ಆತಿಥೇಯ ತಂಡ ಕೈ ಕೈ ಹಿಸುಕಿಕೊಳ್ಳಬೇಕಾಯಿತು. ರಾಹುಲ್ ಶತಕದತ್ತ ದಾಪುಗಾಲಿಟ್ಟರು. ತಾವೆದುರಿಸಿದ 218ನೇ ಎಸೆತದಲ್ಲಿ ಶತಕದ ಗಡಿ ಮುಟ್ಟಿದರು. ರಾಹುಲ್‌ಗೆ ಇದು ಟೆಸ್ಟ್‌ನಲ್ಲಿ ಏಳನೇ ಶತಕ. ಅವರು ಕಳೆದ ಆಗಸ್ಟ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಶತಕ ಗಳಿಸಿದ್ದರು.

ಬಹುತೇಕ ಕೊನೆಯ ಅವಕಾಶ ಪಡೆದುಕೊಂಡಿರುವ ರಹಾನೆ ಕೂಡ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಅವರು 73 ರನ್ ಸೇರಿಸಿದ್ದಾರೆ.

ಶ್ರೇಯಸ್ ಅಯ್ಯರ್, ಇಶಾಂತ್ ಶರ್ಮಾ, ಹನುಮವಿಹಾರಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಶಾರ್ದೂಲ್ ಠಾಕೂರ್ ಸೇರಿದಂತೆ ನಾಲ್ವರು ಮಧ್ಯಮವೇಗಿ ಮತ್ತು ಸ್ಪಿನ್ನರ್ ಅಶ್ವಿನ್ ಅವಕಾಶ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.