ADVERTISEMENT

ಚಾಂಪಿಯನ್ಸ್ ಟ್ರೋಫಿ | ‘ಸಮಾಧಾನಕರ’ ಜಯಕ್ಕಾಗಿ ಪಾಕ್–ಬಾಂಗ್ಲಾ ಸೆಣಸು

ಸೋಲುಂಡ ತಂಡಗಳ ಹಣಾಹಣಿ ಇಂದು; ರಿಜ್ವಾನ್ ಬಳಗಕ್ಕೆ ಶಾಂತೋ ಪಡೆ ಸವಾಲು

ಪಿಟಿಐ
Published 26 ಫೆಬ್ರುವರಿ 2025, 23:20 IST
Last Updated 26 ಫೆಬ್ರುವರಿ 2025, 23:20 IST
<div class="paragraphs"><p>ಪಾಕಿಸ್ತಾನ ತಂಡದಲ್ಲಿ ನಾಯಕ ಮೊಹಮ್ಮದ್ ರಿಜ್ವಾನ್&nbsp;&nbsp;</p></div>

ಪಾಕಿಸ್ತಾನ ತಂಡದಲ್ಲಿ ನಾಯಕ ಮೊಹಮ್ಮದ್ ರಿಜ್ವಾನ್  

   

ರಾವಲ್ಪಿಂಡಿ: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಿಂದ ಈಗಾಗಲೇ ಸೆಮಿಫೈನಲ್ ಹಾದಿಯಿಂದ ಹೊರಬಿದ್ದಿರುವ ಹಾಲಿ ಚಾಂಪಿಯನ್ ಮತ್ತು ಆತಿಥೇಯ ಪಾಕಿಸ್ತಾನ ತಂಡವು ಗುರುವಾರ ಬಾಂಗ್ಲಾ ಎದುರು ಆಡಲಿದೆ. 

ಎ ಗುಂಪಿನ ಕಳೆದ ಪಂದ್ಯದಲ್ಲಿ ಪಾಕ್ ತಂಡವು ತನ್ನ ಬದ್ಧ ಎದುರಾಳಿ ಭಾರತದ ಎದುರು ಸೋತಿತ್ತು. ಅದರಿಂದಾಗಿ ತನ್ನದೇ ದೇಶದ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಬಹಳಷ್ಟು ಟೀಕೆಗಳನ್ನು ಕೇಳಬೇಕಾಗಿದೆ. ಪಾಕ್ ದೇಶದ ಕ್ರಿಕೆಟ್ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆಯಾಗಬೇಕು. ಉತ್ತಮ ತಂಡ ಕಟ್ಟಬೇಕು ಎಂದು ಅಲ್ಲಿಯ ಕ್ರಿಕೆಟ್‌ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. 

ADVERTISEMENT

29 ವರ್ಷಗಳ ನಂತರ ಪಾಕಿಸ್ತಾನವು ಐಸಿಸಿ ಟ್ರೋಫಿ ಟೂರ್ನಿಗೆ ಆತಿಥ್ಯ ವಹಿಸಿದೆ. ಆದರೆ, ನಾಕೌಟ್ ಪ್ರವೇಶಿಸುವಲ್ಲಿ ವಿಫಲವಾಗಿದೆ. 2024ರ ಟಿ20 ವಿಶ್ವಕಪ್ ಮತ್ತು 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಪಾಕ್ ತೀವ್ರ ಮುಖಭಂಗ ಅನುಭವಿಸಿತ್ತು. 

ಪಾಕ್ ತಂಡದ ಆಟಗಾರರ ದೌರ್ಬಲ್ಯಗಳು ಈ ಟೂರ್ನಿಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಎದ್ದು ಕಂಡಿವೆ. ಕಳೆದೆರಡೂ ಪಂದ್ಯಗಳಲ್ಲಿ  ಪಾಕ್ ತಂಡವು ರನ್‌ ಗಳಿಕೆಯಲ್ಲಿ ಯಾವುದೇ ವೇಗ ತೋರಿರಲಿಲ್ಲ. ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ 161 ಮತ್ತು ದುಬೈನಲ್ಲಿ ನಡೆದಿದ್ದ ಭಾರತದ ಎದುರಿನ ಪಂದ್ಯದಲ್ಲಿ 147 ಡಾಟ್ ಬಾಲ್‌ಗಳು ದಾಖಲಾಗಿದ್ದವು. 

ಹೊಡೆತಗಳ ಆಯ್ಕೆಯಲ್ಲಿ ಲೋಪ, ಕಳಪೆ ಫೀಲ್ಡಿಂಗ್ ಮತ್ತು ಆಟಗಾರರ ಗಾಯದ ಸಮಸ್ಯೆಗಳಲ್ಲಿ ತಂಡವು ಸೋಲಿನ ಹಾದಿ ಹಿಡಿದಿದೆ. ಫಕರ್ ಜಮಾನ್ ಅವರಂತಹ ಮ್ಯಾಚ್‌ ವಿನ್ನಿಂಗ್ ಬ್ಯಾಟರ್ ಗೈರಾಗಿರುವುದು ಪಾಕ್ ಹಿನ್ನಡೆಗೆ ಪ್ರಮುಖ ಕಾರಣ. ಅವರ ಬದಲಿಗೆ ಸ್ಥಾನ ಪಡೆದಿರುವ ಇಮಾಮ್‌ ಉಲ್ ಹಕ್ ಪರಿಣಾಮಕಾರಿಯಾಗಿಲ್ಲ. ಅನುಭವಿ ಬಾಬರ್ ಆಜಂ ಮತ್ತು ನಾಯಕ ರಿಜ್ವಾನ್ ಕೂಡ ವಿಫಲರಾಗಿದ್ದಾರೆ. ಹೀಗಾಗಿ ಪಾಕ್ ತಂಡವು ತನ್ನ ವೇಗದ ಬೌಲಿಂಗ್ ಪಡೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆದರೆ ಶಹೀನ್ ಶಾ ಅಫ್ರಿದಿ, ನಸೀಂ ಶಾ ಮತ್ತು ಹ್ಯಾರಿಸ್ ರವೂಫ್ ಅವರೂ ಪರಿಣಾಮಕಾರಿಯಾಗಿಲ್ಲ. 

ಬಾಂಗ್ಲಾ ತಂಡ ಕೂಡ ತನ್ನ ಎರಡೂ ಪಂದ್ಯಗಳಲ್ಲಿ ಸೋತಿದೆ. ಸೆಮಿಫೈನಲ್ ಹಾದಿಯಿಂದ ಹೊರಬಿದ್ದಿದೆ. ನಜ್ಮುಲ್ ಹುಸೇನ್ ಶಾಂತೋ ಬಳಗಕ್ಕೂ ಸಮಾಧಾನಕರ ಜಯದ ಮೇಲೆ ಕಣ್ಣಿದೆ. ಮೇಲ್ನೋಟಕ್ಕೆ ಪಾಕ್ ಆಟಗಾರರಿಗಿಂತಲೂ ಬಾಂಗ್ಲಾದ ಆಟಗಾರರು ಉತ್ತಮ ಲಯದಲ್ಲಿದ್ದಾರೆ. ಆದ್ದರಿಂದ ಆತಿಥೇಯರು ಕಠಿಣ ಸವಾಲು ಎದುರಿಸುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. 

ಪಂದ್ಯ ಆರಂಭ: ಮಧ್ಯಾಹ್ನ 2.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಹಾಟ್‌ಸ್ಟಾರ್ 

ಬಾಂಗ್ಲಾದೇಶ ತಂಡದ ನಾಯಕ ನಜ್ಮುಲ್ ಹುಸೇನ್ ಶಾಂತೊ  –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.