ADVERTISEMENT

ಸರಣಿ ಸಮಬಲದ ಸಮಾಧಾನ

ಕೊನೆಯ ಟ್ವೆಂಟಿ–20 ಪಂದ್ಯ: 41 ಎಸೆತಗಳಲ್ಲಿ 61 ರನ್ ಗಳಿಸಿದ ನಾಯಕ ವಿರಾಟ್ ಕೊಹ್ಲಿ

ಏಜೆನ್ಸೀಸ್
Published 25 ನವೆಂಬರ್ 2018, 20:00 IST
Last Updated 25 ನವೆಂಬರ್ 2018, 20:00 IST
ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಖರಿ  –ಎಎಫ್‌ಪಿ ಚಿತ್ರ
ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಖರಿ  –ಎಎಫ್‌ಪಿ ಚಿತ್ರ   

ಸಿಡ್ನಿ: ಆರಂಭಿಕ ಜೋಡಿ ಹಾಕಿಕೊಟ್ಟ ಭದ್ರ ಬುನಾದಿ ಮೇಲೆ ನಾಯಕ ವಿರಾಟ್ ಕೊಹ್ಲಿ ಗೆಲುವಿನ ಸೌಧ ಕಟ್ಟಿದರು. ಇದರ ಪರಿಣಾಮ ಆಸ್ಟ್ರೇಲಿಯಾ ಎದುರಿನ ಟ್ವೆಂಟಿ–20 ಕ್ರಿಕೆಟ್ ಸರಣಿಯ ಕೊನೆಯ ಪಂದ್ಯದಲ್ಲಿ ಗೆದ್ದ ಭಾರತ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು.

ಮೊದಲ ಪಂದ್ಯದಲ್ಲಿ ಕೂದಲೆಳೆ ಅಂತರದಲ್ಲಿ ಸೋತಿದ್ದ ಭಾರತದ ಆಸೆಗೆ ಎರಡನೇ ಪಂದ್ಯದಲ್ಲಿ ಮಳೆ ತಣ್ಣೀರು ಸುರಿದಿತ್ತು. ಆದರೆ ಭಾನುವಾರದ ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಪ್ರಭಾವಿ ಆಟ ಆಡಿದ ತಂಡ ಆತಿಥೇಯರನ್ನು ಆರು ವಿಕೆಟ್‌ಗಳಿಂದ ಮಣಿಸಿತು.

165 ರನ್‌ಗಳ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ (41; 22 ಎಸೆತ; 2 ಸಿಕ್ಸರ್‌, 6 ಬೌಂಡರಿ) ಉತ್ತಮ ತಳಪಾಯ ಹಾಕಿಕೊಟ್ಟರು. ಇವರಿಬ್ಬರು ಅರ್ಧಶತಕದ ಜೊತೆಯಾಟವಾಡಿದರು. 67ರ ಮೊತ್ತದಲ್ಲಿ ಇಬ್ಬರೂ ವಿಕೆಟ್ ಕಳೆದುಕೊಂಡರು. ನಂತರ ವಿರಾಟ್ ಕೊಹ್ಲಿ ಮತ್ತು ಕೆ.ಎಲ್‌.ರಾಹುಲ್ 41 ರನ್‌ಗಳನ್ನು ಸೇರಿಸಿದರು. ರಾಹುಲ್‌ ಔಟಾದ ನಂತರವೂ ಕೊಹ್ಲಿ ಬ್ಯಾಟಿಂಗ್ ವೈಭವ ಮುಂದುವರಿಯಿತು. 41 ಎಸೆತಗಳಲ್ಲಿ 61 ರನ್ ಗಳಿಸಿದ ಅವರು ಎರಡು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಸಿಡಿಸಿದರು. 60 ರನ್‌ಗಳ ಜೊತೆಯಾಟ ಆಡಿದ ದಿನೇಶ್ ಕಾರ್ತಿಕ್‌ ನಾಯಕನಿಗೆ ಉತ್ತಮ ಬೆಂಬಲ ನೀಡಿದರು.

ADVERTISEMENT

ಕೃಣಾಲ್ ಸ್ಪಿನ್ ಬಲೆ: ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆತಿಥೇಯರು ಆರಂಭದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದರು. ಡಿ ಆರ್ಚಿ ಶಾರ್ಟ್‌ ಮತ್ತು ನಾಯಕ ಆ್ಯರನ್ ಫಿಂಚ್‌ ಮೊದಲ ವಿಕೆಟ್‌ಗೆ 68 ರನ್‌ ಸೇರಿಸಿದರು. ಆದರೆ ಎಡಗೈ ಸ್ಪಿನ್ನರ್‌ ಕೃಣಾಲ್ ಪಾಂಡ್ಯ ದಾಳಿಗೆ ಇಳಿದ ನಂತರ ಪರಿಸ್ಥಿತಿ ಬದಲಾಯಿತು. ಪ್ರಮುಖ ನಾಲ್ಕು ವಿಕೆಟ್ ಕಬಳಿಸಿದ ಪಾಂಡ್ಯ ಎದುರಾಳಿಗಳ ರನ್‌ ಗಳಿಕೆಗೆ ತಡೆ ಹಾಕಿದರು. ಅಂತಿಮ ಓವರ್‌ಗಳಲ್ಲಿ ಮಾರ್ಕಸ್‌ ಸ್ಟೊಯಿನಿಸ್‌ 15 ಎಸೆತಗಳಲ್ಲಿ 25 ರನ್‌ ಗಳಿಸಿ ಮಿಂಚಿದರು.

*
ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದೆ. ಹೀಗಾಗಿ ಬೇಸರವಾಗಿತ್ತು. ಅದರಿಂದ ಹೊರಬರಲು ತುಂಬ ಶ್ರಮಪಟ್ಟೆ. ಈಗ ಲಯಕ್ಕೆ ಮರಳಿರುವುದು ಖುಷಿ ಯಾಗಿದೆ.
-ಕೃಣಾಲ್ ಪಾಂಡ್ಯ, ಭಾರತದ ಬೌಲರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.