ADVERTISEMENT

ಕೊಹ್ಲಿಗೆ ರಜೆ ಅವಕಾಶ; ರೋಹಿತ್‌ ಸೇರ್ಪಡೆ

ಕೈಗೂಡದ ವರುಣ್ ಚಕ್ರವರ್ತಿ ಪದಾರ್ಪಣೆ ಆಸೆ; ಗಾಯಾಳು ವೃದ್ಧಿಮಾನ್, ನಾಗರಕೋಟಿಗೆ ಇಲ್ಲ ಅವಕಾಶ

ಪಿಟಿಐ
Published 9 ನವೆಂಬರ್ 2020, 14:51 IST
Last Updated 9 ನವೆಂಬರ್ 2020, 14:51 IST
ವಿರಾಟ್ ಕೊಹ್ಲಿ –ರಾಯಿಟರ್ಸ್ ಚಿತ್ರ
ವಿರಾಟ್ ಕೊಹ್ಲಿ –ರಾಯಿಟರ್ಸ್ ಚಿತ್ರ   

ನವದೆಹಲಿ: ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಮೊದಲ ಟೆಸ್ಟ್ ಪಂದ್ಯದ ನಂತರ ನಾಯಕ ವಿರಾಟ್ ಕೊಹ್ಲಿ ತಾಯ್ನಾಡಿಗೆ ವಾಪಸಾಗಲಿದ್ದಾರೆ. ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ಜೊತೆ ಇರಲು ಬಯಸಿರುವುದರಿಂದ ಬಿಸಿಸಿಐ ರಜೆ ಅವಕಾಶ ನೀಡಿದೆ. ರೋಹಿತ್ ಶರ್ಮಾ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಲಾಗಿದೆ. ಗಾಯಗೊಂಡಿರುವುದರಿಂದ ಈ ಹಿಂದೆ ಅವರನ್ನು ತಂಡದಿಂದ ಕೈಬಿಡಲಾಗಿತ್ತು.

ಭಾರತ ತಂಡ ಆಸ್ಟ್ರೇಲಿಯಾದಲ್ಲಿ ತಲಾ ಮೂರು ಏಕದಿನ, ಟಿ20 ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ನವೆಂಬರ್‌ 27ರಂದು ಪ್ರವಾಸದ ಮೊದಲ ಪಂದ್ಯ ನಡೆಯಲಿದೆ. ಟೆಸ್ಟ್ ಸರಣಿ ಡಿಸೆಂಬರ್ 17ರಂದು ಅಡಿಲೇಡ್‌ನಲ್ಲಿ ಆರಂಭವಾಗಲಿದೆ. ವಿರಾಟ್ ಕೊಹ್ಲಿ ಕೊನೆಯ ಮೂರು ಟೆಸ್ಟ್ ಪಂದ್ಯಗಳಲ್ಲಿ ಆಡಲು ಲಭ್ಯ ಇರುವುದಿಲ್ಲ.

’ಕೊಹ್ಲಿ ಅವರು ಮೊದಲ ಟೆಸ್ಟ್‌ನ ನಂತರ ವಾಪಸ್ ಬರಲು ಅವಕಾಶ ನೀಡುವಂತೆ ಕೋರಿದ್ದು ಇದನ್ನು ಬಿಸಿಸಿಐ ಮಾನ್ಯ ಮಾಡಿದೆ. ರೋಹಿತ್ ಶರ್ಮಾ ಗಾಯದ ಸಮಸ್ಯೆ ಬಗ್ಗೆ ಬಿಸಿಸಿಐ ವೈದ್ಯಕೀಯ ತಂಡ ನಿರಂತರ ಮಾಹಿತಿ ಪಡೆದುಕೊಳ್ಳುತ್ತಿದೆ. ಸದ್ಯದ ಸ್ಥಿತಿಯನ್ನು ಆಯ್ಕೆ ಸಮಿತಿಗೆ ತಿಳಿಸಿದ್ದು ಏಕದಿನ ಮತ್ತು ಟಿ20 ತಂಡದಿಂದ ಕೈಬಿಟ್ಟು ಟೆಸ್ಟ್ ತಂಡದಲ್ಲಿ ಅವರನ್ನು ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಮಧ್ಯಮ ವೇಗಿ ಇಶಾಂತ್ ಶರ್ಮಾ ಅವರನ್ನು ಟೆಸ್ಟ್ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಐಪಿಎಲ್‌ನಲ್ಲಿ ಭುಜದ ನೋವಿಗೆ ಒಳಗಾಗಿರುವ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರನ್ನು ತಂಡದಿಂದ ಕೈಬಿಡಲು ನಿರ್ಧರಿಸಲಾಗಿದೆ. ಈ ಹಿಂದೆ ತಂಡವನ್ನು ಪ್ರಕಟಿಸಿದಾಗ ಅವರನ್ನು ಸರ್ಪಡೆಗೊಳಿಸಲಾಗಿತ್ತು. ಪದಾರ್ಪಣೆ ಮಾಡುವ ಅವರ ಕನಸು ಗಾಯದಿಂದಾಗಿ ಕಮರಿದೆ. ಅವರ ಬದಲಿಗೆ ಟಿ.ನಟರಾಜನ್‌ಗೆ ಅವಕಾಶ ಒದಗಿದೆ. ಟಿ20 ತಂಡದಲ್ಲಿ ಮಾತ್ರ ಸ್ಥಾನ ಪಡೆದುಕೊಂಡಿದ್ದ ಸಂಜು ಸ್ಯಾಮ್ಸನ್ ಅವರನ್ನು ಏಕದಿನ ತಂಡಕ್ಕೆ ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಪರಿಗಣಿಸಲಾಗಿದೆ. ಗಾಯಗೊಂಡಿರುವ ವೃದ್ಧಿಮಾನ್ ಸಹಾ ಮತ್ತು ಕಮಲೇಶ್ ನಾಗರಕೋಟಿ ಅವರನ್ನು ಕೈಬಿಡಲು ನಿರ್ಧರಿಸಲಾಗಿದೆ.

ಪರಿಷ್ಕೃತ ತಂಡಗಳು: ಟಿ20: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಮಯಂಕ್ ಅಗರವಾಲ್, ಕೆ.ಎಲ್.ರಾಹುಲ್ (ಉಪನಾಯಕ–ವಿಕೆಟ್ ಕೀಪರ್‌), ಶ್ರೇಯಸ್‌ ಅಯ್ಯರ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್),‌ ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ದೀಪಕ್ ಚಾಹರ್, ಟಿ.ನಟರಾಜನ್.
ಏಕದಿನ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಶುಭಮನ್ ಗಿಲ್‌, ಕೆ.ಎಲ್‌.ರಾಹುಲ್ (ಉಪನಾಯಕ–ವಿಕೆಟ್ ಕೀಪರ್‌), ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಯಂಕ್‌ ಅಗರವಾಲ್‌, ರವೀಂದ್ರ ಜಡೇಜ‌, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್‌, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್).

ಟೆಸ್ಟ್‌: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಮಯಂಕ್ ಅಗರವಾಲ್‌, ಪೃಥ್ವಿ ಶಾ, ಕೆ.ಎಲ್‌.ರಾಹುಲ್. ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಹನುಮ ವಿಹಾರಿ, ಶುಭಮನ್ ಗಿಲ್‌, ರಿಷಭ್ ಪಂತ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ನವದೀಪ್ ಸೈನಿ, ಕುಲದೀಪ್ ಯಾದವ್, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.