ADVERTISEMENT

ಸತತ ಬಯೊಬಬಲ್‌ನಿಂದ ಒತ್ತಡ: ವಿರಾಟ್‌ ಕೊಹ್ಲಿ

ಕ್ರಿಕೆಟ್ ಸರಣಿಗಳ ಆಯೋಜನೆ ವೇಳೆ ಸಮಸ್ಯೆ ಪರಿಗಣಿಸಲು ಭಾರತ ತಂಡದ ನಾಯಕನ ಸಲಹೆ

ಏಜೆನ್ಸೀಸ್
Published 29 ಮಾರ್ಚ್ 2021, 11:07 IST
Last Updated 29 ಮಾರ್ಚ್ 2021, 11:07 IST
ವಿರಾಟ್ ಕೊಹ್ಲಿ –ಎಎಫ್‌ಪಿ ಚಿತ್ರ
ವಿರಾಟ್ ಕೊಹ್ಲಿ –ಎಎಫ್‌ಪಿ ಚಿತ್ರ   

ಪುಣೆ: ಕೋವಿಡ್‌–19ರಿಂದಾಗಿ ತಿಂಗಳುಗಳ ಕಾಲ ಬಯೊಬಬಲ್‌ನಲ್ಲಿ ಇದ್ದ ಆಟಗಾರರು ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಜಯ ಗಳಿಸಿ ಸರಣಿಯನ್ನು 2–1ರಲ್ಲಿ ಗೆದ್ದುಕೊಂಡ ನಂತರ ಮಾತನಾಡಿದ ಕೊಹ್ಲಿ ‘ಎರಡು–ಮೂರು ತಿಂಗಳ ಕಾಲ ಬಯೊಬಬಲ್‌ನಲ್ಲಿದ್ದು ಆಡುವುದು ಅತ್ಯಂತ ಕಠಿಣವಾಗಿದ್ದು ಮುಂದಿನ ದಿನಗಳಲ್ಲಿ ಕ್ರಿಕೆಟ್ ಸರಣಿಗಳನ್ನು ಆಯೋಜಿಸುವಾಗ ಈ ಸಮಸ್ಯೆಯನ್ನೂ ಗಮನದಲ್ಲಿಟ್ಟುಕೊಳ್ಳಬೇಕು’ ಎಂದರು.

ಭಾರತ ಮತ್ತು ಇಂಗ್ಲೆಂಡ್ ತಂಡಗಳಲ್ಲಿ ಆಡಿದವರು ಇದೀಗ ಐಪಿಎಲ್‌ನಲ್ಲಿ ತಾವು ಪ್ರತಿನಿಧಿಸುವ ತಂಡಗಳನ್ನು ಸೇರಿಕೊಳ್ಳುತ್ತಿದ್ದು ಅಲ್ಲೂ ಕ್ವಾರಂಟೈನ್‌ನಲ್ಲಿರಬೇಕಾಗಿದೆ.

ADVERTISEMENT

’ಎಲ್ಲ ಆಟಗಾರರೂ ಒಂದೇ ರೀತಿಯ ಮಾನಸಿಕ ಸ್ಥಿತಿಯಲ್ಲಿ ಇರುತ್ತಾರೆ ಎನ್ನಲಾಗದು. ಸ್ವಲ್ಪ ದೌರ್ಬಲ್ಯ ಇರುವವರು ಕೆಲವೊಮ್ಮೆ ತುಂಬ ಬೇಸರ ಮಾಡಿಕೊಳ್ಳುವ ಮತ್ತು ಬದಲಾವಣೆ ಬಯಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಚರ್ಚೆ ನಡೆಯಬೇಕಾಗಿದೆ ಮತ್ತು ಪರಿಹಾರ ಕಂಡುಕೊಳ್ಳಬೇಕಾಗಿದೆ’ ಎಂದು ಕೊಹ್ಲಿ ನುಡಿದರು.

’ಐಪಿಎಲ್‌ ವಿಭಿನ್ನವಾದ ಟೂರ್ನಿಯಾಗಿದ್ದು ಅದರಲ್ಲಿನ ಸವಾಲುಗಳೇ ಬೇರೆ. ಟೂರ್ನಿಯಲ್ಲಿ ಪಾಲ್ಗೊಳ್ಳುವ ವಿದೇಶದ ಬಹುತೇಕ ಆಟಗಾರರು ಆಗಸ್ಟ್ ತಿಂಗಳಿಂದ ಬಯೊಬಬಲ್‌ನಲ್ಲಿದ್ದಾರೆ. ಕೆಲವರಿಗೆ ಮಧ್ಯೆ ಸ್ವಲ್ಪ ಬಿಡುವು ಸಿಕ್ಕಿರಬಹುದಷ್ಟೇ. ಭಾರತದ ಆಟಗಾರರು ಐಪಿಎಲ್‌, ಆಸ್ಟ್ರೇಲಿಯಾ ಪ್ರವಾಸ ಮುಂತಾದವುಗಳಿಂದಾಗಿ ಅನೇಕ ತಿಂಗಳಿಂದ ನಿರ್ಬಂಧಗಳ ನಡುವೆಯೇ ಬದುಕುತ್ತಿದ್ದಾರೆ’ ಎಂದು ಅವರು ಹೇಳಿದರು.

ಭಾರತ ತಂಡಕ್ಕೆ ರವಿಶಾಸ್ತ್ರಿ ಅಭಿನಂದನೆ

ಮೂರೂ ಮಾದರಿಯ ಕ್ರಿಕೆಟ್‌ನ ಸರಣಿಗಳಲ್ಲಿ ಮೇಲುಗೈ ಸಾಧಿಸಿ ಜೀವನದಲ್ಲಿ ಅಪರೂಪದ ಗೆಲುವು ತಂದುಕೊಟ್ಟ ತಂಡಕ್ಕೆ ಅಭಿನಂದನೆಗಳು ಸಲ್ಲಲೇಬೇಕು ಎಂದು ಭಾರತ ತಂಡದ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಭಾನುವಾರ ನಡೆದ ಏಕದಿನ ಪಂದ್ಯದ ನಂತರ ಮಾತನಾಡಿದ ಟ್ವೀಟ್ ಮಾಡಿರುವ ಅವರು ’ಕೋವಿಡ್‌ನಿಂದಾಗಿ ಉಂಟಾಗಿರುವ ವಿಷಮ ಪರಿಸ್ಥಿತಿಯಲ್ಲೂ ಕೆಚ್ಚೆದೆಯಿಂದ ಆಡಿ ಸರಣಿಗಳನ್ನು ಗೆದ್ದಿರುವುದು ಸಂತಸದ ವಿಷಯ’ ಎಂದಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಟಿ20 ಮತ್ತು ಟೆಸ್ಟ್ ಸರಣಿಗಳನ್ನು ಗೆದ್ದ ನಂತರ ತವರಿನಲ್ಲಿ ಇಂಗ್ಲೆಂಡ್ ಎದುರು ನಡೆದ ಟೆಸ್ಟ್‌, ಟಿ20 ಮತ್ತು ಏಕದಿನ ಸರಣಿಗಳನ್ನು ಭಾರತ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆದ ಐಪಿಎಲ್ ಟೂರ್ನಿಯ ಆರಂಭದೊಂದಿಗೆ ಭಾರತದ ಬಹುತೇಕ ಆಟಗಾರರ ಬಯೊಬಬಲ್‌ನಲ್ಲಿದ್ದರು. ಆಸ್ಟ್ರೇಲಿಯಾ ಸರಣಿಯ ನಂತರ ಒಂದು ವಾರ ಬಿಡುವು ನೀಡಲಾಗಿತ್ತು. ಆ ಮೇಲೆ ಇಂಗ್ಲೆಂಡ್ ಎದುರಿನ ಸರಣಿಗಳಿಗಾಗಿ ಬಯೊಬಬಲ್ ಪ್ರವೇಶಿಸಿದ್ದರು.

ಟೆಸ್ಟ್ ಕ್ರಿಕೆಟ್ ನನ್ನ ಆದ್ಯತೆ: ಭುವನೇಶ್ವರ್ ಕುಮಾರ್

ಐಪಿಎಲ್‌ನ ಕಾರ್ಯಭಾರದಿಂದಾಗಿ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಿಂದ ದೂರು ಉಳಿಯುವುದು ಅನಿವಾರ್ಯವಾಗಲಿದೆ ಎಂದು ಹೇಳಿರುವ ಭಾರತದ ಮಧ್ಯಮ ವೇಗಿ ಭುವನೇಶ್ವರ್ ಕುಮಾರ್ ಟೆಸ್ಟ್ ಕ್ರಿಕೆಟ್‌ಗೆ ನನ್ನ ಮೊದಲ ಆದ್ಯತೆ ಎಂದಿದ್ದಾರೆ.

ಎರಡು ವರ್ಷಗಳಿಂದ ಗಾಯದ ಸಮಸ್ಯೆಗಳಿಂದ ಬಳಲುತ್ತಿರುವ ಭುವನೇಶ್ವರ್‌ ಇಂಗ್ಲೆಂಡ್ ಎದುರಿನ ಮೂರು ಏಕದಿನ ಪಂದ್ಯಗಳಲ್ಲಿ ಆರು ವಿಕೆಟ್ ಕಬಳಿಸಿ ಸರಣಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದವರ ಪಟ್ಟಿಯ ಎರಡನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್ ಪಂದ್ಯಗಳನ್ನು ಗಮನದಲ್ಲಿರಿಸಿಕೊಂಡೇ ಐಪಿಎಲ್‌ನಲ್ಲಿ ಒತ್ತಡ ನಿಭಾಯಿಸಿಕೊಳ್ಳಲು ಪ್ರಯತ್ನಿಸುವೆ. ಟೆಸ್ಟ್‌ ಕ್ರಿಕೆಟ್‌ಗೆ ಸಜ್ಜುಗೊಳ್ಳಲು ಬೇಕಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.