ADVERTISEMENT

ಕೋಲ್ಕತ್ತ ‘ಗೌರವ’ ರಕ್ಷಿಸಿದ ಕಮಿನ್ಸ್

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 5:20 IST
Last Updated 17 ಅಕ್ಟೋಬರ್ 2020, 5:20 IST
ಅರ್ಧಶತಕ ಗಳಿಸಿದ ಪ್ಯಾಟ್ ಕಮಿನ್ಸ್  –ಪಿಟಿಐ ಚಿತ್ರ
ಅರ್ಧಶತಕ ಗಳಿಸಿದ ಪ್ಯಾಟ್ ಕಮಿನ್ಸ್  –ಪಿಟಿಐ ಚಿತ್ರ   

ಅಬುಧಾಬಿ (ಪಿಟಿಐ): ಈ ಸಲದ ಐಪಿಎಲ್ ಹರಾಜಿನಲ್ಲಿ ಹೆಚ್ಚು ಮೌಲ್ಯ ಪಡೆದ ಬೌಲರ್‌ ಎಂಬ ಹೆಗ್ಗಳಿಕೆಯ ಪ್ಯಾಟ್ ಕಮಿನ್ಸ್ ಶುಕ್ರವಾರ ತಮ್ಮ ಬ್ಯಾಟಿಂಗ್ ಮೂಲಕ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಗೌರವ ಕಾಪಾಡಿದರು!

ಶೇಖ್ ಝಯೇದ್ ಕ್ರೀಡಾಂಗಣದಲ್ಲಿ 36 ಎಸೆತಗಳಲ್ಲಿ ಔಟಾಗದೇ 53 ರನ್‌ ಗಳಿಸಿದ ಅವರು ಕೆಕೆಆರ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 148 ರನ್‌ ಮೊತ್ತ ಗಳಿಸಲು ನೆರವಾದರು.

ಟಾಸ್ ಗೆದ್ದ ಕೋಲ್ಕತ್ತ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ಬೌಲರ್‌ಗಳು ಕೊಟ್ಟ ಪೆಟ್ಟಿಗೆ ಕೇವಲ 61 ರನ್‌ಗಳಿಗೆ ಐದು ವಿಕೆಟ್‌ಗಳನ್ನು ತಂಡವು ಕಳೆದುಕೊಂಡಿತು. ಈ ಪಂದ್ಯದಿಂದ ನಾಯಕರಾಗಿ ಹೊಣೆ ವಹಿಸಿಕೊಂಡ ಏಯಾನ್ ಮಾರ್ಗನ್ (ಔಟಾಗದೆ 39; 29ಎಸೆತ) ಮತ್ತು ಕಮಿನ್ಸ್‌ ಮುರಿಯದ ಆರನೇ ವಿಕೆಟ್ ಜೊತೆಯಾಟದಲ್ಲಿ 87 ರನ್‌ ಸೇರಿಸಿದರು. ಅದರಿಂದಾಗಿ ತಂಡವು ಅಲ್ಪಮೊತ್ತದ ಆತಂಕದಿಂದ ಪಾರಾಯಿತು.

ADVERTISEMENT

ಇಬ್ಬರೂ ತಲಾ ಎರಡು ಸಿಕ್ಸರ್ ಹೊಡೆದರು. ಮಾರ್ಗನ್ ಮತ್ತು ಕಮಿನ್ಸ್ ಕ್ರಮವಾಗಿ ಎರಡು ಮತ್ತು ಐದು ಬೌಂಡರಿ ಗಳಿಸಿದರು.

ನಿಕಟಪೂರ್ವ ನಾಯಕ ದಿನೇಶ್ ಕಾರ್ತಿಕ್, ರಾಹುಲ್ ತ್ರಿಪಾಠಿ ಮತ್ತು ನಿತೀಶ್ ರಾಣಾ ಒಂದಂಕಿ ಗಳಿಸಿದ್ದರಿಂದ ತಂಡವು ಸಂಕಷ್ಟದಲ್ಲಿತ್ತು. ಶುಭಮನ್ ಗಿಲ್ (21) ಮತ್ತು ಆ್ಯಂಡ್ರೆ ರಸೆಲ್ (12) ಎರಡಂಕಿ ಮೊತ್ತ ಗಳಿಸಿದರಾದರೂ ತಂಡದ ಚೇತರಿಕೆಗೆ ಪ್ರಯತ್ನಿಸಲಿಲ್ಲ.

ಮುಂಬೈ ತಂಡದ ಟ್ರೆಂಟ್ ಬೌಲ್ಟ್‌, ಕೌಲ್ಟರ್ ನೈಲ್ ಮತ್ತು ಜಸ್‌ಪ್ರೀತ್ ಬೂಮ್ರಾ ತಲಾ ಒಂದು ವಿಕೆಟ್ ಗಳಿಸಿದರೆ, ರಾಹುಲ್ ಚಾಹರ್ ಎರಡು ವಿಕೆಟ್ ಕಿತ್ತು ಕೆಕೆಆರ್‌ ತಂಡದ ರನ್‌ ಗಳಿಕಗೆ ಅಡ್ಡಗಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.