ADVERTISEMENT

ಕ್ರೀಡಾಪಟುಗಳಿಗೆ ಕೆಎಸ್‌ಸಿಎ ನೆರವಾಗಲಿ: ಕೊಂಡಜ್ಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಮೇ 2021, 13:10 IST
Last Updated 9 ಮೇ 2021, 13:10 IST
ಕೆಎಸ್‌ಸಿಎ
ಕೆಎಸ್‌ಸಿಎ   

ಬೆಂಗಳೂರು: ಕೊರೊನಾ ಹೆಚ್ಚುತ್ತಿರುವ ಸಂದರ್ಭದಲ್ಲಿ ಮಾಜಿ ಕ್ರಿಕೆಟ್ ಆಟಗಾರರು, ಅಂಪೈರ್‌ಗಳು ಮತ್ತು ಇತರ ಕ್ರೀಡಾಪಟುಗಳ ನೆರವಿಗೆ ಧಾವಿಸುವಂತೆ ವಿಧಾನ ಪರಿಷತ್ ಸದಸ್ಯ ಮೋಹನ ಕುಮಾರ್ ಕೊಂಡಜ್ಜಿ ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು (ಕೆಎಸ್‌ಸಿಎ) ಆಗ್ರಹಿಸಿದ್ದಾರೆ.

‘ಕ್ರೀಡಾಪಟುಗಳನ್ನು ನಾನು ಗೌರವಿಸುತ್ತೇನೆ. ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಹಾಕಿ ತಂಡದಲ್ಲಿದ್ದ ರವೀಂದ್ರ ಪಾಲ್ ಸಿಂಗ್ ಮತ್ತು ಕೌಶಿಕ್ ಅವರನ್ನು ಕೋವಿಡ್‌ನಿಂದಾಗಿ ಕಳೆದುಕೊಳ್ಳಬೇಕಾಗಿ ಬಂದದ್ದು ಬೇಸರದ ವಿಷಯ’ ಎಂದು ಅವರು ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಮತ್ತು ಭಾರತ ಒಲಿಂಪಿಕ್ಸ್ ಸಂಸ್ಥೆ (ಐಒಎ) ಮಾಜಿ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಹಾಗೂ ಅಂಪೈರ್‌ಗಳ ನೆರವಿಗಾಗಿ ತಂಡವೊಂದನ್ನು ರಚಿಸಿರುವುದು ಸಂತಸದ ಸಂಗತಿ. ಕೆಎಸ್‌ಸಿಎ ಕೂಡ ಇದೇ ರೀತಿಯ ತಂಡವೊಂದನ್ನು ರಚಿಸಿ ಕ್ರೀಡಾಪಟುಗಳಿಗೆ ನೆರವಾಗಬೇಕು. ಮಾಜಿ ಕ್ರಿಕೆಟರುಗಳು, ಅಂಪೈರ್‌ಗಳು ಮತ್ತು ಇತರ ಕ್ರೀಡಾಪಟುಗಳು ಯಾರಾದರೂ ಕೋವಿಡ್‌ನಿಂದ ಬಳಲುತ್ತಿದ್ದರೆ ಅವರಿಗೆ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

ADVERTISEMENT

‘ಚಿನ್ನಸ್ವಾಮಿ ಕ್ರೀಡಾಂಗಣ ಸೇರಿದಂತೆ ಬೆಂಗಳೂರಿನಲ್ಲಿರುವ ವಿವಿಧ ಕ್ರೀಡಾಂಗಣಗಳು, ಹುಬ್ಬಳ್ಳಿ, ಶಿವಮೊಗ್ಗ ಮುಂತಾದ ಕಡೆಗಳಲ್ಲಿ ಕೆಎಸ್‌ಸಿಎಗೆ ಸಾಕಷ್ಟು ಕಟ್ಟಡ ಮತ್ತು ಜಾಗದ ಸೌಲಭ್ಯ ಇದೆ. ಅಲ್ಲಿರುವ ಕೊಠಡಿಗಳನ್ನು ಆಸ್ಪತ್ರೆಗಳಾಗಿ ಪರಿವರ್ತಿಸಿ ಕ್ರೀಡಾಪಟುಗಳಿಗೆ ಚಿಕಿತ್ಸೆ ನೀಡಬಹುದು. ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಮಾಜಿ ಆಟಗಾರರಿಗೆ ಹಣಕಾಸಿನ ನೆರವು ಕೂಡ ನೀಡಬೇಕು’ ಎಂದು ಅವರು ಹೇಳಿದ್ದಾರೆ.

ಕೋವಿಡ್‌ನಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ ಕ್ರಿಕೆಟ್ ಟೂರ್ನಿಯನ್ನು ಮುಂದೂಡಿರುವುದು ಸಂತಸದ ವಿಷಯ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ ಸೇರಿದಂತೆ ಆರು ಟೆಸ್ಟ್ ಪಂದ್ಯಗಳನ್ನು ಆಡಲು ಇಂಗ್ಲೆಂಡ್‌ಗೆ ತೆರಳುವ ಭಾರತ ತಂಡದ ಪ್ರವಾಸವನ್ನು ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇಂಗ್ಲೆಂಡ್‌ಗೆ ಹೋದರೆ ಭಾರತದಲ್ಲಿರುವುದಕ್ಕಿಂತಲೂ ಅಪಾಯಕಾರಿಯಾಗಿರುವ ವೈರಾಣುವಿನ ಪ್ರಭೇದಕ್ಕೆ ನಮ್ಮ ಆಟಗಾರರು ಒಡ್ಡಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಸ ರದ್ದುಗೊಳಿಸುವಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರನ್ನು ಒತ್ತಾಯಿಸಲು ಕೆಎಸ್‌ಸಿಎ ಮುಂದಾಗಬೇಕು ಎಂದೂ ಮೋಹನ್ ಕೊಂಡಜ್ಜಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.