
ಪತ್ನಿ ಅರ್ಚನಾ ಹಾಗೂ ಪುತ್ರಿಯೊಂದಿಗೆ ಕರ್ನಾಟಕದ ಕೆ. ಗೌತಮ್
ಬೆಂಗಳೂರು: ಹದಿಮೂರು ವರ್ಷಗಳ ಹಿಂದೆ ಮೀರತ್ ಕ್ರಿಕೆಟ್ ಅಂಗಳದಲ್ಲಿ ನಡೆದಿದ್ದ ರಣಜಿ ಟ್ರೋಫಿ ಪಂದ್ಯದಲ್ಲಿ ಸ್ಥಳೀಯ ಹೀರೊ ಸುರೇಶ್ ರೈನಾ ಅವರ ಬ್ಯಾಟಿಂಗ್ ನೋಡಲು ಹಲವಾರು ಜನ ಸೇರಿದ್ದರು. ಆದರೆ ಎಂಟು ರನ್ ಗಳಿಸಿದ್ದ ರೈನಾ ಅವರನ್ನು ತಮ್ಮದೇ ಬೌಲಿಂಗ್‌ನಲ್ಲಿ ಕ್ಯಾಚ್ ಪಡೆದ ಕರ್ನಾಟಕದ ಕೃಷ್ಣಪ್ಪ ಗೌತಮ್ ಸಂಭ್ರಮಿಸಿದ್ದರು. ಅದರೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ ವಿಕೆಟ್ ಖಾತೆಯನ್ನು ತೆರೆದಿದ್ದರು.
ಅಂದು ಶುರುವಾದ ತಮ್ಮ ಕ್ರಿಕೆಟ್ ಪಯಣಕ್ಕೆ ಗೌತಮ್ ಸೋಮವಾರ ತೆರೆ ಎಳೆದಿದ್ದಾರೆ. ಹರಭಜನ್ ಸಿಂಗ್ ಅವರಂತೆ ಸ್ಪಿನ್ ಮಾಡುತ್ತಿದ್ದ ಕಾರಣಕ್ಕೆ ‘ಭಜ್ಜಿ’ ಎಂದೇ ಪರಿಚಿತರಾಗಿರುವ 37 ವರ್ಷದ ಬಲಗೈ ಆಟಗಾರ ತಾವು ಆಡಿ ಬೆಳೆದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ಸೋಮವಾರ ನಿವೃತ್ತಿ ಘೋಷಿಸಿದರು. ಅವರ ಪತ್ನಿ ಅರ್ಚನಾ, ಮಗಳು ನಿತಾರಾ ಹಾಗೂ ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿದ್ದರು.
‘ರಾಜ್ಯ, ಐಪಿಎಲ್ ಮತ್ತು ದೇಶಕ್ಕಾಗಿ ಆಡುವ ಅವಕಾಶ ಸಿಕ್ಕಿದೆ. ಅದಕ್ಕಾಗಿ ನನಗೆ ಸಂಪೂರ್ಣ ತೃಪ್ತಿಯಿದೆ. ಕೆಎಸ್‌ಸಿಎ, ಬಿಸಿಸಿಐಗಳಿಗೆ ನಾನು ಆಭಾರಿ. ನನ್ನ ಕುಟುಂಬ, ಸ್ನೇಹಿತರ ನೆರವಿ ನಿಂದ ಇಷ್ಟು ಬೆಳೆಯಲು ಸಾಧ್ಯವಾಗಿದೆ. ಭವಿಷ್ಯದ ಆಟಗಾರರಿಗೆ ಮಾರ್ಗದರ್ಶನ ನೀಡಲು ಅಥವಾ ಕ್ರಿಕೆಟ್‌ಗೆ ಸೇವೆ ಸಲ್ಲಿಸಲು ಸದಾ ಸಿದ್ಧನಾಗಿರುವೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
ತಮ್ಮ ವೃತ್ತಿಬದುಕಿನಲ್ಲಿ ಹಲವು ಏಳುಬೀಳುಗಳನ್ನು ಕಂಡವರು ಗೌತಮ್. ಪದಾರ್ಪಣೆಯ ನಂತರ ಕೆಲ ವರ್ಷ ಅವರು ತಂಡದಲ್ಲಿ ನಿರಂತರ ಅವಕಾಶ ಪಡೆಯಲಿಲ್ಲ. ಆದರೆ ಈ ವೇಳೆ ಗೌತಮ್ ಅವರು ಮಾನಸಿಕವಾಗಿ ಮತ್ತಷ್ಟು ಗಟ್ಟಿಯಾದರು. ತಮ್ಮ ಕೌಶಲಗಳಿಗೆ ಸಾಣೆ ಹಿಡಿದರು. ಬ್ಯಾಟಿಂಗ್ ಕೂಡ ಉತ್ತಮಪಡಿಸಿಕೊಂಡರು. ಇದರಿಂದಾಗಿ 2016–17ರಲ್ಲಿ ರಾಜ್ಯ ತಂಡಕ್ಕೆ ಮರಳಿದರು. ಮೊದಲ ಮೂರು ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಆ ರಣಜಿ ಟ್ರೋಫಿ ಋತುವಿನಲ್ಲಿ ಒಟ್ಟು 27 ಹಾಗೂ ಅದರ ನಂತರದ ವರ್ಷದಲ್ಲಿ 39 ವಿಕೆಟ್‌ಗಳನ್ನು ಗಳಿಸಿದರು. ಅವರು ಎಲ್ಲ ಮಾದರಿಗಳಲ್ಲಿಯೂ ರಾಜ್ಯ ತಂಡದ ಪ್ರಮುಖ ಆಟಗಾರನಾಗಿ ರೂಪುಗೊಂಡರು.
2018ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡುವ ರಾಜಸ್ಥಾನ ರಾಯಲ್ಸ್ ತಂಡವು ಅವರನ್ನು ₹6.2 ಕೋಟಿ ನೀಡಿ ಸೆಳೆದುಕೊಂಡಿತು. 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ₹9.25 ಕೋಟಿ ಕೊಟ್ಟು ಗೌತಮ್ ಅವರನ್ನು ಸೇರ್ಪಡೆ ಮಾಡಿಕೊಂಡರು. ಮಧ್ಯಮ ವರ್ಗದ ಕುಟುಂಬದಿಂದ ಬೆಳೆದು ಬಂದ ಹುಡುಗ ಕೋಟ್ಯಧಿಪತಿಯಾದರು. 2021ರಲ್ಲಿ ಕೊಲಂಬೊದಲ್ಲಿ ಶ್ರೀಲಂಕಾ ಎದುರು ಕಣಕ್ಕಿಳಿದಾಗ ಅವರಿಗೆ 33 ವರ್ಷಗಳಾಗಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುವ ಹೆಚ್ಚು ಅವಕಾಶಗಳು ಅವರಿಗೆ ದೊರೆತಿಲ್ಲ.
ದೂರವಾಣಿ ನಗರದ ಅಂಗಳಗಳಲ್ಲಿ ಆಡುತ್ತ ಬೆಳೆದ ಗೌತಮ್ ಫೀಲ್ಡಿಂಗ್‌ನಲ್ಲಿಯೂ ಅಪಾರ ಚುರುಕುತನ ಮೆರೆದವರು. ಆದರೆ 2022–23ರ ಋತುವಿನಲ್ಲಿಯೂ ಅವರು 11 ಪಂದ್ಯಗಳಲ್ಲಿ 39 ವಿಕೆಟ್ ಗಳಿಸಿದ್ದರು. ಆದರೂ ನಂತರದ ಋತುವಿನಲ್ಲಿ ಅವರಿಗೆ ಅವಕಾಶ ಸಿಗಲಿಲ್ಲ. ಐಪಿಎಲ್‌ನಲ್ಲಿಯೂ ಅವರು ಹೋದ ವರ್ಷ ಕೊನೆಯ ಬಾರಿಗೆ ಆಡಿದ್ದರು. ಕಳೆದ ಒಂದು ವರ್ಷದಿಂದ ಅವರು ಟಿ.ವಿಯಲ್ಲಿ ಕನ್ನಡ ಕಾಮೆಂಟೆಟರ್ ಆಗಿದ್ದಾರೆ.
‘ನನಗೆ ಯಾವುದರ ಬಗ್ಗೆಯೂ ವಿಷಾದವಿಲ್ಲ’ ಎಂದು ಹೇಳುವ ಗೌತಮ್, ‘ರಾಜ್ಯದಲ್ಲಿ ಹಲವು ಪ್ರತಿಭಾನ್ವಿತರು ಇದ್ದಾರೆ. ಆಫ್‌ಸ್ಪಿನ್ನರ್‌ಗಳ ಸಂಖ್ಯೆ ಕಡಿಮೆ ಇದೆ. ಆದರೆ ಮೊಹಸೀನ್ ಖಾನ್ ಅಂತಹ ಆಟಗಾರರು ಭರವಸೆ ಮೂಡಿಸಿದ್ದಾರೆ’ ಎಂದರು.
ಗೌತಮ್ ಅವರು ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 59 ಪಂದ್ಯ ಗಳಲ್ಲಿ 224 ವಿಕೆಟ್ ಪಡೆದಿದ್ದಾರೆ. ಬ್ಯಾಟಿಂಗ್‌ನಲ್ಲಿ ಒಂದು ಶತಕ ಸೇರಿ 1,419 ರನ್ ಬಾರಿಸಿದ್ದಾರೆ. ಲಿಸ್ಟ್ ‘ಎ’ನಲ್ಲಿ 68 ಪಂದ್ಯಗಳಲ್ಲಿ 96 ವಿಕೆಟ್ ಗಳಿಸಿದ್ದು, 630 ರನ್ ಹೊಡೆದಿದ್ದಾರೆ.
ಟಿ20 ಮಾದರಿಯಲ್ಲಿ 92 ಪಂದ್ಯಗಳಲ್ಲಿ 91 ವಿಕೆಟ್ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ 734 ರನ್ ಮೂಡಿಬಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.