ADVERTISEMENT

ಕೆಎಸ್‌ಸಿಎ ಚುನಾವಣೆ: ಆದೇಶ ಕಾಯ್ದಿರಿಸಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 1:29 IST
Last Updated 28 ನವೆಂಬರ್ 2025, 1:29 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯ ಕಣದಲ್ಲಿ ನನ್ನನ್ನೂ ಅಭ್ಯರ್ಥಿಯನ್ನಾಗಿ ಪರಿಗಣಿಸಲು ನಿರ್ದೇಶಿಸಬೇಕು’ ಎಂದು ಕೋರಿ ಕೆ.ಎನ್.ಶಾಂತಕುಮಾರ್ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್‌ ಅಂತಿಮ ಆದೇಶ ಕಾಯ್ದಿರಿಸಿದೆ.

ಈ ಕುರಿತ ರಿಟ್‌ ಅರ್ಜಿ ವಿಚಾರಣೆಯನ್ನು ಗುರುವಾರ ಮುಂದುವರಿಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜು ಅವರಿದ್ದ ಏಕಸದಸ್ಯ ನ್ಯಾಯಪೀಠ ಸುದೀರ್ಘ ವಾದ–ಪ್ರತಿವಾದ ಆಲಿಸಿತು.

‘ಕೆಎಸ್‌ಸಿಎ ಚುನಾವಣಾ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳು ಯಾರೆಂಬುದನ್ನು ಸದ್ಯ ಪ್ರಕಟಿಸಬಾರದು’ ಎಂಬ ಮಧ್ಯಂತರ ತಡೆ ಆದೇಶವನ್ನು ವಿಸ್ತರಿಸಿತಲ್ಲದೇ, ಡಿಸೆಂಬರ್ 1ರಂದು ಅಂತಿಮ ಆದೇಶ ಪ್ರಕಟಿಸುವುದಾಗಿ ತಿಳಿಸಿತು.

ADVERTISEMENT

‘ನಾಮಪತ್ರ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಅಂದರೆ ನವೆಂಬರ್ 24 ರಂದೇ ನಾನು ಬಾಕಿ ಹಣ ಪಾವತಿಸಿದ್ದೇನೆ. ಆದರೆ, ಚಂದಾ ಬಾಕಿ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ನನ್ನ ನಾಮಪತ್ರವನ್ನು ತಿರಸ್ಕರಿಸಿ ಚುನಾವಣಾ ಅಧಿಕಾರಿ 2025ರ ನವೆಂಬರ್ 24ರಂದು ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು. ಚುನಾವಣೆಯಲ್ಲಿ ಸ್ಪರ್ಧಿಸಲು ನನ್ನನ್ನೂ ಮಾನ್ಯ ಅಭ್ಯರ್ಥಿ ಎಂದು ಘೋಷಿಸಿ, ಚುನಾವಣಾ ವೇಳಾಪಟ್ಟಿ ಪ್ರಕ್ರಿಯೆ ಮುಂದುವರಿಸಲು ಚುನಾವಣಾ ಅಧಿಕಾರಿಗೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.