ADVERTISEMENT

ಐಪಿಎಲ್‌ನಲ್ಲಿ ಭಾರತದ ಮುಖ್ಯ ಕೋಚ್‌ಗಳ ಕೊರತೆ: ಕುಂಬ್ಳೆ ಬೇಸರ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 16:23 IST
Last Updated 8 ಸೆಪ್ಟೆಂಬರ್ 2020, 16:23 IST
ಅನಿಲ್ ಕುಂಬ್ಳೆ
ಅನಿಲ್ ಕುಂಬ್ಳೆ   

ನವದೆಹಲಿ: ಯುನೈಟೆಡ್ ಅರಬ್ ಎಮಿರೆಟ್ಸ್‌ನಲ್ಲಿ ನಡೆಯಲಿರುವು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಲಿರುವ ಎಂಟು ತಂಡಗಳಲ್ಲಿ ಭಾರತ ಮೂಲದ ಮುಖ್ಯ ಕೋಚ್ ಇರುವುದು ಕೇವಲ ಒಂದು ತಂಡಕ್ಕೆ ಮಾತ್ರ!

ಹೌದು; ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಬಿಟ್ಟರೆ, ಉಳಿದ ಏಳು ತಂಡಗಳಿಗೂ ವಿದೇಶಿಯರೇ ಮುಖ್ಯಕೋಚ್‌ಗಳಾಗಿದ್ದಾರೆ. ರಿಕಿ ಪಾಂಟಿಂಗ್ (ಡೆಲ್ಲಿ ಕ್ಯಾಪಿಟಲ್ಸ್‌), ಬ್ರೆಂಡನ್ ಮೆಕ್ಲಮ್ (ಕೋಲ್ಕತ್ತ ನೈಟ್‌ ರೈಡರ್ಸ್‌), ಸ್ಟೀಫನ್ ಫ್ಲೆಮಿಂಗ್ (ಚೆನ್ನೈ ಸೂಪರ್ ಕಿಂಗ್ಸ್‌), ಮಹೇಲಾ ಜಯವರ್ಧನೆ (ಮುಂಬೈ ಇಂಡಿಯನ್ಸ್), ಟ್ರೆವರ್ ಬೇಲಿಸ್ (ಸನ್‌ರೈಸರ್ಸ್‌ ಹೈದರಾಬಾದ್), ಸೈಮನ್ ಕ್ಯಾಟಿಚ್ (ರಾಯಲ್ ಚಾಲೆಂಜರ್ಸ್‌ ಬೆಂಗಳೂರು) ಮತ್ತು ಆ್ಯಂಡ್ರ್ಯೂ ಮೆಕ್‌ಡೋನಾಲ್ಡ್ (ರಾಜಸ್ಥಾನ್ ರಾಯಲ್ಸ್) ಅವರೇ ಆ ವಿದೇಶಿಗರು.

ಈ ಕುರಿತು ಪ್ರತಿಕ್ರಿಯಿಸಿರುವ ಕುಂಬ್ಳೆ, ‘ಐಪಿಎಲ್‌ನಲ್ಲಿ ಭಾರತದ ಮಾಜಿ ಆಟಗಾರರು, ಕೋಚ್‌ಗಳು ತಂಡಗಳ ಮುಖ್ಯ ಕೋಚ್‌ಗಳ ಹುದ್ದೆಯಲ್ಲಿರುವುದನ್ನು ನೋಡುವ ಅದಮ್ಯ ಆಸೆಯಿದೆ. ಸದ್ಯ ನಮ್ಮ ದೇಶದಲ್ಲಿರುವ ಕ್ರಿಕೆಟ್‌ ಮಾನವ ಸಂಪನ್ಮೂಲದ ಸರಿಯಾದ ಬಳಕೆಯು ಇಲ್ಲಿ ಕಾಣುತ್ತಿಲ್ಲ. ಬಹಳಷ್ಟು ಭಾರತೀಯರನ್ನು ಒಳಗೊಳ್ಳುವಂತಾಗಬೇಕು’ ಎಂದಿದ್ದಾರೆ.

ADVERTISEMENT

‘ಇಡೀ ಟೂರ್ನಿಯಲ್ಲಿ ಒಬ್ಬ ಭಾರತೀಯ ಮಾತ್ರ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ ತಂಡಗಳಲ್ಲಿ ವಿದೇಶಿ ಕೋಚ್‌ಗಳೇ ತುಂಬಿರುವುದು ವಿಪರ್ಯಾಸ.ಭವಿಷ್ಯದಲ್ಲಿ ಇದು ಬದಲಾಗಬಹುದು. ಭಾರತೀಯರ ಸಂಖ್ಯೆ ಹೆಚ್ಚಬಹುದು’ ಎಂದು ಕುಂಬ್ಳೆ ಆಶಯ ವ್ಯಕ್ತಪಡಿಸಿದರು.

ಆಗಸ್ಟ್‌ 20ಕ್ಕೆ ಯುಎಇಗೆ ತೆರಳಿರುವ ಪಂಜಾಬ್ ತಂಡವು ಅಭ್ಯಾಸ ನಡೆಸುತ್ತಿದೆ. ನಾಯಕ ಕೆ.ಎಲ್. ರಾಹುಲ್ ಸೇರಿದಂತೆ ತಂಡದಲ್ಲಿ ಕರ್ನಾಟಕದ ಐವರು ಆಟಗಾರರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.