ADVERTISEMENT

ಭಾರತದ ಬೌಲಿಂಗ್‌ ವೈವಿಧ್ಯದ ಕೊರತೆ ಕಳವಳಕಾರಿ: ಗ್ರೆಗ್‌ ಚಾಪೆಲ್‌ ವಿಶ್ಲೇಷಣೆ

ಪಿಟಿಐ
Published 30 ಜೂನ್ 2025, 16:26 IST
Last Updated 30 ಜೂನ್ 2025, 16:26 IST
<div class="paragraphs"><p> ಗ್ರೆಗ್‌ ಚಾಪೆಲ್‌</p><p></p></div>

ಗ್ರೆಗ್‌ ಚಾಪೆಲ್‌

   

ಲಂಡನ್: ಭಾರತದ ಬೌಲಿಂಗ್‌ನಲ್ಲಿ ವೈವಿಧ್ಯ ಇರದ ಕಾರಣ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ಸೋಲಿನ ದಂಡ ತೆರಬೇಕಾಯಿತು ಎಂದು ಆಸ್ಟ್ರೇಲಿಯಾದ ಬ್ಯಾಟಿಂಗ್ ದಿಗ್ಗಜ ಗ್ರೆಗ್‌ ಚಾಪೆಲ್‌ ಅಭಿಪ್ರಾಯಪಟ್ಟಿದ್ದಾರೆ. ಅರ್ಷದೀಪ್ ಮತ್ತು ಆಕಾಶ್‌ ದೀಪ್‌ ಅವರನ್ನು ಆಡುವ ಬಳಗದಲ್ಲಿ ಸೇರ್ಪಡೆಗೊಳಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ADVERTISEMENT

‘ಕುಲದೀಪ್ ಯಾದವ್ ಅವರು ಶೇನ್‌ ವಾರ್ನ್ ಅವರ ನಂತರ ಅತ್ಯುತ್ತಮ ರಿಸ್ಟ್‌ ಸ್ಪಿನ್ನರ್‌’ ಎಂದೂ ಚಾಪೆಲ್‌ ಹೇಳಿದ್ದಾರೆ.

ಭಾರತದ ಕಳಪೆ ಫೀಲ್ಡಿಂಗ್ ಕೂಡ ಸೋಲಿಗೆ ಕಾರಣವಾಗಿತ್ತು. ಆದರೆ ಇದನ್ನು ಚಾಪೆಲ್ ಪೂರ್ಣವಾಗಿ ಒಪ್ಪಲಿಲ್ಲ. ‘ಹೆಡಿಂಗ್ಲೆಯಲ್ಲಿ ಭಾರತದ ಫೀಲ್ಡಿಂಗ್‌ ನಿರಾಶಾದಾಯಕವಾಗಿತ್ತು. ಆದರೆ ಸೋಲಿಗೆ ಅದೇ ಪ್ರಮುಖ ಕಾರಣವಲ್ಲ. ಕೈಯಾರೆ ತಂದುಕೊಂಡ ತಪ್ಪುಗಳೂ ಇದ್ದವು. ಅದರಲ್ಲೂ ಅತಿ ದುಬಾರಿಯಾದ ತಪ್ಪು ಎಂದರೆ ಮೊದಲ ಇನಿಂಗ್ಸ್‌ನಲ್ಲಿ ಹ್ಯಾರಿ ಬ್ರೂಕ್‌ ಅವರಿಗೆ ನೋಬಾಲ್‌ ಮೂಲಕ ಜೀವದಾನ ನೀಡಿದ್ದು’ ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಅಂಕಣದಲ್ಲಿ ಅವರು ಬರೆದಿದ್ದಾರೆ.

‘ಭಾರತದ ಬೌಲಿಂಗ್‌ನಲ್ಲಿ ವೈವಿಧ್ಯ ಇರಲಿಲ್ಲ. ಬೂಮ್ರಾ ಅವರನ್ನು ಬಿಟ್ಟರೆ ಉಳಿದ ಬೌಲರ್‌ಗಳು– ಉಳಿದ ಬಲಗೈ ವೇಗಿಗಳಾದ ಮೊಹಮ್ಮದ್ ಸಿರಾಜ್‌, ಪ್ರಸಿದ್ಧ ಕೃಷ್ಣ ಮತ್ತು ಶಾರ್ದೂಲ್ ಠಾಕೂರ್‌– ಒಂದೇ ಆ್ಯಂಗಲ್‌ನಲ್ಲಿ ಬೌಲ್‌ ಮಾಡುತ್ತಿದ್ದರು’ ಎಂದು ಆಸ್ಟ್ರೇಲಿಯಾದ ಈ ಮಾಜಿ ನಾಯಕ ವಿಶ್ಲೇಷಿಸಿದ್ದಾರೆ.

ಶುಭಮನ್ ಗಿಲ್ ಅವರ ಬತ್ತಳಿಕೆಯಲ್ಲಿ ಈ ರೀತಿಯ ವೈವಿಧ್ಯಮಯ ಬೌಲಿಂಗ್ ಕಾಣಲಿಲ್ಲ ಎಂದು ಹೇಳಿದ್ದಾರೆ.

76 ವರ್ಷ ವಯಸ್ಸಿನ ಚಾಪೆಲ್‌ ಅವರು ಭಾರತ ತಂಡದ ಕೋಚ್‌ ಆಗಿಯೂ ಕೆಲಸ ಮಾಡಿದ್ದಾರೆ. ಅವರು ಬೌಲಿಂಗ್ ಸಮತೋಲನಕ್ಕಿಂತ ಬ್ಯಾಟಿಂಗ್‌ ಆಳ ಹೊಂದಿರಲು ಒತ್ತು ನೀಡಿದ ಭಾರತದ ಚಿಂತಕರ ಚಾವಡಿ ನಿರ್ಧಾರವನ್ನೂ ಅವರು ಟೀಕಿಸಿದ್ದಾರೆ. ಜಡೇಜಾ ಅವರು ಮೊದಲ ಟೆಸ್ಟ್‌ ಆಡಿದ ತಂಡದಲ್ಲಿ ಏಕೈಕ ಸ್ಪಿನ್ನರ್ ಆಗಿ ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.