ADVERTISEMENT

T20 World Cup: ನೇಪಾಳ ತಂಡ ಸೇರ್ಪಡೆ ಆಗಲಿರುವ ಲಾಮಿಚಾನೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2024, 14:40 IST
Last Updated 10 ಜೂನ್ 2024, 14:40 IST
<div class="paragraphs"><p>ಸಂದೀಪ್ ಲಾಮಿಚಾನೆ</p></div>

ಸಂದೀಪ್ ಲಾಮಿಚಾನೆ

   

ಕಿಂಗ್ಸ್‌ಟೌನ್ (ಸೇಂಟ್‌ ವಿನ್ಸೆಂಟ್‌): ಅಮೆರಿಕದ ವೀಸಾ ನಿರಾಕರಣೆಯ ಕಾರಣ ನೇಪಾಳ ತಂಡದ ಎರಡು ಲೀಗ್ ಪಂದ್ಯಗಳನ್ನು ಕಳೆದುಕೊಂಡಿದ್ದ ಪ್ರಮುಖ ಆಟಗಾರ ಸಂದೀಪ್‌ ಲಾಮಿಚಾನೆ ಅವರು ಕೆರೀಬಿಯನ್‌ ಲೆಗ್‌ನ ಕೊನೆಯ ಎರಡು ಪಂದ್ಯಗಳಿಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಆ ದೇಶದ ಕ್ರಿಕೆಟ್‌ ಸಂಸ್ಥೆ ಸೋಮವಾರ ತಿಳಿಸಿದೆ.

23 ವರ್ಷದ ಲಾಮಿಚಾನೆ ಅವರು ನೇಪಾಳ ಪ್ರಕಟಿಸಿದ್ದ 15 ಸದಸ್ಯರ ಮೂಲ ತಂಡದಲ್ಲಿ ಸ್ಥಾನ ಪಡೆದಿದ್ದರು. ಅತ್ಯಾಚಾರ ಪ್ರಕರಣದಲ್ಲಿ ಎಂಟು ವರ್ಷ್ಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಅವರು ನಂತರ ಸಾಕ್ಷ್ಯಗಳ ಕೊರತೆಯಿಂದಾಗಿ ಕಠ್ಮಂಡು ಕೋರ್ಟ್‌ನಿಂದ ಖುಲಾಸೆಗೊಂಡಿದ್ದರು.

ADVERTISEMENT

ನೇಪಾಳ ಸರ್ಕಾರ ಎರಡು ಬಾರಿ ಮಧ್ಯಪ್ರವೇಶ ಮಾಡಿದರೂ ಅಮೆರಿಕ ಅವರಿಗೆ ವೀಸಾ ನಿರಾಕರಿಸಿತ್ತು. ಹೀಗಾಗಿ ಆ ದೇಶದಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಅವರು ಆಡಲು ಆಗಿರಲಿಲ್ಲ. ತಂಡವನ್ನು ಸೇರುವುದಾಗಿ ಸ್ವತಃ ಲಾಮಿಚಾನೆ ಅವರೂ ‘ಎಕ್ಸ್‌’ನಲ್ಲಿ ಪೋಸ್ಟ್ ಹಾಕಿದ್ದಾರೆ. ಲಾಮಿಚಾನೆ ಸೇರ್ಪಡೆಗೆ ಐಸಿಸಿ ಸಹ ಒಪ್ಪಿಗೆ ಸೂಚಿಸಿದೆ.

ನೇಪಾಳವು ಜೂನ್ 14ರಂದು ದಕ್ಷಿಣ ಆಫ್ರಿಕಾ ವಿರುದ್ಧ, 16ರಂದು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಎರಡೂ ಪಂದ್ಯಗಳು ಸೇಂಟ್‌ ವಿನ್ಸೆಂಟ್‌ನಲ್ಲಿ ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.