ADVERTISEMENT

ವಿಂಡೀಸ್‌ಗೆ ಸ್ಕಾಟ್ಲೆಂಡ್ ಸವಾಲು: ಕೊನೆಗಳಿಗೆಯಲ್ಲಿ ಅವಕಾಶ ಪಡೆದ ಯುರೋಪಿನ ತಂಡ

ಬಾಂಗ್ಲಾ ಬದಲು ಕೊನೆಗಳಿಗೆಯಲ್ಲಿ ಅವಕಾಶ ಪಡೆದ ಯುರೋಪಿನ ತಂಡ

ಪಿಟಿಐ
Published 6 ಫೆಬ್ರುವರಿ 2026, 15:43 IST
Last Updated 6 ಫೆಬ್ರುವರಿ 2026, 15:43 IST
<div class="paragraphs"><p>ಟಿ20 ವಿಶ್ವಕಪ್ ಟ್ರೋಫಿ</p></div>

ಟಿ20 ವಿಶ್ವಕಪ್ ಟ್ರೋಫಿ

   

ಚಿತ್ರ: ಐಸಿಸಿ

ಕೋಲ್ಕತ್ತ: ಕೊನೆಯ ಗಳಿಗೆಯಲ್ಲಿ ಆಡುವ ಅವಕಾಶ ಪಡೆದಿರುವ ಸ್ಕಾಟ್ಲೆಂಟ್ ತಂಡ, ಈಡನ್‌ಗಾರ್ಡನ್‌ನಲ್ಲಿ ಶನಿವಾರ ನಡೆಯುವ ಟಿ20 ವಿಶ್ವಕಪ್ ‘ಸಿ’ ಗುಂಪಿನ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ವೆಸ್ಟ್‌ ಇಂಡೀಸ್ ತಂಡವನ್ನು ಎದುರಿಸಲಿದೆ.

ADVERTISEMENT

ಭದ್ರತೆಯ ಕಳವಳ ವ್ಯಕ್ತಪಡಿಸಿ ಭಾರತದಲ್ಲಿ ಆಡಲು ನಿರಾಕರಿಸಿದ ಬಾಂಗ್ಲಾದೇಶ ತಂಡವನ್ನು ಐಸಿಸಿ ಹೊರಗಟ್ಟಿತ್ತು. ಕೇವಲ ಎರಡು ವಾರ ಇರುವಾಗ, ರ‍್ಯಾಂಕಿಂಗ್ ಆಧಾರದಲ್ಲಿ ಸ್ಕಾಟ್ಲೆಂಡ್ ಅವಕಾಶ ಗಿಟ್ಟಿಸಿದೆ.

‌ಈ ಅನಿರೀಕ್ಷಿತ ಅವಕಾಶದಲ್ಲಿ ಪ್ರಬಲ ಎದುರಾಳಿ ತಂಡದ ಎದುರು ಉತ್ತಮ ಪ್ರದರ್ಶನ ತೋರಿ ಸಾಮರ್ಥ್ಯ ಪ್ರದರ್ಶಿಸುವ ಅವಕಾಶ ಸ್ಕಾಟ್ಲೆಂಡ್‌ಗೆ ಇದೆ. 

‘ಬಾಂಗ್ಲಾದೇಶ ಆಟಗಾರರ ಬಗ್ಗೆ ಮರುಕವಿದೆ. ಆದರೆ ನಾವು ಇಲ್ಲಿ ಸಲ್ಲುವವರು ಎಂಬ ದೊಡ್ಡ ನಂಬಿಕೆ ನಮಗಿದೆ’ ಎಂದು ಎಡಗೈ ಸ್ಪಿನ್ನರ್ ಮಾರ್ಕ್ ವಾಟ್ ಹೇಳಿದ್ದಾರೆ. ಅವರು 77 ಟಿ20 ಮತ್ತು 82 ಏಕದಿನ ಪಂದ್ಯಗಳ ಅನುಭವಿ.

ಸ್ಕಾಟ್ಲೆಂಡ್‌ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್‌ನಲ್ಲಿ ಯುರೋಪಿನ ಈ ತಂಡ, ವೆಸ್ಟ್‌ ಇಂಡೀಸ್ ತಂಡಕ್ಕೆ 42 ರನ್‌ಗಳಿಂದ ಹೊಡೆತ ನೀಡಿತ್ತು. 2023ರ ಏಕದಿನ ವಿಶ್ವಕಪ್ ಅರ್ಹತಾ ಪಂದ್ಯದಲ್ಲೂ ವೆಸ್ಟ್ ಇಂಡೀಸ್‌ಗೆ ಏಳು ವಿಕೆಟ್‌ಗಳ ಆಘಾತ ನೀಡಿತ್ತು. ಇದು ತಂಡದ ವಿಶ್ವಾಸಕ್ಕೆ ಕಾರಣವಾಗಿದೆ.

ನ್ಯೂಜಿಲೆಂಡ್ ಮೂಲದ ಬ್ಯಾಟರ್ ಟಾಮ್ ಬ್ರೂಸ್‌, ಅಫ್ಗಾನಿಸ್ತಾನ ಸಂಜಾತ ವೇಗದ ಬೌಲರ್ ಜೈನುಲ್ಲಾ ಖಾನ್‌, ಆಕ್ರಮಣಕಾರಿ ಆಟಗಾರ ಬ್ರಂಡನ್ ಮೆಕ್‌ಮುಲೆನ್ ಅವರು ವಾಟ್ ಜೊತೆ ಸ್ಕಾಟ್ಲೆಂಡ್ ತಂಡದ ಅನುಭವಿಗಳಾಗಿದ್ದಾರೆ.

ಇದೇ ಕ್ರೀಡಾಂಗಣದಲ್ಲಿ ಹತ್ತು ವರ್ಷಗಳ ಹಿಂದೆ ಕೊನೆಯ ಬಾರಿ ವಿಶ್ವಕಪ್ ವಿಜೇತರಾದ ವೆಸ್ಟ್‌ ಇಂಡೀಸ್‌ ಅಸ್ಥಿರ ಪ್ರದರ್ಶನಕ್ಕೆ ಹೆಸರಾದರೂ, ಅಮೋಘ ಆಟವಾಡುವ ಸಾಮರ್ಥ್ಯ ಹೊಂದಿದೆ.

ಶರ್ಫೇನ್ ರುದರ್‌ಫೋರ್ಡ್ ಮತ್ತು ಶಾಯ್ ಹೋಪ್ (276) ಅವರು ಒಳ್ಳೆಯ ಲಯದಲ್ಲಿರುವ ಬ್ಯಾಟರ್‌ಗಳು. ಶಮರ್ ಜೋಸೆಫ್ ಮತ್ತು ಅಖೀಲ್ ಹುಸೇನ್ ಅವರು ವೇಗದ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.

ಪಂದ್ಯ ಆರಂಭ: ಮಧ್ಯಾಹ್ನ 3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.