ADVERTISEMENT

ಟಿ20 ವಿಶ್ವಕಪ್‌ನಲ್ಲಿ ರೋಹಿತ್, ಕೊಹ್ಲಿ ಇರಲಿ: ಕ್ಲೈವ್ ಲಾಯ್ಡ್‌

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 20:11 IST
Last Updated 12 ಜನವರಿ 2024, 20:11 IST
<div class="paragraphs"><p>ಕ್ಲೈವ್ ಲಾಯ್ಡ್‌</p></div>

ಕ್ಲೈವ್ ಲಾಯ್ಡ್‌

   

ಸತ್ಗಾಚಿಯಾ (ಪಶ್ಚಿಮ ಬಂಗಾಳ): ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗೆ ಅವಕಾಶ ನೀಡಬೇಕು ಎಂದು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ದಿಗ್ಗಜ ಕ್ಲೈವ್ ಲಾಯ್ಡ್‌  ಪ್ರತಿಪಾದಿಸಿದ್ದಾರೆ. 

ಈ ಇಬ್ಬರು ಆಟಗಾರರ ಅನುಭವ ತಂಡಕ್ಕೆ ಅಗತ್ಯವಿದ್ದು, ಕೇವಲ ಯುವ ಆಟಗಾರರಿಂದ ತುಂಬುವುದು ವಿವೇಕಯುತವಲ್ಲ ಎಂದು ಹೇಳಿದ್ದಾರೆ.

ADVERTISEMENT

‘ನೀವು ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಲು ಬಯಸುತ್ತೀರಿ. ತಂಡವನ್ನು ಯುವ ಆಟಗಾರರಿಂದ ತುಂಬಲು ಸಾಧ್ಯವಿಲ್ಲ.  ಅನುಭವಿಗಳು ಬೇಕು’ ಎಂದು ತಂಡದ ಮಾಜಿ ನಾಯಕರೂ ಆಗಿರುವ ಲಾಯ್ಡ್‌  ಮಾಧ್ಯಮ ಸಂವಾದದಲ್ಲಿ ಹೇಳಿದರು.

ಸತ್ಗಾಚಿಯಾ ಹೈಸ್ಕೂಲ್‌ನ 75ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದರು.  

‘ಕೊಹ್ಲಿ ಈಗಲೂ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ನಾಯಕನಾಗಿ ರೋಹಿತ್ ಉತ್ತಮವಾಗಿದ್ದಾರೆ. ಆದ್ದರಿಂದ ನೀವು  ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಿ. ಕೆಲವು ಯುವ ಆಟಗಾರರು ಸಹ ಇದ್ದಾರೆ. ಅವರು ಹಿರಿಯ ಆಟಗಾರರನ್ನು ಬದಿಗೆ ಸರಿಸುತ್ತಿದ್ದಾರೆ. ಆದರೆ, ನೀವು ಬಹಳ ಅಸಾಧಾರಣ ತಂಡವನ್ನು ಹೊಂದಿದ್ದೀರಿ ಎಂದು ನನಗೆ ಖಾತರಿಯಿದೆ’ ಎಂದರು. 

ನೆಚ್ಚಿನ ಟೀಮ್ ಇಂಡಿಯಾ ಬ್ಯಾಟರ್‌ಗಳ ಬಗ್ಗೆ ಮಾತನಾಡಿದ ಲಾಯ್ಡ್, ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಉತ್ತಮ ಆಟಗಾರರು ಎಂದರು.

ಆಯ್ಕೆ ಸಮಿತಿ ಸದಸ್ಯರು ಇತ್ತೀಚೆಗೆ ಅಫ್ಗಾನಿಸ್ತಾನ ವಿರುದ್ಧ ನಡೆಯುತ್ತಿರುವ ಟಿ20 ಸರಣಿಗೆ ರೋಹಿತ್‌, ವಿರಾಟ್‌ ಅವರನ್ನು ಆಯ್ಕೆ ಮಾಡಿದ್ದಾರೆ. ಭಾರತದ ಐಸಿಸಿ ಟ್ರೋಫಿಯ ಬರವನ್ನು ಪರಿಗಣಿಸಿ ಇವರಿಬ್ಬರು ಆಡಬೇಕೇ ಅಥವಾ ಯುವ ಆಟಗಾರರಿಗೆ ದಾರಿ ಮಾಡಿಕೊಡಬೇಕೇ ಎಂಬ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.  

ಉತ್ತಮ ಸಂಭಾವನೆ ನೀಡಿ: ವೆಸ್ಟ್ ಇಂಡೀಸ್ ಕ್ರಿಕೆಟ್ ಅವನತಿಗೆ ಟಿ20 ಫ್ರ್ಯಾಂಚೈಸಿ ಲೀಗ್‌ಗಳ ಆಗಮನವನ್ನು ದೂಷಿಸಿದ ಲಾಯ್ಡ್, ಟೆಸ್ಟ್ ಕ್ರಿಕೆಟಿಗರಿಗೂ ಉತ್ತಮ ಸಂಭಾವನೆ ನೀಡಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.