ಕ್ರಿಕೆಟ್
(ಸಾಂಕೇತಿಕ ಚಿತ್ರ)
ಬೆಕೆನ್‌ಹ್ಯಾಮ್: ‘ಬ್ರಿಟನ್ ಸಮಾಜದಿಂದ, ವಿಶೇಷವಾಗಿ ಕ್ರೀಡೆಯಿಂದ ಜನಾಂಗೀಯ ತಾರತಮ್ಯ ಬೇರುಸಹಿತ ಕಿತ್ತುಹಾಕಲು ಸಾಕಷ್ಟು ದೂರ ಸಾಗಬೇಕಾಗಿದೆ’ ಎಂದು ಇಂಗ್ಲೆಂಡ್ ತಂಡದ ಮಾಜಿ ಆಟಗಾರ ರೋಲಂಡ್ ಬುಚರ್ ಹೇಳಿದ್ದಾರೆ. ಅವರು 45 ವರ್ಷಗಳ ಹಿಂದೆ ಇಂಗ್ಲೆಂಡ್ ತಂಡಕ್ಕೆ ಆಡಿದ ಮೊದಲ ಕಪ್ಪುವರ್ಣೀಯ ಆಟಗಾರ ಎನಿಸಿದ್ದರು.
ಬಾರ್ಬಾಡೋಸ್ ಸಂಜಾತರಾದ ಬುಚರ್ ನಂತರ ಇಂಗ್ಲೆಂಡ್ ಪೌರತ್ವ ಪಡೆದು ಆ ದೇಶಕ್ಕೆ ಆಡಿದ್ದರು. ಆದರೆ ಈಗಲೂ ಎರಡೂ ದೇಶಗಳ ನಡುವೆ ಓಡಾಡುತ್ತಿರುತ್ತಾರೆ.
ಅವರು ತಮ್ಮ ಆತ್ಮಕಥನ ‘ಬ್ರೇಕಿಂಗ್ ಬ್ಯಾರಿಯರ್ಸ್: ಬಾರ್ಬಾಡೋಸ್ ಟು ಇಂಗ್ಲೆಂಡ್ ಅಂಡ್ ಬ್ಯಾಕ್’ ಮೂಲಕ ‘ಸಾಮಾಜಿಕ ಒಳಗೊಳ್ಳುವಿಕೆ’ಯ ಸಂದೇಶ ಸಾರಲು ಇಂಗ್ಲೆಂಡ್‌ನಲ್ಲಿದ್ದಾರೆ.
ಬ್ಯಾಟರ್ ಆಗಿದ್ದ 71 ವರ್ಷ ವಯಸ್ಸಿನ ಬುಚರ್ ಅವರು ಇಂಗ್ಲೆಂಡ್ ಪರ ಮೂರು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ತಮ್ಮ ಕ್ರಿಕೆಟ್ ಜೀವನದ ಆರಂಭದ ದಿನಗಳನ್ನು ಅವರು ಪಿಟಿಐ ಜೊತೆಗಿನ ಸಂದರ್ಶನದಲ್ಲಿ ಮೆಲುಕು ಹಾಕಿದರು.
ದಕ್ಷಿಣ ಆಫ್ರಿಕಾದಲ್ಲಿ ಜನಾಂಗೀಯ ತಾರತಮ್ಯ ಪಾಲನೆಯಾಗುತ್ತಿದ್ದ ದಿನಗಳಲ್ಲಿ ಆ ದೇಶಕ್ಕೆ (1989) ಪ್ರವಾಸ ಹೊರಟಿದ್ದ ಬಂಡುಕೋರ ಆಟಗಾರರ ಇಂಗ್ಲೆಂಡ್ ತಂಡದಿಂದ ಅವರು ಕೊನೆಗಳಿಗೆಯಲ್ಲಿ ಹಿಂದೆಸರಿದಿದ್ದರು.
‘ನಾನು ವಾಸ್ತವವಾದಿ. ಇವೆಲ್ಲಾ (ಜನಾಂಗೀಯ ಭೇದ) ಬೇಗ ನಿರ್ಮೂಲನೆಯಾಗುತ್ತದೆ ಎಂದು ನನಗೇನೂ ಅನಿಸುವುದಿಲ್ಲ’ ಎಂದರು. 13ನೇ ವಯಸ್ಸಿನಲ್ಲಿ ಅವರು ಬಾರ್ಬಾಡೋಸ್‌ನಿಂದ ಇಂಗ್ಲೆಂಡ್‌ಗೆ ವಲಸೆ ಹೋಗಿದ್ದರು.
ಅವರು 1974 ರಿಂದ 1990ರವರೆಗೆ ಮಿಡ್ಲ್‌ಸೆಕ್ಸ್ ತಂಡವನ್ನು ಕೌಂಟಿಯಲ್ಲಿ ಪ್ರತಿನಿಧಿಸಿದ್ದರು. ಅವರಿಗೂ ಜನಾಂಗೀಯ ತಾರತಮ್ಯದ ಅನುಭವವಾಗಿತ್ತು. ‘ಆದರೆ ಬೇರೆ ಕೆಲವು ಕಪ್ಪು ಆಟಗಾರರಿಗೆ ಆದಷ್ಟು ಕಹಿ ಅನುಭವ ನನಗೆ ಆಗಲಿಲ್ಲ. ಸುಲಭವಾಗಿ ವಿಚಲಿತಗೊಳ್ಳದ ಸ್ವಭಾವ ನನ್ನದಾಗಿತ್ತು. ಏನಾದರೂ ಸಾಧನೆ ಮಾಡಬೇಕೆಂಬ ದೃಢನಿರ್ಧಾರ ನನ್ನಲ್ಲಿತ್ತು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.