ಲಖನೌ : ‘ಟಿಕ್ ದಿ ನೋಟ್‌ಬುಕ್’ ಸಂಭ್ರಮವನ್ನು ಪ್ರಚೋದನಕಾರಿ ರೀತಿ ಆಚರಿಸಿದ ಲಖನೌ ಸೂಪರ್ ಜೈಂಟ್ಸ್ ಲೆಗ್ ಸ್ಪಿನ್ನರ್ ದಿಗ್ವೇಶ್ ರಾಥಿ ಅವರನ್ನು ಒಂದು ಪಂದ್ಯಕ್ಕೆ ಅಮಾನತು ಮಾಡಲಾಗಿದೆ. ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮಿಂಚಿನ ಅರ್ಧ ಶತಕ ಬಾರಿಸಿದ ಸನ್‌ರೈಸರ್ಸ್ ಆರಂಭ ಆಟಗಾರ ಅಭಿಷೇಕ್ ಶರ್ಮಾ ಅವರ ವಿಕೆಟ್ ಪಡೆದು ರಾಠಿ ಈ ಸಂಭ್ರಮ ಆಚರಿಸಿದ್ದರು.
ಇದೇ ವರ್ತನೆಗೆ ರಾಠಿ ಅವರಿಗೆ ವಾಗ್ದಂಡನೆ ವಿಧಿಸಲಾಗಿದೆ. ಜೊತೆಗೆ ಪಂದ್ಯ ಸಂಭಾವನೆಯ ಶೇ 25ರಷ್ಟು ದಂಡ ವಿಧಿಸಲಾಗಿದ್ದು, ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಸಹ ಸೇರ್ಪಡೆ ಮಾಡಲಾಗಿದೆ.
25 ವರ್ಷ ವಯಸ್ಸಿನ ರಾಠಿ ಐಪಿಎಲ್ ಶಿಸ್ತುಸಂಹಿತೆ ಉಲ್ಲಂಘನೆ ಮಾಡುತ್ತಿರುವುದು ಮೂರನೇ ಸಲ. ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಐದನೇ ಡಿಮೆರಿಟ್ ಪಾಯಿಂಟ್ ಶೇಖರವಾದ ಕಾರಣ ಅವರು ಗುಜರಾತ್ ಟೈಟನ್ಸ್ ವಿರುದ್ಧ ನಡೆಯುವ ಲಖನೌದ ಮುಂದಿನ ಪಂದ್ಯಕ್ಕೆ ಅವರು ಅಲಭ್ಯರಾಗಿದ್ದಾರೆ ಎಂದು ಐಪಿಎಲ್ ಪ್ರಕಟಣೆ ತಿಳಿಸಿದೆ.
ಈ ಋತುವಿನಲ್ಲಿ ನಿರಾಶೆ ಅನುಭವಿಸಿದ್ದ ಲಖನೌ ತಂಡಕ್ಕೆ ಅವರು ಏಕೈಕ ಬೆಳ್ಳಿರೇಖೆಯಾಗಿ ಕಂಡಿದ್ದರು. ಅವರು 12 ಪಂದ್ಯಗಳಿಂದ 8.18 ಇಕಾನಮಿ ದರದಲ್ಲಿ 14 ವಿಕೆೆಟ್ ಪಡೆದಿದ್ದರು.
ಅವರ ನೋಟ್‌ಬುಕ್ ಸಂಭ್ರಮ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆದರೆ ಮ್ಯಾಚ್ ರೆಫ್ರಿಗಳು ಇದನ್ನು ಲಘುವಾಗಿ ಪರಿಗಣಿಸಿಲ್ಲ. ಸೋಮವಾರ ಅಭಿಷೇಕ್ ಕ್ಯಾಚ್ ಅನ್ನು ಶಾರ್ದೂಲ್ ಹಿಡಿದ ತಕ್ಷಣ ಕೈಯಿಂದ ಪೆವಿಲಿಯನ್‌ಗೆ ಹೋಗು ಎನ್ನುವಂತೆ ಸೂಚಿಸಿದ ದಿಗ್ವೇಶ್ ಏನೊ ಹೇಳಿದ್ದು, ಅಭಿಷೇಕ್ ಅವರನ್ನು ಕೆರಳಿಸಿತು. ಹಿಂದಕ್ಕೆ ಬಂದ ಅವರು ರಾಠೀ ಅವರತ್ತ ಗುರಾಯಿಸಿ ನೋಡಿದರು. ಅಂಪೈರ್ ಇಬ್ಬರನ್ನೂ ದೂರ ಮಾಡಿದರು.
ಸೋಮವಾರ ಪಂದ್ಯ ಸೋತ ಎಲ್‌ಎಸ್‌ಜಿ ಪ್ಲೇಆಫ್‌ಗೇರುವ ಕ್ಷೀಣ ಅವಕಾಶ ಕಳೆದುಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.