ADVERTISEMENT

ಮಹಾರಾಜ ಟ್ರೋಫಿ: ಲಯಕ್ಕೆ ಮರಳಿದ ಪಡಿಕ್ಕಲ್‌, ಗುಲ್ಬರ್ಗಾ ಮಿಸ್ಟಿಕ್ಸ್‌ಗೆ ಜಯ

ರೋಹನ್ ಸಮಯೋಚಿತ ಆಟ

ಮೋಹನ್ ಕುಮಾರ ಸಿ.
Published 13 ಆಗಸ್ಟ್ 2022, 5:41 IST
Last Updated 13 ಆಗಸ್ಟ್ 2022, 5:41 IST
ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಸಿಕ್ಸರ್‌ ಸಿಡಿಸಿದ ಗುಲ್ಬರ್ಗಾ ಮಿಸ್ಟಿಕ್ಸ್‌ನ ದೇವದತ್‌ ಪಡಿಕ್ಕಲ್‌ –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಸಿಕ್ಸರ್‌ ಸಿಡಿಸಿದ ಗುಲ್ಬರ್ಗಾ ಮಿಸ್ಟಿಕ್ಸ್‌ನ ದೇವದತ್‌ ಪಡಿಕ್ಕಲ್‌ –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.   

ಮೈಸೂರು: ಲಯದ ಆಟಕ್ಕೆ ಮರಳಿದ ದೇವದತ್ತ ಪಡಿಕ್ಕಲ್‌ ಗಳಿಸಿದ ಅರ್ಧಶತಕದ ಬಲದಿಂದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವು ಇಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಜಯ ಸಾಧಿಸಿತು.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗುಲ್ಬರ್ಗಾ ತಂಡವು ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ 9 ವಿಕೆಟ್‌ಗಳಿಂದ ಗೆದ್ದಿತು.

ಟಾಸ್‌ ಗೆದ್ದ ಗುಲ್ಬರ್ಗಾ ನಾಯಕ ಮನೀಷ್‌ ಪಾಂಡೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಹುಬ್ಬಳ್ಳಿ ತಂಡವು ಆರಂಭಿಕ ಬ್ಯಾಟರ್‌ ಲವ್‌ನಿತ್‌ ಸಿಸೊಡಿಯಾ (30 ರನ್‌), ಕೆಳಕ್ರಮಾಂಕದ ತುಷಾರ್‌ ಸಿಂಗ್ (42) ಹಾಗೂ ಎಂ.ಜಿ.ನವೀನ್‌ (24) ಅವರ ಚುರುಕಿನ ಬ್ಯಾಟಿಂಗ್‌ನಿಂದಾಗಿ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 145 ರನ್‌ ಗಳಿಸಿತು.

ADVERTISEMENT

ಸಾಧಾರಣ ಗುರಿ ಬೆನ್ನಟ್ಟಿದ ಗುಲ್ಪರ್ಗಾ ತಂಡದ ಆರಂಭಿಕ ಜೋಡಿ ದೇವದತ್ತ ಪಡಿಕ್ಕಲ್‌ (62; 47ಎ, 4x8, 6x2), ರೋಹನ್‌ ಪಾಟೀಲ (ಅಜೇಯ 60; 40ಎ, 4x5, 6x2) ಮೊದಲ ವಿಕೆಟ್‌ಗೆ 91 ರನ್‌ ಸೇರಿಸಿದರು. ಅವರ ಆಟಕ್ಕೆ ಪ್ರೇಕ್ಷಕರ ಮೆಚ್ಚುಗೆ ಚಪ್ಪಾಳೆಗಳ ಸದ್ದು ಪ್ರತಿಧ್ವನಿಸಿತು.

ಮೈಸೂರು ವಾರಿಯರ್ಸ್‌ ವಿರುದ್ಧದ ಪಂದ್ಯದಲ್ಲಿ ವೇಗದ ಶತಕ ಸಿಡಿಸಿ ದಾಖಲೆ ಬರೆದಿದ್ದ ರೋಹನ್‌ ಇಂದು ತಾಳ್ಮೆಯ ಆಟವಾಡಿ ಅನುಭವಿ ಬ್ಯಾಟರ್ ಎಂಬುದನ್ನು ಸಾಬೀತು ಮಾಡಿದರು. ಜಸ್ವಂತ್ ಆಚಾರ್ಯ (ಅಜೇಯ 17) ಜೊತೆಗೂಡಿ ಇನಿಂಗ್ಸ್‌ ಕಟ್ಟಿದ ಅವರು 16.4 ಓವರ್‌ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿದರು.

ಮಯಂಕ್‌ ಶತಕ: ಅನುಭವಿ ಆಟಗಾರ ಮಯಂಕ್‌ ಅಗರ್‌ವಾಲ್‌ರ ಸ್ಪೋಟಕ ಶತಕ (102 ರನ್; 49ಎ, 4x10, 6x6 ) ನೆರವಿನಿಂದ ದಿನದ ಎರಡನೇ ಪಂದ್ಯದಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್‌ 9 ವಿಕೆಟ್‌ಗಳಿಂದ ಶಿವಮೊಗ್ಗ ಸ್ಟ್ರೈಕರ್ಸ್ ತಂಡವನ್ನು ಮಣಿಸಿತು.

ಸಂಕ್ಷಿಪ್ತ ಸ್ಕೋರ್‌: ಹುಬ್ಬಳ್ಳಿ ಟೈಗರ್ಸ್‌ 20 ಓವರ್‌ಗಳಲ್ಲಿ 8ಕ್ಕೆ 145 (ತುಷಾರ್‌ ಸಿಂಗ್‌ 42, ಲವ್‌ನಿತ್‌ ಸಿಸೊಡಿಯಾ 30. ಮನೋಜ್‌ ಭಾಂಡಗೆ 19ಕ್ಕೆ 2) ಗುಲ್ಬರ್ಗಾ ಮಿಸ್ಟಿಕ್ಸ್‌ 16.4 ಓವರ್‌ಗಳಲ್ಲಿ 1ಕ್ಕೆ 146 (ದೇವದತ್ತ ಪಡಿಕ್ಕಲ್‌ 62,ರೋಹನ್‌ ಪಾಟೀಲ ಅಜೇಯ 60. ಅಭಿಮನ್ಯು ಮಿಥುನ್ 26ಕ್ಕೆ 1)ಫಲಿತಾಂಶ: ಗುಲ್ಪರ್ಗಾ ಮಿಸ್ಟಿಕ್ಸ್‌ಗೆ 9 ವಿಕೆಟ್‌ ಜಯ

ಇಂದಿನ ಪಂದ್ಯಗಳು: ಹುಬ್ಬಳ್ಳಿ ಟೈಗರ್ಸ್– ಶಿವಮೊಗ್ಗ ಸ್ಟ್ರೈಕರ್ಸ್ (ಮಧ್ಯಾಹ್ನ 3ರಿಂದ), ಮೈಸೂರು ವಾರಿಯರ್ಸ್– ಬೆಂಗಳೂರು ಬ್ಲಾಸ್ಟರ್ಸ್‌ (ರಾತ್ರಿ 7ರಿಂದ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.