ADVERTISEMENT

ಮಹಾರಾಜ ಟ್ರೋಫಿ ಕ್ರಿಕೆಟ್: ಹುಬ್ಬಳ್ಳಿ ಮುಡಿಗೆ ಮಹಾರಾಜ ಟ್ರೋಫಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2023, 4:15 IST
Last Updated 30 ಆಗಸ್ಟ್ 2023, 4:15 IST
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಗೆದ್ದ ಪ್ರಶಸ್ತಿ ಗಳಿಸಿದ ಹುಬ್ಬಳ್ಳಿ ಟೈಗರ್ಸ್‌ ಆಟಗಾರರ ಸಂಭ್ರಮ 
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಗೆದ್ದ ಪ್ರಶಸ್ತಿ ಗಳಿಸಿದ ಹುಬ್ಬಳ್ಳಿ ಟೈಗರ್ಸ್‌ ಆಟಗಾರರ ಸಂಭ್ರಮ     –ಪ್ರಜಾವಾಣಿ ಚಿತ್ರ/ಪುಷ್ಕರ್ ವಿ.

ಬೆಂಗಳೂರು: ಮನೀಷ್ ಪಾಂಡೆ ಚುರುಕಾದ ಫೀಲ್ಡಿಂಗ್ ಮತ್ತು ಅರ್ಧಶತಕದ ಹುಬ್ಬಳ್ಳಿ ಟೈಗರ್ಸ್ ತಂಡವು ಮಹಾರಾಜ ಟ್ರೋಫಿ ಗೆದ್ದುಕೊಂಡಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಫೈನಲ್‌ ಕೊನೆಯ ಓವರ್‌ನವರೆಗೂ ಕುತೂಹಲ ಕೆರಳಿಸಿತ್ತು. 204 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಮೈಸೂರು ತಂಡಕ್ಕೆ ಕೊನೆಯ ಓವರ್‌ನಲ್ಲಿ 12 ರನ್‌ಗಳ ಅಗತ್ಯವಿತ್ತು.

ಮನ್ವಂತ್ ಕುಮಾರ್ ಬೌಲಿಂಗ್ ಮಾಡಿದ ಈ ಓವರ್‌ನ ಮೂರನೇ ಎಸೆತವನ್ನು ಸಿಕ್ಸರ್‌ಗೆತ್ತುವ ಮೈಸೂರಿನ ಜೆ. ಸುಚಿತ್ ಪ್ರಯತ್ನಕ್ಕೆ ಮನೀಷ್ ಪಾಂಡೆ ಅಡ್ಡಿಯಾದರು.  ಲಾಂಗ್ ಆಫ್‌ ಬೌಂಡರಿಲೈನ್‌ನಲ್ಲಿದ್ದ ಪಾಂಡೆ ತೋರಿದ ಸಾಹಸಕ್ಕೆ ಚೆಂಡು ಗೆರೆ ದಾಟಲಿಲ್ಲ.  ಕೇವಲ ಒಂದು ರನ್‌ ಮಾತ್ರ ಮೈಸೂರಿಗೆ ಲಭಿಸಿತು.  ಐದನೇ ಎಸೆತದಲ್ಲಿ ಮನ್ವಂತ್ ಬೌಲಿಂಗ್‌ನಲ್ಲಿ ಸುಚಿತ್ ಔಟಾದರು. ಇದರೊಂದಿಗೆ ಜಯದ ಅವಕಾಶ ಕೈತಪ್ಪಿತು.

ADVERTISEMENT

ಅಜೇಯ ಅರ್ಧಶತಕ (50; 23ಎ, 4X3, 6X4) ತಂಡವು ದೊಡ್ಡ ಮೊತ್ತ ಗಳಿಸಲು ಪಾಂಡೆ ಕಾರಣರಾದರು. ಹುಬ್ಬಳ್ಳಿ ತಂಡದ ಆರಂಭಿಕ ಬ್ಯಾಟರ್‌ ಮೊಹಮ್ಮದ್ ತಾಹ (72; 40ಎ, 4X7, 6X4) ಸೊಗಸಾದ ಅರ್ಧಶತಕ ಗಳಿಸಿದರು. ಇದರಿಂದಾಗಿ ಆರಂಭದಲ್ಲಿ ಆಘಾತ ಅನುಭವಿಸಿದ್ದ ಹುಬ್ಬಳ್ಳಿ ಚೇತರಿಸಿಕೊಂಡಿತು. ಶ್ರೀಜಿತ್ ಕೂಡ (38 ರನ್) ಉತ್ತಮ ಕಾಣಿಕೆ ನೀಡಿದರು.

ಗುರಿ ಬೆನ್ನಟ್ಟಿದ ಮೈಸೂರು ತಂಡಕ್ಕೆ ಸಮರ್ಥ್ (63; 35ಎ) ಮತ್ತು ಕಾರ್ತಿಕ್ (38; 18ಎ) ಉತ್ತಮ ಆರಂಭ ನೀಡಿದರು. ಕೇವಲ ಐದು ಓವರ್‌ಗಳಲ್ಲಿ 56 ರನ್‌ ಗಳಿಸಿದರು.  ಆರನೇ ಓವರ್‌ನಲ್ಲಿ ಈ ಜೊತೆಯಾಟ ಮುರಿದುಬಿದ್ದ ನಂತರ ಕ್ರೀಸ್‌ಗೆ ಬಂದ ಕರುಣ್ (37; 20ಎ) ಕೂಡ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಆದರೆ ಉಳಿದ ಬ್ಯಾಟರ್‌ಗಳು ಹೆಚ್ಚು ರನ್‌ ಗಳಿಸದಂತೆ ಮನ್ವಂತ್ ಕುಮಾರ್, ವಿದ್ವತ್, ಕೆ.ಸಿ ಕಾರ್ಯಪ್ಪ ನೋಡಿಕೊಂಡರು.

ಅಭಿಮಾನಿಗಳ ದಂಡು: ಟೂರ್ನಿಯ ಬಹುತೇಕ ಪಂದ್ಯಗಳಲ್ಲಿ ಖಾಲಿ ಇದ್ದ ಕ್ರೀಡಾಂಗಣದ ಗ್ಯಾಲರಿಗಳಿಗೆ ಮಂಗಳವಾರ ಅಭಿಮಾನಿಗಳ ದಂಡು ಕಳೆ ತುಂಬಿತು.

ಫೈನಲ್ ಪಂದ್ಯ ನೋಡಲು ಸುಮಾರು ಏಳು ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದರು. ಅದರಲ್ಲಿ ಮೈಸೂರು ತಂಡದ ಅಭಿಮಾನಿಗಳು ಹೆಚ್ಚು ಸಂಖ್ಯೆಯಲ್ಲಿದ್ದರು.

ಸಂಕ್ಷಿಪ್ತ ಸ್ಕೋರು: ಹುಬ್ಬಳ್ಳಿ ಟೈಗರ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 203 (ಮೊಹಮ್ಮದ್ ತಾಹ 72, ಕೃಷ್ಣನ್ ಶ್ರೀಜಿತ್ 38, ಮನೀಷ್ ಪಾಂಡೆ ಔಟಾಗದೆ 50, ಸಿ.ಎ. ಕಾರ್ತಿಕ್ 33ಕ್ಕೆ2) ಮೈಸೂರು ವಾರಿಯರ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 195 (ಆರ್. ಸಮರ್ಥ್ 63, ಎಸ್‌.ಯು. ಕಾರ್ತಿಕ್ 28, ಕರುಣ್ ನಾಯರ್ 37, ವಿದ್ವತ್ ಕಾವೇರಪ್ಪ 40ಕ್ಕೆ2, ಎಲ್. ಮನ್ವಂತ್‌ ಕುಮಾರ್ 32ಕ್ಕೆ3) ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್‌ಗೆ 8 ರನ್‌ಗಳ ಜಯ. ಪಂದ್ಯಶ್ರೇಷ್ಠ: ಮನೀಷ್ ಪಾಂಡೆ, ಸರಣಿಶ್ರೇಷ್ಠ: ಮೊಹಮ್ಮದ್ ತಾಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.