ADVERTISEMENT

ಮಹಾರಾಜ ಟ್ರೋಫಿ | ಚೇತನ್ ಅಜೇಯ ಅರ್ಧಶತಕ: ಬೆಂಗಳೂರು ಬ್ಲಾಸ್ಟರ್ಸ್‌ಗೆ ಜಯ

ಆರ್.ಜಿತೇಂದ್ರ
Published 15 ಆಗಸ್ಟ್ 2025, 0:49 IST
Last Updated 15 ಆಗಸ್ಟ್ 2025, 0:49 IST
   

ಮೈಸೂರು: ಉತ್ತಮ ಬೌಲಿಂಗ್ ದಾಳಿ ಹಾಗೂ ಎಲ್‌.ಆರ್. ಚೇತನ್‌ರ ಅಜೇಯ ಅರ್ಧಶತಕದ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಗುರುವಾರ ಗುಲ್ಬರ್ಗ ಮಿಸ್ಟಿಕ್ಸ್‌ ವಿರುದ್ಧ 5 ವಿಕೆಟ್‌ ಅಂತರದಿಂದ ಜಯಿಸಿ ಟೂರ್ನಿಯಲ್ಲಿ ತನ್ನ ಮೊದಲ ಗೆಲುವು ದಾಖಲಿಸಿತು.

ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಶ್ರೀರಾಮ್‌ ಗ್ರೂಪ್‌ ಮಹಾರಾಜ ಟ್ರೋಫಿ’ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ನೀಡಿದ 113 ರನ್‌ಗಳ ಸಾಧಾರಣ ಗುರಿ ಬೆನ್ನು ಹತ್ತಿದ ಬೆಂಗಳೂರಿಗೆ ಎಲ್‌.ಆರ್. ಚೇತನ್‌ ಆಸರೆ ಆದರು. ಆರಂಭದಲ್ಲಿ ಅಬ್ಬರಿಸಿದ ಅವರು ವಿಕೆಟ್‌ಗಳು ಬೀಳುತ್ತಲೇ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. 48 ಎಸೆತದಲ್ಲಿ 10 ಬೌಂಡರಿ, 3 ಸಿಕ್ಸರ್‌ ಸಹಿತ 75 ರನ್‌ ಗಳಿಸಿ ಅಜೇಯರಾಗಿ ಉಳಿದರು. ಗುಲ್ಬರ್ಗ ಪರ ನಾಯಕ ವೈಶಾಖ್‌ ವಿಜಯ್‌ಕುಮಾರ್ 19ಕ್ಕೆ 3 ವಿಕೆಟ್‌ ಉರುಳಿಸಿದರು.

ಲವೀಶ್ ಆಸರೆ:

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಗುಲ್ಬರ್ಗ ಮಿಸ್ಟಿಕ್ಸ್ ತಂಡವು ಬ್ಯಾಟರ್‌ಗಳ ವೈಫಲ್ಯದಿಂದಾಗಿ 112 ರನ್‌ಗಳ ಸಾಧಾರಣ ಮೊತ್ತಕ್ಕೆ ತೃಪ್ತಿ ಪಟ್ಟಿತು. ಲವೀಶ್‌ ಕೌಶಲ್‌ ಅಜೇಯ ಅರ್ಧಶತಕದ ಮೂಲಕ ತಂಡಕ್ಕೆ ಆಸರೆಯಾದರು.

ADVERTISEMENT

ಮಳೆಯಿಂದಾಗಿ ತೇವಗೊಂಡಿದ್ದ ಮೈದಾನದಲ್ಲಿ ರನ್‌ ಗಳಿಸಲು ಗುಲ್ಬರ್ಗ ಬ್ಯಾಟರ್‌ಗಳು ತಿಣುಕಾಡಿದರು. ಆದರೆ, ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಲವೀಶ್ ಕೌಶಲ್‌ ಬಿರುಸಿನ ಹೊಡೆತಗಳನ್ನು ಒಳಗೊಂಡ ಇನ್ನಿಂಗ್ಸ್ ಕಟ್ಟಿದರು. 30 ಎಸೆತದಲ್ಲಿ 2 ಬೌಂಡರಿ, 5 ಸಿಕ್ಸರ್ ಸಹಿತ ಔಟಾಗದೇ 54 ರನ್‌ ಹೊಡೆದರು.

ಕೊನೆಯ ವಿಕೆಟ್‌ಗೆ ಲವೀಶ್ ಹಾಗೂ ಇಂಪ್ಯಾಕ್ಟ್ ಆಟಗಾರ ಶಶಿಕುಮಾರ್ ಕಾಂಬ್ಳೆ ಸೇರಿ 21 ಎಸೆತದಲ್ಲಿ ಗಳಿಸಿದ 45 ರನ್‌ಗಳು ಇನ್ನಿಂಗ್ಸ್‌ನ ಗರಿಷ್ಠ ಜೊತೆಯಾಟವಾಯಿತು. ತಂಡದ ಮೊತ್ತ ನೂರು ದಾಟಿಸಲೂ ನೆರವಾಯಿತು.

ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ಸತತ 2 ಸಿಕ್ಸರ್‌ನೊಂದಿಗೆ ಭರವಸೆ ಮೂಡಿಸಿದ್ದ ಲವನೀತ್ ಸಿಸೋಡಿಯ (13) ಎರಡನೇ ಓವರ್‌ನಲ್ಲಿ ವಿದ್ಯಾಧರ ಪಾಟೀಲ ಎಸೆತದಲ್ಲಿ ಡೀಪ್‌ ಮಿಡ್‌ ವಿಕೆಟ್‌ನಲ್ಲಿ ಎಲ್‌.ಆರ್. ಚೇತನ್‌ಗೆ ಕ್ಯಾಚಿತ್ತರು. ಮರು ಓವರ್‌ನಲ್ಲೇ ನಿಕಿನ್‌ ಜೋಸ್ (1) ನಿರ್ಗಮಿಸಿದರು. ಉಳಿದವರು ಹೆಚ್ಚು ಹೊತ್ತು ನಿಲ್ಲಲಿಲ್ಲ.

ಬೆಂಗಳೂರು ಪರ ಮೊದಲ ಓವರ್‌ನಲ್ಲಿ 13 ರನ್‌ ನೀಡಿ ದುಬಾರಿ ಆಗಿದ್ದ ಮೊಹ್ಸಿನ್ ಖಾನ್‌ ಉಳಿದ ಮೂರು ಓವರ್‌ನಲ್ಲಿ ಕೇವಲ 5 ರನ್‌ ನೀಡಿ 2 ವಿಕೆಟ್‌ ಉರುಳಿಸಿದರು. ನಾಯಕ ಶುಭಾಂಗ್‌ ಹೆಗ್ಡೆ 10 ರನ್‌ಗೆ 2 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್:

ಗುಲ್ಬರ್ಗ ಮಿಸ್ಟಿಕ್ಸ್‌: 19.5 ಓವರ್‌ಗಳಲ್ಲಿ 112ಕ್ಕೆ ಆಲೌಟ್‌ (ಲವೀಶ್‌ ಕೌಶಲ್‌ ಔಟಾಗದೇ 54, ಲವನೀತ್‌ ಸಿಸೋಡಿಯ 13, ಸ್ಮರಣ್‌ ರವಿಚಂದ್ರನ್‌ 12, ಶುಭಾಂಗ್‌ ಹೆಗ್ಡೆ 10ಕ್ಕೆ 2, ವಿದ್ಯಾಧರ ಪಾಟೀಲ 13ಕ್ಕೆ 2, ಮೊಹ್ಸಿನ್‌ ಖಾನ್‌ 18ಕ್ಕೆ 2, ರೋಹನ್‌ ನವೀನ್‌ 19ಕ್ಕೆ 2 )

ಬೆಂಗಳೂರು ಬ್ಲಾಸ್ಟರ್ಸ್: 14.2 ಓವರ್‌ಗಳಲ್ಲಿ 5 ವಿಕೆಟ್‌ಗೆ 113 (ಎಲ್‌.ಆರ್. ಚೇತನ್‌ ಔಟಾಗದೇ 75, ರೋಹನ್‌ ನವೀನ್ ಔಟಾಗದೇ 16, ವೈಶಾಖ್‌ ವಿಜಯ್‌ಕುಮಾರ್‌ 19ಕ್ಕೆ 3)

ಮೈಸೂರು–ಮಂಗಳೂರು ಪಂದ್ಯ ರದ್ದು
ಗುರುವಾರ ಮೈಸೂರು ವಾರಿಯರ್ಸ್ ಹಾಗೂ ಮಂಗಳೂರು ಡ್ರ್ಯಾಗನ್ಸ್‌ ನಡುವಿನ ಪಂದ್ಯವು ಮಳೆಯಿಂದಾಗಿ ರದ್ದಾಗಿದ್ದು, ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡವು. ಮಧ್ಯಾಹ್ನ ಮಳೆಯಾದ ಕಾರಣ ಪಂದ್ಯವು 3.15ಕ್ಕೆ ಬದಲಾಗಿ ಮಧ್ಯಾಹ್ನ 4ಕ್ಕೆ ಮರು ನಿಗದಿಯಾಯಿತು. ಟಾಸ್‌ ಗೆದ್ದ ಮಂಗಳೂರು ತಂಡವು ಫೀಲ್ಡಿಂಗ್‌ ಆಯ್ದುಕೊಂಡಿತು. ಪಂದ್ಯ ಆರಂಭಕ್ಕೆ ಇನ್ನು 15 ನಿಮಿಷ ಇರುವಾಗ ಮತ್ತೆ ಮಳೆ ಆರಂಭಗೊಂಡಿದ್ದು, ಅರ್ಧಗಂಟೆಗೂ ಹೆಚ್ಚು ಕಾಲ ಸುರಿಯಿತು. ಕ್ರೀಡಾಂಗಣದ ಸಿಬ್ಬಂದಿ ಸಮರೋಪಾದಿಯಲ್ಲಿ ನೀರು ಹೊರಹಾಕಿದರು. ಸಂಜೆ 5.45ಕ್ಕೆ ಮೈದಾನದ ಸ್ಥಿತಿಗತಿ ಪರಿಶೀಲಿಸಿದ ಅಂಪೈರ್‌ಗಳು, ಔಟ್‌ಫೀಲ್ಡ್‌ ಒದ್ದೆಯಾಗಿದ್ದ ಕಾರಣ ಪಂದ್ಯ ರದ್ದುಗೊಳಿಸುವ ನಿರ್ಧಾರ ಪ್ರಕಟಿಸಿದರು.

ಇಂದಿನ ಪಂದ್ಯಗಳು

  • ಶಿವಮೊಗ್ಗ ಲಯನ್ಸ್ - ಬೆಂಗಳೂರು ಬ್ಲಾಸ್ಟರ್ಸ್‌– ಮಧ್ಯಾಹ್ನ 3.15

  • ಹುಬ್ಬಳ್ಳಿ ಟೈಗರ್ಸ್‌- ಮಂಗಳೂರು ಡ್ರ್ಯಾಗನ್ಸ್– ರಾತ್ರಿ 7.15

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.