ADVERTISEMENT

ಮಹಾರಾಜ ಟ್ರೋಫಿ ಕ್ರಿಕೆಟ್: ಹುಬ್ಬಳ್ಳಿ ಟೈಗರ್ಸ್ ಎದುರು ಮಂಗಳೂರು ಯುನೈಟೆಡ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 15:40 IST
Last Updated 7 ಆಗಸ್ಟ್ 2022, 15:40 IST
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈಸೂರು ವಲಯ ಆಯೋಜಿಸಿರುವ ಮಹಾರಾಜ ಟ್ರೋಫಿ ಟಿ20 ಮಂಗಳೂರು ತಂಡದ ಆರ್. ಸಮರ್ಥ್ ಅವರ ಬ್ಯಾಟಿಂಗ್ ವೈಖರಿ. ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈಸೂರು ವಲಯ ಆಯೋಜಿಸಿರುವ ಮಹಾರಾಜ ಟ್ರೋಫಿ ಟಿ20 ಮಂಗಳೂರು ತಂಡದ ಆರ್. ಸಮರ್ಥ್ ಅವರ ಬ್ಯಾಟಿಂಗ್ ವೈಖರಿ. ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.   

ಮೈಸೂರು: ಮಳೆ ಕಾಡಿದ ಪಂದ್ಯದಲ್ಲಿ ನಾಯಕನ ಆಟವಾಡಿದ ಆರ್‌.ಸಮರ್ಥ್‌ ಮಂಗಳೂರು ಯುನೈಟೆಡ್‌ ತಂಡಕ್ಕೆ ಚೊಚ್ಚಲ ಜಯ ತಂದುಕೊಟ್ಟರು.

ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ಮಹಾರಾಜ ಟ್ರೋಫಿಯ ಉದ್ಘಾಟನಾ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್‌ ಅನ್ನು 8 ವಿಕೆಟ್‌ಗಳಿಂದ ಮಂಗಳೂರು ಮಣಿಸಿತು.

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಮಂಗಳೂರು ತಂಡಕ್ಕೆ ವಿಜಯ್ ಕುಮಾರ್‌ ವೈಶಾಖ್‌, ಎಚ್‌.ಎಸ್‌.ಶರತ್‌ ಅವರ ಶಿಸ್ತಿನ ಬೌಲಿಂಗ್‌ ದಾಳಿ ನಡೆಸಿದರಲ್ಲದೆ ತಲಾ ಎರಡು ವಿಕೆಟ್‌ ಉರುಳಿಸಿದರು. ಹುಬ್ಬಳ್ಳಿಗೆ ಲಿಯಾನ್‌ ಖಾನ್‌ (34), ತುಷಾರ್‌ ಸಿಂಗ್‌ (34) ಅಬ್ಬರದಾಟ ಪ್ರದರ್ಶಿಸಿ ನೆರವಾದರು.

ADVERTISEMENT

ಒಂದೇ ಓವರ್‌ನಲ್ಲಿ ಎರಡು ಸಿಕ್ಸರ್, ಫೋರ್‌ ಅನ್ನು ಬೌಂಡರಿಗಟ್ಟುವ ಮೂಲಕ ಎದುರಾಳಿಯಲ್ಲಿ ಭೀತಿ ಹುಟ್ಟಿಸಿದ್ದ ಲಿಯಾನ್‌ ಖಾನ್‌ ಅವರನ್ನು ಶರತ್‌ ಪೆವಿಲಿಯನ್‌ ದಾರಿ ತೋರಿಸಿದರು. ಅಂತಿಮವಾಗಿ ಹುಬ್ಬಳ್ಳಿ 9 ವಿಕೆಟ್‌ ನಷ್ಟಕ್ಕೆ 119 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಹುಬ್ಬಳ್ಳಿಯ ಇನಿಂಗ್ಸ್‌ ಮುಗಿದ ಕೂಡಲೇ ಮಳೆ ಪಂದ್ಯಕ್ಕೆ ಅಡ್ಡಿ ಮಾಡಿತು. ಮತ್ತೆ ಆರಂಭವಾದ ಪಂದ್ಯಕ್ಕೆ 18 ಓವರ್‌ಗಳಲ್ಲಿ 112 ರನ್‌ (ವಿಜೆಡಿ ನಿಯಮದಡಿ) ಗುರಿಯನ್ನು ಮಂಗಳೂರಿಗೆ ನೀಡಲಾಯಿತು.

ಸಮರ್ಥ ಆಟ: ಸಾಧಾರಣ ಗುರಿಯನ್ನು ಬೆನ್ನಟ್ಟಿದ ಮಂಗಳೂರು ತಂಡಕ್ಕೆ ಆರಂಭದಲ್ಲೇ ಆಘಾತ ಉಂಟಾಯಿತು. ಮ್ಯಾಕ್‌ನೇಲ್ ಹಾರ್ಡ್ಲೀ ನೂರನ್ಹಾ ಅವರು 6 ರನ್‌ಗೆ ಫಾರೂಖಿಗೆ ವಿಕೆಟ್‌ ಒಪ್ಪಿಸಿದರು. ನಿಖಿಲ್ ಜೋಸ್‌ (23) ಹಾಗೂ ಅಭಿನವ್‌ ಮನೋಹರ್‌ (25) ಅವರೊಂದಿಗೆ ಕಪ್ತಾನ ಆರ್‌.ಸಮರ್ಥ್‌ (57) ಸುಂದರ ಇನಿಂಗ್ಸ್‌ ಕಟ್ಟಿದರು. ಅವರ ಖಾತೆಯಲ್ಲಿ 6 ಬೌಂಡರಿ, 2 ಭರ್ಜರಿ ಸಿಕ್ಸರ್‌ ಕೂಡ ಸೇರಿದ್ದವು.

ಹುಬ್ಬಳ್ಳಿಯ ನಾಯಕ ಅಭಿಮನ್ಯು ಮಿಥುನ್ ಹೊರತು ಪಡಿಸಿ ವಿ.ಕೌಶಿಕ್‌, ಝೋಹಾರ್‌ ಫಾರೂಖಿ, ಎಂ.ಜಿ.ನವೀನ್‌ ಸೇರಿದಂತೆ ಎಲ್ಲ ಬೌಲರ್‌ಗಳನ್ನು ಆರ್‌.ಸಮರ್ಥ್‌ ದಂಡಿಸಿದರು. 2 ವಿಕೆಟ್‌ ನಷ್ಟಕ್ಕೆ 114 ರನ್‌ಗಳಿಸಿದ ಮಂಗಳೂರು ಯುನೈಟೆಡ್‌ ಗೆಲುವಿನ ನಗೆ ಬೀರಿತು. ಸಮರ್ಥ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.