ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯು ಆಗಸ್ಟ್ 11 ರಿಂದ 27ರವರೆಗೆ ನಡೆಯಲಿದೆ. ಭಾರತ ತಂಡದ ಆಟಗಾರರಾದ ಕರುಣ್ ನಾಯರ್, ಪ್ರಸಿದ್ಧಕೃಷ್ಣ ಮತ್ತು ಮಯಂಕ್ ಅಗರವಾಲ್ ಅವರು ಟೂರ್ನಿಯಲ್ಲಿ ಆಡಲಿದ್ದಾರೆ. ಅವರು ಹೋದ ವರ್ಷ ಆಡಿದ್ದ ತಂಡಗಳಲ್ಲಿಯೇ ಮುಂದುವರಿಯುವರು.
ಆದರೆ ಈ ಬಾರಿ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶವಿರುವುದಿಲ್ಲ. ಜೂನ್ 4ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ಟ್ರೋಫಿ ವಿಜಯೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ದುರ್ಘಟನೆ ನಡೆದಿತ್ತು. ಅದರಲ್ಲಿ 11 ಜನರು ದುರ್ಮರಣ ಹೊಂದಿದ್ದರು.
ಕೆಎಸ್‌ಸಿಎ ಕಾರ್ಯದರ್ಶಿಯಾಗಿದ್ದ ಎ. ಶಂಕರ್ ಮತ್ತು ಖಜಾಂಚಿ ಇ.ಎಸ್. ಜಯರಾಮ್ ಅವರು ಈ ಘಟನೆಯ ನಂತರ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಪ್ರಕರಣದ ಕುರಿತ ವಿಚಾರಣೆಯು ರಾಜ್ಯ ಹೈಕೋರ್ಟ್ ಮತ್ತು ಕೇಂದ್ರಿಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಯಲ್ಲಿ ನಡೆಯುತ್ತಿದೆ.
ಆಟಗಾರರ ಹರಾಜು ಪ್ರಕ್ರಿಯೆಯು ಜುಲೈ 15ರಂದು ನೆಯಲಿದೆ. ಪ್ರತಿಯೊಂದು ತಂಡವು ಕನಿಷ್ಠ 16 ಮತ್ತು ಗರಿಷ್ಠ 18 ಆಟಗಾರರನ್ನು ಹೊಂದಬಹುದಾಗಿದೆ. ಒಟ್ಟು ಆರು ತಂಡಗಳು ಆಡಲಿದ್ದು, ಟೂರ್ನಿಯ ಎಲ್ಲ ಪಂದ್ಯಗಳೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.