ADVERTISEMENT

ಮಹಾರಾಜ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌: ಚುಟುಕು ಕ್ರಿಕೆಟ್‌ ಹಬ್ಬಕ್ಕೆ ಸಜ್ಜು

‘ಮಹಾರಾಜ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ’ ಇಂದಿನಿಂದ

ಆರ್.ಜಿತೇಂದ್ರ
Published 11 ಆಗಸ್ಟ್ 2025, 0:54 IST
Last Updated 11 ಆಗಸ್ಟ್ 2025, 0:54 IST
ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಭಾನುವಾರ ಮಂಗಳೂರು ಡ್ರ್ಯಾಗನ್ಸ್ ತಂಡದ ಆಟಗಾರರು ಅಭ್ಯಾಸ ನಡೆಸಿದರು –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಭಾನುವಾರ ಮಂಗಳೂರು ಡ್ರ್ಯಾಗನ್ಸ್ ತಂಡದ ಆಟಗಾರರು ಅಭ್ಯಾಸ ನಡೆಸಿದರು –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.   

ಮೈಸೂರು: ‘ಮಹಾರಾಜ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ’ಯ ನಾಲ್ಕನೇ ಆವೃತ್ತಿಯ ಆತಿಥ್ಯಕ್ಕೆ ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಪ್ರೇಕ್ಷಕರನ್ನು ನಿರ್ಬಂಧಿಸಿ ಪಂದ್ಯಗಳು ನಡೆಯಲಿವೆ.

ಸೋಮವಾರದಿಂದ (ಆ. 11) ಆರಂಭಗೊಂಡು ಆ. 28ರವರೆಗೆ ನಡೆಯಲಿರುವ ಕ್ರಿಕೆಟ್‌ನ ಚುಟುಕು ಆವೃತ್ತಿಯ ಹಣಾಹಣಿಯಲ್ಲಿ ಆರು ತಂಡಗಳು ಪ್ರಶಸ್ತಿಗಾಗಿ ಸೆಣೆಸಲಿವೆ. ಕೆಪಿಎಲ್‌ಗೆ ಬದಲಾಗಿ 2022ರಿಂದ ‘ಮಹಾರಾಜ ಟ್ರೋಫಿ’ ಹೆಸರಿನಲ್ಲಿ ಟೂರ್ನಿ ನಡೆದಿದ್ದು, ಗುಲ್ಬರ್ಗ ಮಿಸ್ಟಿಕ್ಸ್, ಹುಬ್ಬಳ್ಳಿ ಟೈಗರ್ಸ್ ಹಾಗೂ ಮೈಸೂರು ವಾರಿಯರ್ಸ್‌ ತಂಡಗಳು ತಲಾ ಒಂದೊಂದು ಬಾರಿ ಪ್ರಶಸ್ತಿ ಎತ್ತಿ ಹಿಡಿದಿವೆ.

ಕಾಲ್ತುಳಿತ ಪ್ರಕರಣದ ತನಿಖೆಯ ಕಾರಣಕ್ಕೆ ಟೂರ್ನಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮೈಸೂರಿಗೆ ಸ್ಥಳಾಂತರಗೊಂಡಿದೆ. ಪ್ರೇಕ್ಷಕರ ಪ್ರವೇಶಕ್ಕೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗುತ್ತಿದ್ದು, ಸಾಂಸ್ಕೃತಿಕ ನಗರಿಯ ಪ್ರೇಕ್ಷಕರಿಗೆ ಕ್ರಿಕೆಟ್‌ ರಸದೌತಣ ಸವಿಯುವ ಅವಕಾಶ ಇಲ್ಲವಾಗಿದೆ. ಆದಾಗ್ಯೂ ಪಂದ್ಯ ಟಿ.ವಿ. ಚಾನಲ್‌ ಮೂಲಕ ನೇರ ಪ್ರಸಾರವಾಗಲಿದೆ.

ADVERTISEMENT

ಹೇಗಿದೆ ಪಿಚ್‌: ‘ಗಂಗೋತ್ರಿ ಗ್ಲೇಡ್ಸ್’ ಎಂದೂ ಹೆಸರಾದ ಈ ಕ್ರೀಡಾಂಗಣ ಸುತ್ತ ಹಸಿರು ಹೊದ್ದು ನಿಂತಿದ್ದು, ಕ್ರಿಕೆಟ್‌ಗೆ ಹೇಳಿ ಮಾಡಿಸಿದಂತಿದೆ. ಬ್ಯಾಟಿಂಗ್ ಸ್ನೇಹಿಯಾದ ನಾಲ್ಕು ಪಿಚ್‌ಗಳನ್ನು ಸಿದ್ಧಪಡಿಸಲಾಗಿದೆ.

ಆದರೆ, ಭಾನುವಾರವೂ ಮೈಸೂರಿನಲ್ಲಿ ಜೋರು ಮಳೆಯಾಗಿದ್ದು, ಕ್ರಿಕೆಟ್ ಪ್ರಿಯರ ಆತಂಕಕ್ಕೆ ಕಾರಣವಾಗಿದೆ. ಮೈದಾನದ ಶೇ 90ರಷ್ಟು ಭಾಗವನ್ನು ಹೊದಿಕೆಯಿಂದ ಮುಚ್ಚಲಾಗಿದ್ದು, ಹೆಚ್ಚು ಹಾನಿಯಾಗದಂತೆ ನೋಡಿಕೊಳ್ಳಲಾಗಿದೆ. ಸೋಮವಾರವೂ ಮಳೆ ಮುಂದುವರಿದಲ್ಲಿ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಪ್ರತಿದಿನ ಮಧ್ಯಾಹ್ನ 3.15 ಹಾಗೂ ರಾತ್ರಿ 7.15ಕ್ಕೆ ಪಂದ್ಯಗಳು ಆರಂಭ ಆಗಲಿವೆ. ಪ್ರತಿ ತಂಡವು ತಲಾ 5 ಹಗಲು ಹಾಗೂ 5 ರಾತ್ರಿ ಪಂದ್ಯಗಳನ್ನು ಆಡಲಿದೆ.

ಮೊದಲ ಹಣಾಹಣಿ: ಟೂರ್ನಿಯ ಮೊದಲ ಪಂದ್ಯದಲ್ಲಿ ಗುಲ್ಬರ್ಗ  ಮಿಸ್ಟಿಕ್ಸ್ ಹಾಗೂ ಮಂಗಳೂರು ಡ್ರ್ಯಾಗನ್ಸ್‌ ಮುಖಾಮುಖಿ ಆಗುತ್ತಿವೆ. ಕರ್ನಾಟಕ ರಣಜಿ ತಂಡದ ಆಟಗಾರ ವೈಶಾಖ ವಿಜಯ್‌ ಕುಮಾರ್ ಜೊತೆಗೆ ಕಳೆದ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದ ಲವಿಶ್ ಕೌಶಲ್‌, ವೇಗಿ ಮೊನಿಷ್ ರೆಡ್ಡಿ ಗುಲ್ಬರ್ಗಾ ತಂಡದ ಬೌಲಿಂಗ್‌ ಅಸ್ತ್ರವಾಗಿದ್ದಾರೆ. ಅನುಭವಿ ಶ್ರೇಯಸ್ ಗೋಪಾಲ್‌ ಮಂಗಳೂರು ಡ್ರ್ಯಾಗನ್ಸ್‌ನ ಶಕ್ತಿಯಾಗಿದ್ದು, ಉಭಯ ತಂಡಗಳೂ ಯುವ ಆಟಗಾರರನ್ನು ಹೊಂದಿವೆ.

ಹೊನಲು ಬೆಳಕಿನಲ್ಲಿ ನಡೆಯಲಿರುವ ದಿನದ 2ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್‌ ಹಾಗೂ ಬೆಂಗಳೂರು ಬ್ಲಾಸ್ಟರ್ಸ್‌ ಸೆಣೆಸಲಿವೆ. ಕಳೆದ ಬಾರಿಯ ಚಾಂಪಿಯನ್ ಮೈಸೂರು ತಂಡವನ್ನು ಗಾಯಾಳು ಕರುಣ್‌ ನಾಯರ್ ಅನುಪಸ್ಥಿತಿಯಲ್ಲಿ ಸ್ಪೋಟಕ ಬ್ಯಾಟರ್ ಮನೀಷ್‌ ಪಾಂಡೆ ಮುನ್ನಡೆಸುತ್ತಿದ್ದು, ಕೆ. ಗೌತಮ್‌, ಯಶೋವರ್ಧನ್‌ ಪರಂತಾಪ್‌ ಅವರಂತಹ ಆಲ್‌ರೌಂಡರ್‌ಗಳನ್ನು ಒಳಗೊಂಡಿದೆ. ವೇಗದ ಬೌಲಿಂಗ್‌ನಲ್ಲಿ ಪ್ರಸಿದ್ಧ ಕೃಷ್ಣ ಬಲ ತುಂಬಲಿದ್ದಾರೆ.

ಬೆಂಗಳೂರು ಬ್ಲಾಸ್ಟರ್ಸ್ ಪರ ನಾಯಕ ಮಯಂಕ್‌ ಅಗರವಾಲ್‌ ಬ್ಯಾಟಿಂಗ್ ಬೆನ್ನೆಲುಬಾಗಿದ್ದರೆ, ಬೌಲಿಂಗ್‌ನಲ್ಲಿ ವೇಗಿ ವಿದ್ಯಾಧರ ಪಾಟೀಲ, ಸ್ಪಿನ್ನರ್ ಶುಭಾಂಗ್‌ ಹೆಗ್ಡೆ ಅವರ ಬಲವಿದೆ. ಉಭಯ ತಂಡಗಳ ನಡುವೆ ತೀವ್ರ ಹಣಾಹಣಿ ಏರ್ಪಡಲಿದೆ.


ಇಂದಿನ ಪಂದ್ಯಗಳು

ಗುಲ್ಬರ್ಗಾ ಮಿಸ್ಟಿಕ್ಸ್ V/S ಮಂಗಳೂರು ಡ್ರ್ಯಾಗನ್ಸ್‌- ಸಮಯ: ಮಧ್ಯಾಹ್ನ 3.15

ಮೈಸೂರು ವಾರಿಯರ್ಸ್‌ V/S ಬೆಂಗಳೂರು ಬ್ಲಾಸ್ಟರ್ಸ್‌– ಸಮಯ: ಸಂಜೆ 7.15

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.