ಬೆಂಗಳೂರು: ಮೈಸೂರು ವಾರಿಯರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡಗಳು ಚೊಚ್ಚಲ ಆವೃತ್ತಿಯ ಮಹಾರಾಣಿ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪ್ಲೇ ಆಫ್‌ಗೆ ಲಗ್ಗೆ ಹಾಕಿದವು.
ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಮೈಸೂರು ತಂಡವು ಆರು ವಿಕೆಟ್‌ಗಳಿಂದ ಶಿವಮೊಗ್ಗ ಲಯನೆಸ್ ತಂಡವನ್ನು ಮಣಿಸಿತು. ಈ ಮೂಲಕ ಸತತ ನಾಲ್ಕನೇ ಗೆಲುವು ದಾಖಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶಿವಮೊಗ್ಗ ತಂಡವು, ವಾರಿಯರ್ಸ್‌ನ ಸಂಘಟಿತ ಬೌಲಿಂಗ್ ದಾಳಿ ಎದುರು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 107 ರನ್ ಗಳಿಸಿತು. ವಿಕೆಟ್ ಕೀಪರ್ ಸೌಮ್ಯಾ ವರ್ಮಾ 31 ರನ್ ಗಳಿಸಿ ಕೊಂಚ ಹೋರಾಟ ತೋರಿದರು.
ಮೈಸೂರು ತಂಡವು 19.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 109 ರನ್ ಪೇರಿಸಿ ಜಯ ಗಳಿಸಿತು. ರಚಿತಾ ಹತ್ವಾರ್ 36 ರನ್ ಗಳಿಸಿದರೆ, ಶಿಶಿರಾ ಅಜೇಯ 29 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ದಿನದ ಮತ್ತೊಂದು ಪಂದ್ಯದಲ್ಲಿ ಬಿ.ಜಿ. ತೇಜಸ್ವಿನಿ ಅವರ ಆಲ್‌ರೌಂಡ್ ಆಟದ ಬಲದಿಂದ ಹುಬ್ಬಳ್ಳಿ ಟೈಗರ್ಸ್ ತಂಡವು 51 ರನ್‌ಗಳಿಂದ ಮಂಗಳೂರು ಡ್ರ್ಯಾಗನ್ಸ್ ತಂಡವನ್ನು ಸೋಲಿಸಿತು. ಇದರೊಂದಿಗೆ ಹುಬ್ಬಳ್ಳಿ ತಂಡ ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹುಬ್ಬಳ್ಳಿ ತಂಡವು ತೇಜಸ್ವಿನಿ (ಔಟಾಗದೇ 47 ರನ್, 24ಎ, 4x1, 6x4) ಅವರ ಆಟದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು. ಹುಬ್ಬಳ್ಳಿ ಬೌಲರ್‌ಗಳು ಮಂಗಳೂರು ತಂಡವನ್ನು 91 ರನ್‌ಗಳಿಗೆ ಕಟ್ಟಿಹಾಕಿದರು. ಪ್ರಿಯಾ ಚವ್ಹಾಣ್ ಮೂರು ವಿಕೆಟ್ ಕಬಳಿಸಿದರೆ, ತೇಜಸ್ವಿನಿ ಹಾಗೂ ರಾಮೇಶ್ವರಿ ತಲಾ 2 ವಿಕೆಟ್ ಪಡೆದುಕೊಂಡರು.
ಸಂಕ್ಷಿಪ್ತ ಸ್ಕೋರು: ಶಿವಮೊಗ್ಗ ಲಯನ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 107 (ಸೌಮ್ಯಾ ವರ್ಮಾ 31, ಅಹ್ಲಾಂ 19ಕ್ಕೆ2, ವಂದಿತಾ ಕೃಷ್ಣರಾವ್ 21ಕ್ಕೆ2, ಪೂಜಾ ಕುಮಾರಿ 9ಕ್ಕೆ2) ಮೈಸೂರು ವಾರಿಯರ್ಸ್: 19.3 ಓವರ್‌ಗಳಲ್ಲಿ 4 ವಿಕೆಟ್‌ಗೆ 109 (ರಚಿತಾ ಹತ್ವಾರ್ 36, ಶಿಶಿರಾ 29, ಚಿನ್ಮಯಿ ಶಿವಾನಂದ್ 33ಕ್ಕೆ2)
ಹುಬ್ಬಳ್ಳಿ ಟೈಗರ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 142 (ಬಿ.ಜಿ. ತೇಜಸ್ವಿನಿ ಔಟಾಗದೇ 47, ಶ್ರೇಯಾ ಚವ್ಹಾಣ್ 26, ಭಕ್ತಿ ಶೆಟ್ಟಿ 29ಕ್ಕೆ1) ಮಂಗಳೂರು ಡ್ರ್ಯಾಗನ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 91 (ಪ್ರೇರಣಾ ಜಿ.ಆರ್. 16, ಪ್ರಿಯಾ ಚವ್ಹಾಣ್ 19ಕ್ಕೆ3, ತೇಜಸ್ವಿನಿ 13ಕ್ಕೆ2, ರಾಮೇಶ್ವರಿ 21ಕ್ಕೆ2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.